ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಸಾವು ಪ್ರಕರಣದ ತನಿಖೆ ಸಿಬಿಐಗೆ ವಹಿಸಲು ಗೃಹ ಸಚಿವಾಲಯ ನಿರ್ಧಾರ: ವರದಿ | Home Ministry recommends CBI probe on death of BJP leader Sonali Phogat


ತನಿಖೆಯನ್ನು ಸಿಬಿಐಗೆ ವಹಿಸುವಂತೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಸಚಿವಾಲಯಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ.

ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಸಾವು ಪ್ರಕರಣದ ತನಿಖೆ ಸಿಬಿಐಗೆ ವಹಿಸಲು ಗೃಹ ಸಚಿವಾಲಯ ನಿರ್ಧಾರ: ವರದಿ

ಸೋನಾಲಿ ಫೋಗಟ್

ಬಿಜೆಪಿ ನಾಯಕಿ ಸೋನಾಲಿ ಫೋಗಟ್ (Sonali Phogat) ಸಾವು ಪ್ರಕರಣದ ತನಿಖೆಯನ್ನು ಕೇಂದ್ರ ತನಿಖಾ ದಳಕ್ಕೆ ಹಸ್ತಾಂತರಿಸಲು ಕೇಂದ್ರ ಗೃಹ ಸಚಿವಾಲಯ (Home Ministry) ನಿರ್ಧರಿಸಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ತನಿಖೆಯನ್ನು ಸಿಬಿಐಗೆ ವಹಿಸುವಂತೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಸಚಿವಾಲಯಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ.ನಾನು ರಾಜ್ಯ ಪೊಲೀಸರ ಬಗ್ಗೆ ಸಂಪೂರ್ಣ ವಿಶ್ವಾಸ ಹೊಂದಿದ್ದು, ತನಿಖೆ ಉತ್ತಮವಾಗಿ ನಡೆಯುತ್ತಿದೆ ಎಂದು ಸಾವಂತ್ ಹೇಳಿದ್ದಾರೆ. ಆದರೆ ಹರ್ಯಾಣದ ಜನರಿಂದ ಪುನರಾವರ್ತಿತ ಬೇಡಿಕೆಗಳ ನಂತರ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಬೇಕು ಎಂದು ಗೃಹ ಸಚಿವ ಅಮಿತ್ ಷಾ ಅವರಿಗೆ ಪತ್ರ ಬರೆಯುವುದಾಗಿ ಅವರು ಹೇಳಿದ್ದಾರೆ . ಫೋಗಟ್ ಸಾವು ಹೇಗೆ ಸಂಭವಿಸಿತು ಎಂದು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದ ಕುಟುಂಬ ಈ ಪ್ರಕರಣದ ಬಗ್ಗೆ ಕೇಂದ್ರ ಏಜೆನ್ಸಿ ತನಿಖೆಗೆ ಒತ್ತಾಯಿಸುತ್ತಿದ್ದಾರೆ.

ಗೋವಾ ಪೊಲೀಸರು ಪ್ರಕರಣದ ಬಗ್ಗೆ ಅತ್ಯುತ್ತಮ ರೀತಿಯಲ್ಲಿ ತನಿಖೆ ಮಾಡಿದ್ದು ಕೆಲವು ಪ್ರಮುಖ ಸುಳಿವುಗಳನ್ನು ಸಹ ಪಡೆದಿದ್ದಾರೆ ಎಂದು ಸಾವಂತ್ ಪಣಜಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಆದರೆ ಹರ್ಯಾಣದ ಜನರು ಮತ್ತು ಸೋನಾಲಿ ಫೋಗಟ್ ಅವರ ಮಗಳ ಬೇಡಿಕೆಯಿಂದಾಗಿ, ಈ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವಂತೆ ನಾವು ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆಯಲು ನಿರ್ಧರಿಸಿದ್ದೇವೆ ಎಂದು ಸಾವಂತ್ ಹೇಳಿದ್ದಾರೆ. ಅದೇ ವೇಳೆ ಕೇಂದ್ರ ಗೃಹ ಸಚಿವಾಲಯಕ್ಕೆ ಖುದ್ದಾಗಿ ಪತ್ರ ಬರೆಯುತ್ತೇನೆ ಎಂದಿದ್ದಾರೆ ಗೋವಾ ಸಿಎಂ.

42 ವರ್ಷದ ಬಿಜೆಪಿ ನಾಯಕಿ ಫೋಗಟ್ ಹೃದಯಾಘಾತದಿಂದ ಸಾವಿಗೀಡಾಗಿರುವುದಾಗಿ ಪೊಲೀಸರು ಆರಂಭದಲ್ಲಿ ಹೇಳಿದ್ದರು. ಆಮೇಲೆ ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿದ್ದಾರೆ. ಆದರೆ, ಸೋನಾಲಿ ಫೋಗಟ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಸಹೋದರಿಯರು ಹೇಳಿದ್ದಾರೆ. ಅವಳು ಫೋನ್‌ನಲ್ಲಿ “ಏನೋ ಹೇಳುವವಳಿದ್ದಳು” ಎಂದು ಅವರು ಹೇಳಿದ್ದಾರೆ.

ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮಧ್ಯಪ್ರವೇಶಿಸಿದ ನಂತರ, ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿದ್ದರು. ಆಕೆಯ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ, “ದೇಹದ ಮೇಲೆ ಅನೇಕ ಗಾಯಗಳಿವೆ” ಎಂದು ಬೆಳಕಿಗೆ ಬಂದಿದೆ. ಸಾವಿನ ಕಾರಣವನ್ನು ಪೊಲೀಸರು ತನಿಖೆ ಮಾಡಬೇಕಾಗಿದೆ ಎಂದು ವರದಿ ಹೇಳಿದೆ.

ಎರಡು ಭದ್ರತಾ ಕ್ಯಾಮರಾ ವಿಡಿಯೊಗಳು ಆಕೆಯ ಸಾವಿನ ಸಂದರ್ಭಗಳ ಬಗ್ಗೆ ಊಹಾಪೋಹಗಳಿಗೆ  ಒತ್ತು ನೀಡುವಂತೆ ಮಾಡಿದೆ. ಒಂದು ವಿಡಿಯೊದಲ್ಲಿ ಗೋವಾದ ನೈಟ್‌ಕ್ಲಬ್‌ನಿಂದ ಹೊರಬರುವ ದಾರಿಯಲ್ಲಿ ಸೋನಾಲಿ ಫೋಗಟ್ ಒದ್ದಾಡುತ್ತಿರುವುದನ್ನು ತೋರಿಸುತ್ತಿದೆ. ಇನ್ನೊಂದು ಕ್ಯಾಮೆರಾದಲ್ಲಿ ಡ್ಯಾನ್ಸ್ ಫ್ಲೋರ್‌ನಲ್ಲಿ ಫೋಗಟ್ ಅವರಿಗೆ ಬಲವಂತವಾಗಿ ಏನೋ ಕುಡಿಸುತ್ತಿರುವುದನ್ನು ತೋರಿಸಿದೆ.

ಈ ಹಿಂದೆ ಗೋವಾದಲ್ಲಿ ಯಾವುದೇ ವಾಣಿಜ್ಯ ಚಟುವಟಿಕೆಗಳು ನಡೆಯುವುದಿಲ್ಲ ಎಂಬ ಷರತ್ತಿನ ಮೇಲೆ, ಕರ್ಲೀಸ್ ರೆಸ್ಟೋರೆಂಟ್ ಅನ್ನು ಕೆಡವಲು ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿತ್ತು. ಇದೇ ರೆಸ್ಟೋರೆಂಟ್ ನಲ್ಲಿ ಸೋನಾಲಿ ಫೋಗಟ್ ಮಾದಕ ದ್ರವ್ಯ ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಫೋಗಟ್ ಅವರ ಇಬ್ಬರು ಸಹಾಯಕರು ಸೇರಿದಂತೆ ಐವರನ್ನು ಗೋವಾ ಪೊಲೀಸರು ಬಂಧಿಸಿದ್ದರು. ಆಕೆಯ ಇಬ್ಬರು ಸಹಾಯಕರ ವಿರುದ್ಧ ಪೊಲೀಸರು ಕೊಲೆ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.