ಬೆಂಗಳೂರು: ರಾಜ್ಯ ಬಿಜೆಪಿ ವಿರುದ್ಧ ಹೋರಾಟಕ್ಕೆ ಸನ್ನದ್ಧವಾಗಿರೋ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ಸಿಎಂ ಇಬ್ರಾಹಿಂ ಜಾತ್ಯಾತೀತ ಸಲಹೆ ನೀಡಿದ್ದಾರೆ. ಇಬ್ರಾಹಿಂ ಅವರ ಈ ಸಲಹೆಯನ್ನ ಮಾಜಿ ಸಿಎಂ ಸ್ವೀಕರಿಸಿ, ಮತ್ತೊಂದು ಹೊಸ ಅಧ್ಯಾಯ ಬರೆಯುತ್ತಾರೆ ಅನ್ನೋ ಚರ್ಚೆ ರಾಜಕೀಯ ವಲಯದಲ್ಲಿ ಇದೀಗ ಶುರುವಾಗಿದೆ.

ಕಾಂಗ್ರೆಸ್ ಪಕ್ಷದ ಶಾಸಕರ ವೀಡಿಯೋ ‌ಕಾನ್ಪರೆನ್ಸ್ ಸಭೆಯಲ್ಲೇ ಸಿದ್ದರಾಮಯ್ಯಗೆ ಇಬ್ರಾಹಿಂ ಈ ಸಲಹೆಯನ್ನ ನೀಡಿದ್ದಾರೆ. ಕೋವಿಡ್ ನಿರ್ವಹಣೆಯಲ್ಲಿ ವಿಫಲವಾಗಿರೋ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕಿದೆ ಎಂದು ಅವರು ಸಲಹೆ ನೀಡಿದ್ದಾರಂತೆ. ಈ ಬಗ್ಗೆ ಕಂಪ್ಲೀಟ್ ಡೀಟೇಲ್ಸ್​ ನ್ಯೂಸ್​ಫಸ್ಟ್​ಗೆ ಲಭ್ಯವಾಗಿದೆ.

ಸಿದ್ದರಾಮಯ್ಯಗೆ ಇಬ್ರಾಹಿಂ ಕೊಟ್ಟ ಜಾತ್ಯಾತೀತ ಸಲಹೆ ಏನು..?
ಕೋವಿಡ್ ನಿರ್ವಹಣೆಯಲ್ಲಿ ವಿಫಲವಾಗಿರೋ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ಮಾಡೋದಷ್ಟೇ ಮುಖ್ಯ ಅಲ್ಲ, ಹೇಗೆ ಹೋರಾಟ ಮಾಡ್ತೀವಿ ಅನ್ನೋದೂ ಮುಖ್ಯವಾಗಿದೆ. ಬಿಜೆಪಿ ಸರ್ಕಾರದ ವಿರುದ್ಧ ಕೇವಲ ಪಕ್ಷದ ನೆಲೆಗಟ್ಟಿನಲ್ಲಿ ಹೋರಾಟ ಮಾಡಿದರೆ ಸಾಲದು. ಪ್ರಮುಖ ವಿರೋಧ ಪಕ್ಷವಾಗಿರೋ ಕಾಂಗ್ರೆಸ್, ಉಳಿದೆಲ್ಲ ವಿಪಕ್ಷಗಳನ್ನೂ, ಜಾತ್ಯಾತೀತ ಶಕ್ತಿಗಳನ್ನೂ ಒಗ್ಗೂಡಿಸಿಕೊಂಡು ಹೋರಾಟ ಮಾಡಬೇಕು.

ಜಾತ್ಯಾತೀತ ಶಕ್ತಿಗಳು ಒಗ್ಗೂಡಿದರೆ ಮಾತ್ರ ಜನರಿಗೆ ಹತ್ತಿರವಾಗಲು, ನಿಜವಾಗಿಯೂ ಜನರ ಮನಸ್ಸಿನಲ್ಲಿ ನೆಲೆಯೂರಲು ಸಾಧ್ಯ. ಹೀಗಾಗಿ ಬಿಜೆಪಿ ವಿರುದ್ಧ ಹೋರಾಡುವಾಗ ಜಾತ್ಯಾತೀತ ಶಕ್ತಿಗಳ ಜೊತೆ ಸೇರಿಕೊಂಡೇ ಹೋರಾಟ ಮಾಡಬೇಕು. ಈ ಮೂಲಕ ಪರೋಕ್ಷವಾಗಿ ಜೆಡಿಎಸ್ ಪಕ್ಷದ ಜೊತೆ ಸೇರಿ ಹೋರಾಟ ರೂಪಿಸುವಂತೆ ಇಬ್ರಾಹಿಂ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯರ ಪ್ರತಿಕ್ರಿಯೆ ಏನು?
ಇಬ್ರಾಹಿಂ ಸಲಹೆ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಯಾವುದೇ ಪ್ರತಿಕ್ರಿಯೆ ನೀಡದೇ ಸುಮ್ಮನಾಗಿದ್ದಾರಂತೆ. ಸಿದ್ದರಾಮಯ್ಯ ಮೌನದ ಅರ್ಥವೇ ನಿಗೂಢವಾಗಿದೆ. ಪ್ರತಿಕ್ರಿಯೆ ನೀಡದ್ದು ತಿರಸ್ಕಾರ ಭಾವವೋ..? ಅಥವಾ ಮೌನಂ ಸಮ್ಮತಿ‌ ಲಕ್ಷಣಂ ಎಂಬ ಅರ್ಥವೋ? ಏನನ್ನೂ ಹೇಳದೇ ಮೌನವಾಗಿದ್ದುಕೊಂಡೇ ಜಾಣತನ ಮಾಡಿದ್ರಾ ವಿಪಕ್ಷ ‌ನಾಯಕ ಅಂತ ರಾಜಕೀಯ ವಲಯದಲ್ಲಿ ಚರ್ಚೆಯಾಗ್ತಿದೆ. ಯಾಕಂದ್ರೆ ಕಾಂಗ್ರೆಸ್​ ಮೇಲೆ ಆಸೆ ಹೊಂದಿರುವ ಇಬ್ರಾಹಿಂಗೆ ಜೆಡಿಎಸ್​ ಮೇಲೆ ಪ್ರೀತಿ ಇದೆ. ಹೀಗಾಗಿ ಇಬ್ರಾಹಿಂ ಅವರ ಮಾತಿನ ಒಳಮರ್ಮ​​ ಏನು ಅನ್ನೋದು ತಿಳಿದುಕೊಳ್ಳಬೇಕಾಗಿದೆ.

-ವೀರೇಂದ್ರ ಉಪ್ಪುಂದ, ಪೊಲಿಟಿಕಲ್ ಬ್ಯೂರೋ

The post ಬಿಜೆಪಿ ಬಗ್ಗು ಬಡಿಯಲು ಇಬ್ರಾಹಿಂ ಹೊಸ ಅಸ್ತ್ರ.. ‘ಮೌನವೇ ಜಾಣ್ಮೆ’ಯೆಂದ ಸಿದ್ದರಾಮಯ್ಯ appeared first on News First Kannada.

Source: newsfirstlive.com

Source link