ಬಿಜೆಪಿ ಬಿಕ್ಕಟ್ಟು – ಹೈಕಮಾಂಡ್ ಮುಂದಿರುವ 3 ಆಯ್ಕೆಗಳು ಏನು?

ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾಗ್ತಾರಾ? ಯಡಿಯೂರಪ್ಪಗೆ ಹೈಕಮಾಂಡ್ ಶಾಕ್ ಕೊಡುತ್ತಾ? ಅಥವಾ ಅವರ ವಿರೋಧಿ ಬಣಕ್ಕೆ ಶಾಕ್ ಕೊಡುತ್ತಾ? ರಾಜ್ಯ ಬಿಜೆಪಿಯಲ್ಲಿ ಮುಂದೇನು? ಭಿನ್ನಮತ ಶಮನವಾಗುತ್ತಾ ಇಲ್ವಾ? ಈ ಎಲ್ಲಾ ಪ್ರಶ್ನೆಗಳಿಗೆ, ಗೊಂದಲಗಳಿಗೆ ಉತ್ತರ ಸಿಗುವ ಕಾಲ ಸನ್ನಿಹಿತವಾಗಿದೆ.

ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ ಎಂದು ಹೈಕಮಾಂಡ್ ಪ್ರತಿನಿಧಿ ಅರುಣ್ ಸಿಂಗ್ ಈಗಾಗಲೇ ಹೇಳಿದ್ದಾರೆ. ಯಡಿಯೂರಪ್ಪ ಕೂಡ ಇನ್ನು ಎರಡು ವರ್ಷವೂ ನಾನೇ ಸಿಎಂ ಎನ್ನುತ್ತಿದ್ದಾರೆ. ಆದರೆ ಬಿಎಸ್‍ವೈ ವಿರೋಧಿಗಳು ಮಾತ್ರ ರಣತಂತ್ರ ರೂಪಿಸುವುದನ್ನು ನಿಲ್ಲಿಸಿಲ್ಲ. ಮೇಲಿಂದ ಮೇಲೆ ದಾಳ ಉರುಳಿಸುತ್ತಿದ್ದಾರೆ.

ಜೆಪಿ ನಡ್ಡಾ, ಅರುಣ್ ಸಿಂಗ್ ಅವರನ್ನು ದೆಹಲಿಯಲ್ಲಿ ಅರವಿಂದ್ ಬೆಲ್ಲದ್ ಭೇಟಿ ಆಗಿದ್ದರೆ ಮಂಗಳವಾರ ಬೆಂಗಳೂರಿನಲ್ಲಿ ಗೃಹ ಸಚಿವ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಒಂದು ಗಂಟೆ ಚರ್ಚೆ ನಡೆಸಿದ್ದಾರೆ. ಇದ್ದಕ್ಕಿದ್ದಂತೆ ಸಚಿವ ಯೋಗೇಶ್ವರ್ ಹೈದರಾಬಾದ್‍ಗೆ ತೆರಳಿದ್ದು, ಬಿಎಸ್‍ವೈ ಕೆಳಗಿಳಿಸಲು ಭಾರೀ ಪ್ಲಾನ್ ರೂಪಿಸ್ತಿದ್ದಾರಾ ಎಂಬ ಅನುಮಾನ ಮೂಡಿದೆ.  ಇದನ್ನೂ ಓದಿ : ನಾವು ಬಿಜೆಪಿಗೆ ಬಂದಿದ್ದಕ್ಕೆ ಈಶ್ವರಪ್ಪ ಮಿನಿಸ್ಟರ್ ಆಗಿದ್ದು: ಬಿ.ಸಿ.ಪಾಟೀಲ್ ತಿರುಗೇಟು

ಈ ಬೆಳವಣಿಗೆ ನಡುವೆ ಇಂದಿನಿಂದ ಮೂರು ದಿನ ಅರುಣ್ ಸಿಂಗ್ ಬೆಂಗಳೂರು ಪ್ರವಾಸ ಕೈಗೊಳ್ಳುತ್ತಿದ್ದಾರೆ. ಅರುಣ್ ಸಿಂಗ್ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಿಎಂ ವಿರೋಧಿ ಬಣ, ಶಾಸಕರನ್ನು ಒಗ್ಗೂಡಿಸುವ ಪ್ರಯತ್ನ ನಡೆಸುತ್ತಿದೆ. ಅದರಲ್ಲೂ, ಉತ್ತರ ಕರ್ನಾಟಕದ ಇಬ್ಬರು ಶಾಸಕರು ತಮಗೆ ಬೆಂಬಲ ನೀಡುವಂತೆ ಕಂಡ ಕಂಡ ಶಾಸಕರಿಗೆ ದೂರವಾಣಿ ಕರೆ ಮಾಡಿ ಮನವಿ ಮಾಡುತ್ತಿದ್ದಾರೆ.

ಅರುಣ್ ಸಿಂಗ್ ಪ್ರವಾಸದ ಮೊದಲ ದಿನವಾದ ನಾಳೆ ಸಂಜೆ ಬಿಜೆಪಿ ಕಚೇರಿಯಲ್ಲಿ ಸಚಿವರ ಮೌಲ್ಯಮಾಪನ ನಡೆಯಲಿದ್ದು, ಈ ಸಭೆಯಲ್ಲಿ ಹಾಜರಿರುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್‍ಗೆ ಸೂಚಿಸಲಾಗಿದೆ. ಒಂದು ವೇಳೆ ನಾಯಕತ್ವ ಬದಲಾವಣೆ ಆಗದಿದ್ದರೆ, ಸಂಪುಟ ಪುನಾರಚನೆ ಆಗಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಇದು ಕೆಲ ಸಚಿವರ ಆತಂಕಕ್ಕೆ ಕಾರಣವಾಗಿದೆ.

ಹೈಕಮಾಂಡ್ ಮುಂದಿರುವ ಆಯ್ಕೆಗಳೇನು?
ನಾಯಕತ್ವ ಬದಲಾವಣೆ:
ಈಗಾಗಲೇ ಸಿಎಂ ಬದಲಾವಣೆ ಇಲ್ಲ ಅಂತ ಸ್ಪಷ್ಟವಾಗಿ ಹೇಳಿರುವ ಹಿನ್ನೆಲೆಯಲ್ಲಿ ಈ ಆಯ್ಕೆ ಜಾರಿಯಾಗುವುದು ಅನುಮಾನ.

ಸಂಪುಟ ಪುನಾರಚನೆ:
ಈ ಸಾಧ್ಯತೆ ಹೆಚ್ಚಿದೆ. ಖಾಲಿ ಇರುವ ಸಚಿವ ಸ್ಥಾನ ಜೊತೆಗೆ ಕೆಲವು ಸಚಿವರು ಕೈಬಿಡುವ ಸಾಧ್ಯತೆ ಇದೆ. ಮೌಲ್ಯಮಾಪನ ಬಳಿಕ ಅಂತಿಮ ನಿರ್ಧಾರವಾಗಲಿದೆ.

ಶಾಸಕಾಂಗ ಸಭೆ
ಅತೃಪ್ತರ ಬೇಡಿಕೆಯಂತೆ ಶಾಸಕಾಂಗ ಸಭೆ ಕರೆಯಬಹುದು. ನಾಡಿದ್ದು ಯಾವುದೇ ಕಾರ್ಯಕ್ರಮ ಇಲ್ಲದಿರುವುದರಿಂದ ಶಾಸಕರ ಸಭೆ ನಡೆಸಿ, ಹೈಕಮಾಂಡಿಗೆ ವರದಿ ಸಲ್ಲಿಸಬಹುದು. ಈಗಾಗಲೇ ಕಾರ್ಕಳ ಶಾಸಕ ಸುನಿಲ್ ಕುಮಾರ್, ನಮ್ಮ ಅಭಿಪ್ರಾಯಗಳನ್ನು ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಿಲ್ಲವಾದ್ದರಿಂದ ಪಕ್ಷದ ವರಿಷ್ಠರು ಅಭಿಪ್ರಾಯ ಆಲಿಸಲು ಪ್ರತ್ಯೇಕ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ್ದರು.

The post ಬಿಜೆಪಿ ಬಿಕ್ಕಟ್ಟು – ಹೈಕಮಾಂಡ್ ಮುಂದಿರುವ 3 ಆಯ್ಕೆಗಳು ಏನು? appeared first on Public TV.

Source: publictv.in

Source link