ಬಿಜೆಪಿ ಮೂಲ ಕಾರ್ಯಕರ್ತರು ಮತ್ತು ವಲಸಿಗರ ನಡುವಿನ ಕಿತ್ತಾಟ ಕ್ರಮೇಣ ಬಯಲಿಗೆ ಬರುತ್ತಿದೆ!! | Hidden dissent between original BJP workers and migrants is coming to light now! ARB


ಬಿಜೆಪಿಯಲ್ಲಿ (BJP) ಮೂಲ ಕಾರ್ಯಕರ್ತರು ಮತ್ತು ವಲಸಿಗರ ನಡುವೆ ವೈಮನಸ್ಸು ಮೊದಲಿನಿಂದಲೂ ಇದೆ. ದಶಕಗಳಿಂದ ಪಕ್ಷಕ್ಕೆ ನಿಷ್ಠೆಯಿಂದ ಸಲ್ಲಿಸುತ್ತಾ ಬಂದು ಸತತವಾಗಿ ಚುನಾವಣೆಗಳನ್ನು ಗೆದ್ದಿದ್ದರು ನಿನ್ನೆ ಮೊನ್ನೆ ಕೇವಲ ಮಂತ್ರಿಯಾಗುವ ಆಸೆಯಿಂದ ವಲಸೆ (migrants) ಬಂದ ನಾಯಕರಿಗೆ ಮಣೆಹಾಕಿ, ಕ್ಷೀರಾಭಿಷೇಕ ಮಾಡಿ ಮಂತ್ರಿಪಟ್ಟ ಕಟ್ಟಿದರೆ ಅವರ ಒಡಲು ಉರಿಯದಿರತ್ತದೆಯೇ? ವಲಸೆ ಬಂದವರು ಮಂತ್ರಿಗಳದ ಮೇಲೆ ಮೂಲ ಕಾರ್ಯಕರ್ತರ ಮೇಲೆ ಜೋರು ಮಾಡುವುದು, ಅವರ ಕರೆ ಮಾಡಿದಾಗ ಸ್ವೀಕರಿಸದಿರುವುದು, ಸಭೆ ಸಮಾರಂಭಗಳಲ್ಲಿ ತಾವೇ ಮನೆ ಮಕ್ಕಳಂತೆ ಬೀಗುವುದು ಅವರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಹೊನ್ನಾಳಿ ಶಾಸಕ ಎಮ್ ಪಿ ರೇಣುಕಾಚಾರ್ಯ (MP Renukacharya) ನೇರವಾಗಿ ಮತ್ತು ಕೆಲಸಲ ಅತಿಯಾಗಿ ಮಾತಾಡುವ ಸ್ವಭಾವದವರು. ಗುರುವಾರ ಕೊಪ್ಪಳದಲ್ಲಿ ಸಚಿವ ಬಿಸಿ ಪಾಟೀಲ (BC Patil) ಅವರು ರೇಣುಕಾಚಾರ್ಯರ ಹೆಸರು ಉಲ್ಲೇಖಿಸದೇ ಕೆಲ ಕಾಮೆಂಟ್ಗಳನ್ನು ಮಾಡಿದ್ದರು. ನಾವೀಗ ಮನೆ ಮಕ್ಕಳಂತಾಗಿದ್ದೇವೆ, ನಾವು ಹೊರಗಿನವರಲ್ಲ ಅಂತ ಹೇಳಿ ಪಕ್ಷದ ನಾಯಕತ್ವ ಮತ್ತು ಬೇರೆ ವಿಷಯಗಳ ಬಗ್ಗೆ ಶಾಸಕರು ಹಾದಿ ಬೀದಿಯಲ್ಲಿ ನಿಂತು ಮಾತಾಡುವುದು ಸರಿಯಲ್ಲ ಎಂದಿದ್ದರು.

ಅದಕ್ಕೆ ಪ್ರತಿಯಾಗಿ ಶುಕ್ರವಾರ ಬೆಂಗಳೂರಲ್ಲಿ ರೇಣುಕಾಚಾರ್ಯ ಸುದ್ದಿಗಾರರೊಂದಿಗೆ ಮಾತಾಡುತ್ತಾ ಪಾಟೀಲ ವಿರುದ್ಧ ವಾಗ್ದಾಳಿ ನಡೆಸಿದರು. ಕುಂಬಳಕಾಯಿ ಕಳುವಾದಾಗ ಯಾರು ಕದ್ದಿದ್ದು ಅಂತ ಕೇಳಿದರೆ, ಕದ್ದವನು ಹೆಗಲು ಮುಟ್ಟಿನೋಡಿಕೊಳ್ಳುವ ಹಾಗೆ ತಾನಾಡಿರುವ ಮಾತುಗಳು ಕೆಲವರಿಗೆ ಎದೆಗೆ ನಾಟಿವೆ, ಹಾಗಾಗಿ ಅವರು ಇಲ್ಲಸಲ್ಲದ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ ಎಂದರು.

ತಾನು ಬೇರಿನ ಹಂತದಿಂದ ಪಕ್ಷದಲ್ಲಿ ಬೆಳೆದು ಬಂದವನು ಅಂತ ಹೇಳುತ್ತಾ ವಲಸಿಗರಿಗೆ ಅದರಲ್ಲೂ ವಿಶೇಷವಾಗಿ ಪಾಟೀಲ ಅವರಿಗೆ ತಿವಿದ ರೇಣುಕಾಚಾರ್ಯ, ಯಾವ ಸಚಿವ ಕರೆಗಳನ್ನು ಸ್ವೀಕರಿಸದೆ ಅಸಡ್ಡೆ ಮಾಡುತ್ತಿದ್ದರೋ ಅವರ ಹೆಸರುಗಳನು ಪಟ್ಟಿ ಮಾಡಿ ಪಕ್ಷದ ರಾಜ್ಯಾಧ್ಯಕ್ಷ ಮತ್ತು ಮುಖ್ಯಮಂತ್ರಿಗಳಿಗೆ ನೀಡಿರುವುದಾಗಿ ಹೇಳಿದರು.

ಪಕ್ಷದ ಒಬ್ಬ ಜವಾಬ್ದಾರಿಯುತ ಕಾರ್ಯಕರ್ತನಾಗಿ ಎಲ್ಲಿ ಮಾತಾಡಬೇಕು, ಏನು ಮಾತಾಡಬೇಕು ಅಂತ ತನಗೆ ಚೆನ್ನಾಗಿ ಗೊತ್ತಿದೆ, ಬೇರೆಯವರಿಂದ ನೀತಿಪಾಠ ಕಲಿಯುವ ಅವಶ್ಯಕತೆ ತನಗಿಲ್ಲ ಎಂದು ಹೊನ್ನಾಳಿ ಶಾಸಕ ಕೋಪದಿಂದ ಹೇಳಿದರು

TV9 Kannada


Leave a Reply

Your email address will not be published.