ಶ್ರಬಂಟಿ ಚಟರ್ಜಿ
ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಗೂ ಮೊದಲು ಬಿಜೆಪಿ ಸೇರ್ಪಡೆಯಾಗಿದ್ದ ಬೆಂಗಾಳಿ ನಟಿ ಶ್ರಬಂತಿ ಚಟರ್ಜಿ ಇದೀಗ ಕಮಲ ಪಕ್ಷವನ್ನು ತೊರೆದಿದ್ದಾರೆ. ಕಳೆದ ವಿಧಾನಸಭೆ ಚುನಾವಣೆ ಪೂರ್ವ ಅಂದರೆ ಮಾರ್ಚ್ 2ರಂದು ಬಿಜೆಪಿ ಸೇರಿದ್ದ ಶ್ರಬಂತಿ, ಚುನಾವಣೆಯಲ್ಲಿ ಟಿಎಂಸಿ ಅಭ್ಯರ್ಥಿ ವಿರುದ್ಧ ಸ್ಪರ್ಧಿಸಿ ಸೋಲುಂಡಿದ್ದರು.
ಇದೀಗ ತಮ್ಮ ರಾಜೀನಾಮೆ ವಿಚಾರವನ್ನು ಟ್ವೀಟ್ ಮಾಡಿ ತಿಳಿಸಿದ್ದಾರೆ. ನಾನು ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದೆ. ಆದರೆ ಇದೀಗ ಆ ಪಕ್ಷವನ್ನು ಬಿಡುತ್ತಿದ್ದೇನೆ. ಬಂಗಾಳದ ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿ ಪ್ರಾಮಾಣಿಕತೆ ತೋರುತ್ತಿಲ್ಲ. ಯಾವುದೇ ಉಪಕ್ರಮಗಳನ್ನೂ ತೆಗೆದುಕೊಳ್ಳುತ್ತಿಲ್ಲ. ಈ ಕಾರಣಕ್ಕೆ ಬೇಸತ್ತು ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.
ನಟಿ ಬಿಜೆಪಿಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಇನ್ನೊಂದು ಊಹಾಪೋಹ ಶುರುವಾಗಿದೆ. ಶ್ರಬಂತಿ ತೃಣಮೂಲ ಕಾಂಗ್ರೆಸ್ಗೆ ಸೇರ್ಪಡೆಯಾಗುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಈ ಬಗ್ಗೆ ಪತ್ರಕರ್ತರೊಬ್ಬರು ಶ್ರಬಂತಿ ಬಳಿ ಪ್ರಶ್ನಿಸಿದಾಗ, ಎಲ್ಲಕ್ಕೂ ಕಾಲವೇ ಉತ್ತರ ಕೊಡುತ್ತದೆ ಎಂದು ಅವರು ಹೇಳಿದ್ದಾರೆ. ವಿಧಾನಸಭೆ ಚುನಾವಣೆಗೂ ಮೊದಲು ಅವರು ಬಿಜೆಪಿ ನಾಯಕರಾದ ಕೈಲಾಶ್ ವಿಜಯ್ವರ್ಗಿಯಾ, ದಿಲೀಪ್ ಘೋಷ್ ಅವರೊಂದಿಗೆ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡಿದ್ದರು. ಬೆಹಾಲಾ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಇವರು ಕೇವಲ 60 ಸಾವಿರ ಮತಗಳಿಸಿ ಟಿಎಂಸಿಯ ಪಾರ್ಥ ಚಟರ್ಜಿ ವಿರುದ್ಧ ಸೋತಿದ್ದಾರೆ. ಇನ್ನು ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಸೇರಿದ್ದ ಹಲವು ಟಿಎಂಸಿ ನಾಯಕರೂ ಕೂಡ ಇದೀಗ ವಾಪಸ್ ಮಾತೃಪಕ್ಷಕ್ಕೆ ತೆರಳುತ್ತಿದ್ದಾರೆ.
ಇದನ್ನೂ ಓದಿ: ‘ಅಪ್ಪು ಮಾಮನ ನೆನಪಲ್ಲಿ ‘ಮದಗಜ’ ಸಾಂಗ್ ರಿಲೀಸ್ ಮಾಡಿದೀವಿ’; ಸುದ್ದಿಗೋಷ್ಠಿಯಲ್ಲಿ ಶ್ರೀಮುರಳಿ ಮಾತು