ಬಿಜೆಪಿ ಮತ್ತು ಆರ್​​ಎಸ್ಎಸ್ ಭಾರತವನ್ನು ಕೇವಲ ‘ಕಾಂಗ್ರೆಸ್-ಮುಕ್ತ’ ಅಲ್ಲ ‘ವಿರೋಧ-ಮುಕ್ತ’ ಮಾಡುತ್ತಿದೆ: ಮಾಯಾವತಿ | BJP and RSS are making India not just Congress mukt but also opposition mukt says Mayawati


ಬಿಜೆಪಿ ಮತ್ತು ಆರ್​​ಎಸ್ಎಸ್ ಭಾರತವನ್ನು ಕೇವಲ 'ಕಾಂಗ್ರೆಸ್-ಮುಕ್ತ' ಅಲ್ಲ 'ವಿರೋಧ-ಮುಕ್ತ' ಮಾಡುತ್ತಿದೆ: ಮಾಯಾವತಿ

ಮಾಯಾವತಿ

ದೆಹಲಿ: ಉತ್ತರ ಪ್ರದೇಶ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ತನ್ನ ಪ್ರಸ್ತಾಪವನ್ನು ಬಿಎಸ್‌ಪಿ (BSP) ಮುಖ್ಯಸ್ಥೆ ನಿರ್ಲಕ್ಷಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಆರೋಪಿಸಿದ ಒಂದು ದಿನದ ನಂತರ, ಮಾಯಾವತಿ (Mayawati) ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದು,ಮೈತ್ರಿಯಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ನೀಡಿದ್ದಾರೆ ಎಂಬ ಹೇಳಿಕೆಗಳನ್ನು ತಿರಸ್ಕರಿಸಿದರು. “ಕಾಂಗ್ರೆಸ್ ಗೆ ತನ್ನ ದಾರಿಯನ್ನೇ ಸರಿ ಮಾಡಲು ಸಾಧ್ಯವಾಗುತ್ತಿಲ್ಲ, ಅವರ ಮನೆಯನ್ನೇ ನಿರ್ವಹಿಸಲು ಸಾಧ್ಯವಾಗದವರು ನಮ್ಮ ವಿಷಯಗಳಿಗೆ ತಲೆ ಹಾಕುತ್ತಿದ್ದಾರೆ ಎಂದು ಮಾಯಾವತಿ ಹೇಳಿದ್ದಾರೆ. ಬಿಎಸ್‌ಪಿ ಬಗ್ಗೆ ಪ್ರತಿಕ್ರಿಯಿಸುವ ಮುನ್ನ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ  100 ಬಾರಿ ಯೋಚಿಸಬೇಕು ಎಂದಿದ್ದಾರೆ ಮಾಯಾವತಿ. ಅದೇ ವೇಳೆ ವಿಶ್ವದಾದ್ಯಂತ ಗೇಲಿಗೊಳಗಾದ  ಪಕ್ಷವಲ್ಲ ಬಿಎಸ್​​ಪಿ. ರಾಹುಲ್ ಗಾಂಧಿಯಂತಹ ನಾಯಕರು ಸಂಸತ್ತಿನಲ್ಲಿ ಪ್ರಧಾನಿಯನ್ನು ಬಲವಂತವಾಗಿ ಅಪ್ಪಿಕೊಳ್ಳುವು  ಪಕ್ಷವಲ್ಲ ನಮ್ಮದು ಎಂದು ಮಾಯಾವತಿ ಹೇಳಿದ್ದಾರೆ. ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳಲು ಮಾಯಾವತಿ ಅವರನ್ನು ಸಂಪರ್ಕಿಸಿತ್ತು ಎಂದು ಗಾಂಧಿ ಹೇಳಿಕೊಂಡ ಒಂದು ದಿನದ ನಂತರ ಮಾಯಾವತಿಯವರ ಈ  ಪ್ರತಿಕ್ರಿಯೆ ಬಂದಿವೆ. ಕಾಂಗ್ರೆಸ್ ನಾಯಕ ಕೆ.ರಾಜು ಎಂಬುವರು ಸಂಪಾದಿಸಿದ ‘ದಿ ದಲಿತ್ ಟ್ರುತ್’​ ಎಂಬ ಪುಸ್ತಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ನಮ್ಮ ಪ್ರಸ್ತಾಪಕ್ಕೆ ಮಾಯಾವತಿ ಸ್ಪಂದಿಸಲೇ ಇಲ್ಲ, ಪ್ರತಿಕ್ರಿಯೆಯನ್ನೂ ನೀಡಲಿಲ್ಲ. ಮಾಯಾವತಿಯವರಿಗೆ ಸಿಬಿಐ, ಇ.ಡಿ. ಮತ್ತು ಪೆಗಾಸಸ್​ ಭಯವಿದ್ದುದರಿಂದ ಅವರು ಬಿಜೆಪಿ ವಿರುದ್ಧ ನಿಲ್ಲಲು ಬರಲಿಲ್ಲ. ಉತ್ತರ ಪ್ರದೇಶದಲ್ಲಿ ದಲಿತರ ಪರವಾಗಿ ಧ್ವನಿಯನ್ನೂ ಎತ್ತಲಿಲ್ಲ ಎಂದು ಹೇಳಿದರು. ಅಷ್ಟೇ ಅಲ್ಲ, ತನಿಖಾ ದಳಗಳ ಮೂಲಕ ಸಂವಿಧಾನವನ್ನು ಹತ್ತಿಕ್ಕಲಾಗುತ್ತಿದೆ. ಈ ಸಂವಿಧಾನವೆಂಬುದು ಡಾ. ಬಿ.ಆರ್.ಅಂಬೇಡ್ಕರ್ ಅವರು ನಮಗೆ ನೀಡಿದ ಪ್ರಬಲ ಅಸ್ತ್ರ. ಆದರೆ ಅದಕ್ಕಿಂದು ತುಕ್ಕು ಹಿಡಿಯುತ್ತಿದೆ ಎಂದು ಹೇಳಿದ್ದರು.

“ಬಿಎಸ್‌ಪಿ ಬಿಜೆಪಿಗೆ ಹೆದರುತ್ತಿದೆ. ಅವರು ಮೈತ್ರಿ ಬಗ್ಗೆ ನಮ್ಮನ್ನು ಕೇಳಿದರು ಮತ್ತು ನನಗೆ ಸಿಎಂ ಸ್ಥಾನವನ್ನು ನೀಡುತ್ತೇನೆ ಎಂದು  ಹೇಳಿದರೂ ನಾನು ಪ್ರತಿಕ್ರಿಯಿಸಲಿಲ್ಲ ಎಂಬ ರಾಹುಲ್ ಗಾಂಧಿಯವರ ಆರೋಪಗಳು ಸಂಪೂರ್ಣವಾಗಿ ಸುಳ್ಳು” ಎಂದು ಮಾಯಾವತಿ ಹೇಳಿದರು. “ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಹೇಳಿಕೆಗಳು ದಲಿತರು ಮತ್ತು ಬಿಎಸ್​​ಪಿ  ಬಗ್ಗೆ ಅವರ ಕೀಳು ಭಾವನೆ ಮತ್ತು ದುರುದ್ದೇಶವನ್ನು ತೋರಿಸುತ್ತದೆ.”
ಚೀನಾದ ರಾಜಕೀಯ ವ್ಯವಸ್ಥೆಯೊಂದಿಗೆ ಹೋಲಿಸಿದ ಮಾಯಾವತಿ, ಭಾರತವು ಶೀಘ್ರದಲ್ಲೇ ಒಂದೇ ಪ್ರಬಲ ಪಕ್ಷವನ್ನು ಹೊಂದಲಿದ್ದು, ಯಾವುದೇ ವಿರೋಧ ಪಕ್ಷ ಇಲ್ಲದಂತಾಗುತ್ತದೆ.  “ಬಿಜೆಪಿ ಮತ್ತು ಆರ್​ಎಸ್ಎಸ್ ಭಾರತವನ್ನು ಕೇವಲ ‘ಕಾಂಗ್ರೆಸ್-ಮುಕ್ತ’ವನ್ನಾಗಿ ಮಾಡದೆ, ‘ವಿರೋಧ-ಮುಕ್ತ’ವನ್ನಾಗಿ ಮಾಡುತ್ತಿದೆ. ಅಲ್ಲಿ ಭಾರತವು ಚೀನಾದ ರಾಜಕೀಯ ವ್ಯವಸ್ಥೆಯಂತೆಯೇ ರಾಷ್ಟ್ರದಿಂದ ಗ್ರಾಮ ಮಟ್ಟದವರೆಗೆ ಕೇವಲ ಒಂದು ಪ್ರಬಲ ಪಕ್ಷದೊಂದಿಗೆ ಉಳಿಯುತ್ತದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಯಾವತಿ ಹೇಳಿದ್ದಾರೆ.

ಇತ್ತೀಚೆಗಷ್ಟೇ ನಡೆದ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಎಸ್‌ಪಿ ಕೇವಲ ಶೇ 12.8 ರಷ್ಟು ಮತಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೂ ಹೀನಾಯವಾಗಿ ಸೋತಿದ್ದು, ಒಟ್ಟು 403 ಸ್ಥಾನಗಳ ಪೈಕಿ ಕೇವಲ 2 ಸ್ಥಾನ ಗಳಿಸಿದೆ.

TV9 Kannada


Leave a Reply

Your email address will not be published. Required fields are marked *