ಬಿಜೆಪಿ ಶಿಸ್ತಿನ ಪಕ್ಷವಾಗಿ ಉಳಿದಿದ್ಯಾ? ಯಾರ ಹೇಳಿಕೆ ಸತ್ಯ, ಯಾರು ಹೇಳ್ತಿರೋದು ಮಿಥ್ಯ?

ಬಿಜೆಪಿ ಶಿಸ್ತಿನ ಪಕ್ಷವಾಗಿ ಉಳಿದಿದ್ಯಾ? ಯಾರ ಹೇಳಿಕೆ ಸತ್ಯ, ಯಾರು ಹೇಳ್ತಿರೋದು ಮಿಥ್ಯ?

ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಚಾರದ ಬಗ್ಗೆ ಯಾವತ್ತು ಚರ್ಚೆ ಶುರುವಾಯ್ತೋ ಅವತ್ತಿನಿಂದ ಇವತ್ತಿನವರೆಗೆ ಆಂತರಿಕ ಭಿನ್ನಮತ ಶಮನವಾಗಲೇ ಇಲ್ಲ. ಈಗಂತೂ ದೆಹಲಿಯಿಂದ ಉಸ್ತುವಾರಿಯೇ ಬಂದು ಶಾಸಕರು-ಸಚಿವರ ಅಭಿಪ್ರಾಯ ಸಂಗ್ರಹಿಸುವ ಮಟ್ಟಿಗೆ ತಲುಪಿಬಿಟ್ಟಿದೆ. ಯಡಿಯೂರಪ್ಪನವರ ಪರ ಇಷ್ಟು ಜನ ಶಾಸಕರು, ವಿರೋಧಿ ಬಣದಲ್ಲಿ ಇಷ್ಟು ಜನ, ತಟಸ್ಥ ಬಣದಲ್ಲಿ ಇಷ್ಟು ಜನ ಅಂತ ಲೆಕ್ಕ ಹಾಕುವ ವಾತಾವರಣ ನಿರ್ಮಾಣವಾಗಿ ಹೋಗಿದೆ.

ಸರ್ಕಾರ ತರಲೇಬೇಕು ಅಂತ ಇದ್ದಬಿದ್ದವರಿಗೆಲ್ಲ ಗಾಳ ಹಾಕಿ ಕೊನೆಗೂ ರಾಜ್ಯದಲ್ಲಿದ್ದ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಕೆಡವಿದ್ದು ಇದಕ್ಕೇನಾ? ಅಂತ ನಿಷ್ಠಾವಂತ ಬಿಜೆಪಿಯವರೇ ಕೇಳುವಂತಾಗಿದೆ. ಹಾದಿ-ಬೀದಿಯಲ್ಲಿ ಪಕ್ಷದ ಆಂತರಿಕ ವಿಚಾರ ಚರ್ಚೆಯಾಗ್ತಾ ಇರೋದು ಪಕ್ಷ ನಿಷ್ಠರಿಗೆ ಬೇಸರ ತರಿಸುತ್ತಿದೆ. ಇಷ್ಟಕ್ಕೆಲ್ಲ ಕಾರಣ ಯಾರು? ಅಂತ ಕೇಳಿದ್ರೆ ಅವರ ಮೇಲೆ ಇವರು, ಇವರ ಮೇಲೆ ಅವರು ಬೊಟ್ಟು ಮಾಡೋದನ್ನು ಬಿಟ್ಟರೆ ಬೇರೆ ಯಾವುದೂ ನಡೀತಾ ಇಲ್ಲ.

ಭಾರತೀಯ ಜನತಾ ಪಕ್ಷ ಶಿಸ್ತಿನ ಪಕ್ಷವಾಗಿ ಉಳಿದಿದ್ಯಾ?
ಮೊದಲ ಅವಧಿಯಲ್ಲೂ ರಂಪ-ಈ ಅವಧಿಯಲ್ಲೂ ರಾದ್ಧಾಂತ

ಬಿಜೆಪಿಯವರು ಹೇಳಿಕೊಳ್ತಾ ಇದ್ದೀದ್ದೇ ಹೀಗೆ. ನಮ್ಮದು ಬೇರೆ ಪಕ್ಷಗಳ ಹಾಗೆ ಅಲ್ಲವೇ ಅಲ್ಲ. ಭಾರೀ ಶಿಸ್ತಿನ ಪಕ್ಷ ಅಂತ. ಆದ್ರೆ ಬಿಜೆಪಿಯಲ್ಲಿ ಹೇಳಿಕೊಂಡಂತೇನೂ ಇಲ್ಲ. ಎಲ್ಲಾ ಪಕ್ಷಗಳಲ್ಲಿದ್ದಂತೆಯೇ ಬಿಜೆಪಿಯಲ್ಲೂ ಬೆಳವಣಿಗೆಗಳು ನಡೀತಾ ಇದ್ದಾವೆ. ಬಿಜೆಪಿಯಲ್ಲಿ ಏನಿದ್ದರೂ ಪಕ್ಷದ ವೇದಿಕೆಯಲ್ಲೇ ಚರ್ಚಿಸ್ತಾರೆ, ಏನೇ ಇದ್ದರೂ ಆರ್​​ಎಸ್ಎಸ್ ನಿಯಂತ್ರಣ ಮಾಡುತ್ತೆ ಅಂತೆಲ್ಲ ಹೇಳಲಾಗ್ತಾ ಇತ್ತು. ಆದ್ರೆ ಈಗಿನ ಬೆಳವಣಿಗೆ ನೋಡಿದ್ರೆ, ಮೊದಲ ಬಾರಿ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಾಗ ಆದ ಬೆಳವಣಿಗೆಯಂತೆಯೇ ಇದೆ. ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗಲಂತೂ ಹಾದಿ-ಬೀದಿಯಲ್ಲಿ ಹೇಳಿಕೆ ಕೊಟ್ಟು ಕೊಟ್ಟು ಇದೇನಾ ಬಿಜೆಪಿ ಅಂತ ಕೇಳುವಂತಾಗಿತ್ತು. ಈಗಂತೂ ಸ್ಟ್ರಾಂಗ್ ಆಗಿರೋ ಹೈಕಮಾಂಡ್, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಷಾ ಹೇಳಿಬಿಟ್ಟರೆ ಸಾಕು, ಅದೇ ಫೈನಲ್. ದೇಶದಲ್ಲೆಲ್ಲ ವಿಜಯದ ನಗೆ ಬೀರಿ ಎರಡನೇ ಬಾರಿಗೆ ದೆಹಲಿ ಗಾದಿಗೇರಿರುವ ಮೋದಿ ಮತ್ತು ಅಮಿತ್ ಷಾ ಜೋಡಿ ಇರುವ ಹೈಕಮಾಂಡ್ ಗಿಂತ ಬೇರೆ ಯಾವ ಹೈಕಮಾಂಡ್ ಸ್ಟ್ರಾಂಗ್ ಇರಲು ಸಾಧ್ಯ ಹೇಳಿ. ಅಷ್ಟರ ಮಟ್ಟಿಗೆ ಬಿಜೆಪಿ ಹೈಕಮಾಂಡ್ ಇವತ್ತಿನ ಮಟ್ಟಿಗಂತೂ ತುಂಬಾ ಸ್ಟ್ರಾಂಗ್ ಆಗಿದೆ. ಹೀಗಿದ್ದಾಗಲೇ ಇಷ್ಟೆಲ್ಲ ಮಾತು, ಆರೋಪ, ಕೆಸರೆರಚಾಟಾ ನಡೀತಾ ಇದ್ಯಲ್ಲಾ. ಹೀಗಾದಾಗ ಬಿಜೆಪಿ ಶಿಸ್ತಿನ ಪಕ್ಷ ಅಂತ ಹೇಳಬೇಕಾ ಅಂತ ವಿರೋಧ ಪಕ್ಷಗಳು ಕೇಳೋದ್ರಲ್ಲಿ ತಪ್ಪೇನಿಲ್ಲಾ ಅನಿಸುತ್ತೆ.

ಸರ್ಕಾರ, ಸಿಎಂ ವಿರುದ್ಧ ಮಾತನಾಡಿದ್ರೂ ಯಾವ ಕ್ರಮವೂ ಇಲ್ಲ
ಯತ್ನಾಳ್ ನೋಡಿ ಬೇರೆಯವರೂ ಈಗ ಮುನ್ನೆಲೆಗೆ ಬಂದು ನಿಂತ್ರಾ?

ಮುಖ್ಯಮಂತ್ರಿ ಯಡಿಯೂರಪ್ಪನವರ ಬಗ್ಗೆ, ಸರ್ಕಾರದ ಬಗ್ಗೆ, ಕುಟುಂಬ ರಾಜಕಾರಣದ ಬಗ್ಗೆ ಮೊದಲು ಮಾತನಾಡಿದ್ದೇ ಬಸನಗೌಡ ಪಾಟೀಲ್ ಯತ್ನಾಳ್. ಅಟಲ್ ಬಿಹಾರಿ ವಾಜಪೇಯಿಯವರ ಅವಧಿಯಲ್ಲೇ ಕೇಂದ್ರದಲ್ಲಿ ಮಂತ್ರಿಯಾಗಿದ್ದ ಯತ್ನಾಳರಿಗೆ ಹಿರಿತನ, ಅನುಭವ ಯಾವುದಕ್ಕೂ ಕೊರತೆ ಇಲ್ಲ. ಇನ್ನು ಯತ್ನಾಳ್ ಶಿಸ್ತಿನ ಬಿಜೆಪಿಯಲ್ಲೇ ಬೆಳೆದವರು. ಆದ್ರೆ ಅವರೇ ಮೊದಲು ಬಹಿರಂಗವಾಗಿ ನಾಯಕತ್ವದ ವಿರುದ್ಧ ಕಹಳೆ ಊದಿದ್ದರು. ಯಡಿಯೂರಪ್ಪ ಇಳಿತಾರೆ, ಉತ್ತರ ಕರ್ನಾಟಕದವರೇ ಮುಂದೆ ಸಿಎಂ ಆಗ್ತಾರೆ ಅಂತ ನಿತ್ಯ ಮಾತಾಡ್ತಾನೇ ಇದ್ರು ಯತ್ನಾಳ್. ಆಗ ಚರ್ಚೆಯಾಗ್ತಾ ಇದ್ದಿದ್ದು ಯತ್ನಾಳ್ ಹಿಂದೆ ಮತ್ಯಾರ್ಯಾರು ಇದ್ದಾರೆ ಅನ್ನೋದು. ಹೈಕಮಾಂಡೇ ಕೀಲಿ ಕೊಟ್ಟು ಯತ್ನಾಳ್ ಕೈಯಲ್ಲಿ ಮಾತನಾಡಿಸ್ತಾ ಇದ್ಯಾ ಅಥವಾ ರಾಜ್ಯದಲ್ಲಿನ ಕೆಲವು ನಾಯಕರು ಸೇರಿ ಯತ್ನಾಳರನ್ನು ಮುಂದೆ ಬಿಟ್ಟಿದ್ದಾರಾ? ಅನ್ನೋ ಪ್ರಶ್ನೆ ಮೂಡಿತ್ತು. ಯತ್ನಾಳ್ ವಿರುದ್ಧ ಹೈಕಮಾಂಡ್ ಕ್ರಮ ಕೈಗೊಳ್ಳಬೇಕು ಅಂತ ಯಡಿಯೂರಪ್ಪ ನಿಷ್ಠರು ಒತ್ತಾಯಿಸಿದ್ದೂ ಆಗಿತ್ತು. ಕೊನೆಗೆ ಅಂತೂ-ಇಂತೂ ಯತ್ನಾಳ್​​ಗೆ ನೋಟಿಸ್ ಬಂತು. ಆದ್ರೆ ಯತ್ನಾಳ್ ಏನು ಉತ್ತರ ಕೊಟ್ಟರೋ, ಹೈಕಮಾಂಡ್ ಯತ್ನಾಳ್ ಹೇಳಿಕೆಯನ್ನು ಹೇಗೆ ಪರಿಗಣಿಸಿತೋ ಗೊತ್ತಾಗಲಿಲ್ಲ. ಹೀಗಾಗಿ ಯಾರು ಬೇಕಾದರೂ ಮಾತನಾಡಬಹುದು ಅನ್ನೋ ಪರಿಸ್ಥಿತಿ ರಾಜ್ಯ ಬಿಜೆಪಿಯಲ್ಲಿ ನಿರ್ಮಾಣವಾಗೋದಕ್ಕೆ ಇದೇ ಕಾರಣವಾಗಿ ಬಿಡ್ತಾ ಅನ್ನೋದೇ ಈಗ ಕಮಲ ಪಡೆಯ ನಿಷ್ಠಾವಂತರನ್ನು ಕಾಡ್ತಿರೋ ವಿಚಾರ.

ಅರುಣ್ ಸಿಂಗ್ ಬಂದ ಮೇಲಂತೂ ಬಹಿರಂಗ ಕೆಸರೆರಚಾಟ
ವಿಶ್ವನಾಥ್ ವಿರುದ್ಧ ತಿರುಗಿ ಬಿದ್ದಿದ್ದ ಯಡಿಯೂರಪ್ಪ ಬಣ

ರಾಜ್ಯ ಬಿಜೆಪಿಯಲ್ಲಿ ಏನಾಗ್ತಿದೆ ಅಂದುಕೊಳ್ಳುವಷ್ಟರಲ್ಲಿ ದೆಹಲಿಯಿಂದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬಂದಿಳಿದರು. ಇಡೀ ದಿನ ಮೀಟಿಂಗ್ ಮೇಲೆ ಮೀಟಿಂಗ್ ಮಾಡಿದ್ರು. ಪ್ರತ್ಯೇಕವಾಗಿಯೂ ಹಲವಾರು ಶಾಸಕರು, ಸಚಿವರನ್ನು ಭೇಟಿ ಮಾಡಿದ್ರು. ಯಾರ್ಯಾರು ಏನೇನು ಅಭಿಪ್ರಾಯ ಕೊಟ್ರು ಅನ್ನೋದು ನಿಗೂಢ. ಯೋಗೀಶ್ವರ್ ತಾವು ಹೇಳಬೇಕಾಗಿದ್ದನ್ನ ಹೇಳಿದ್ದೇನೆ ಅಂತ ಜಾರಿಕೊಂಡ್ರು. ಆದ್ರೆ ಹೆಚ್.ವಿಶ್ವನಾಥ್ ಮಾತ್ರ ನಾಯಕತ್ವ ಬದಲಾವಣೆಯ ಅನಿವಾರ್ಯತೆ ಬಗ್ಗೆ ಬಹಿರಂಗವಾಗಿಯೇ ಮಾತನಾಡಿಬಿಟ್ರು. ಅಷ್ಟೇ ಅಲ್ಲ ಪರ್ಯಾಯ ನಾಯಕರ ಹೆಸರನ್ನೂ ಸೂಚಿಸಿ ಬಿಟ್ಟರು. ಬಿಜೆಪಿಯಂತಹ ಶಿಸ್ತಿನ, ಹೈಕಮಾಂಡ್ ಇಷ್ಟು ಸ್ಟ್ರಾಂಗ್ ಆಗಿರೋ ಪಕ್ಷದಲ್ಲಿ ಇದು ಸಾಧ್ಯಾನಾ ಹಲವರು ಹುಬ್ಬೇರಿಸಿದ್ರು. ಪಕ್ಷದ ರೀತಿ-ರಿವಾಜಿನ ಬಗ್ಗೆ ವಿಶ್ವನಾಥ್ ಅವರಿಗೆ ತಿಳಿಸುತ್ತೇವೆ ಅಂತ ಅರುಣ್ ಸಿಂಗ್ ಎಚ್ಚರಿಕೆ ಕೊಟ್ಟರು. ಆದ್ರೆ ವಿಶ್ವನಾಥ್ ಅದಕ್ಕೆ ತಲೆಕೆಡಿಸಿಕೊಳ್ಳದೇ ಮತ್ತೆ ಯಡಿಯೂರಪ್ಪ ವಿರುದ್ಧ ಮಾತನಾಡಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಓಪನ್ ಆಗಿಯೇ ಹೇಳಿಕೆ ನೀಡಿ, ಬಿಜೆಪಿಯಲ್ಲಿನ ಯಡಿಯೂರಪ್ಪ ಬಣಕ್ಕೆ ನೇರ ಸವಾಲು ಹಾಕಿದ್ದಾರೆ.

ಪಕ್ಷದ ನಿಯಮ ಪ್ರಸ್ತಾಪಿಸಿಯೇ ಟಾಂಗ್ ಕೊಟ್ಟ ವಿಶ್ವನಾಥ್
ಅರುಣ್ ಸಿಂಗ್ ಎಚ್ಚರಿಕೆ ಹೊರತಾಗಿಯೂ ಸಿಎಂ ವಿರುದ್ಧ ಹೇಳಿಕೆ

ವಿಶ್ವನಾಥ್ ಎಂಥಾ ಚಾಕಚಕ್ಯತೆಯಿಂದ ಮಾತನಾಡಿದ್ದಾರೆ ಅಂದ್ರೆ ಪಕ್ಷದಲ್ಲಿರುವ ನಿಯಮವನ್ನೇ ಪ್ರಸ್ತಾಪಿಸಿದ್ದಾರೆ. 75 ವರ್ಷ ಮೀರಿದವರಿಗೆ ಅಧಿಕಾರ ಬೇಡ ಎಂಬ ನಿಯಮ ಪಕ್ಷದಲ್ಲಿಯೇ ಇದೆ. ಯಡಿಯೂರಪ್ಪ ಬಳಲಿದ್ದಾರೆ. ಹಿಂದೆ ವೇಗ ಇತ್ತು, ಈಗ ಇಲ್ಲ ಅಂತ ಹೇಳಿ ನಾಯಕತ್ವ ಬದಲಾವಣೆ ಅನಿವಾರ್ಯ ಅಂತ ಹೇಳಿಬಿಟ್ಟಿದ್ದಾರೆ. ಬಿಜೆಪಿಯೊಳಗಿನ ಒಬ್ಬ ಶಾಸಕರೇ ಹೀಗೆ ಹೇಳಿದಾಗ ವಿರೋಧ ಪಕ್ಷಗಳಿಗೆ ಇದಕ್ಕಿಂತ ಬೇರೆ ಅಸ್ತ್ರ ಇನ್ನೊಂದು ಬೇಕಾ? ಮೊದಲೇ ಸರ್ಕಾರದ ವಿರುದ್ಧ ನಿತ್ಯ ಮುಗಿ ಬೀಳುವ ಪ್ರತಿಪಕ್ಷಗಳ ನಾಯಕರಿಗೆ ಇಂತಹ ಹೇಳಿಕೆಗಳೆಲ್ಲ ಸಿಕ್ಕಿಬಿಟ್ಟರೆ ಮುಂದೆ ಕೇಳಬೇಕಾ? ಇದನ್ನೇ ಉಲ್ಲೇಖಿಸಿ ತಾವು ಕೂಡ ಆರೋಪ ಮಾಡಲು ತೊಡಗ್ತಾರೆ.

ಹೀಗಾಗಿ ವಿರೋಧ ಪಕ್ಷಗಳ ಬಾಯಿಗೆ ಹೆಚ್ಚಿನ ಆಹಾರ ಒದಗಿಸ್ತಾ ಇದೆ ಬಿಜೆಪಿ. ಇಷ್ಟೆಲ್ಲಾ ಆದ ಮೇಲೆ ಶಿಸ್ತಿನ ಪಕ್ಷ ಬಿಜೆಪಿ ಬಹಿರಂಗ ಹೇಳಿಕೆ ಕೊಡ್ತಾ ಇರೋರ ಮೇಲೆ ಶಿಸ್ತು ಕ್ರಮ ಕೈಗೊಳ್ಳೋದಿಲ್ವಾ ಅಂತ ಕೇಳಿದ್ರೆ ಅದಕ್ಕೂ ವಿಶ್ವನಾಥ್ ಬಳಿ ಉತ್ತರ ರೆಡಿ ಇದೆ. ನಾನು ಪಕ್ಷದ ನೈತಿಕತೆ, ಪಾರದರ್ಶಕತೆ, ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದೇನೆ. ಸತ್ಯ ಹೇಳೋರ ಮೇಲೆ ಕ್ರಮ ಕೈಗೊಳ್ಳೋದಿಲ್ಲ ಅಂತ ಮೊದಲೇ ನಿರೀಕ್ಷಣಾ ಜಾಮೀನು ತಂದಿಟ್ಟುಕೊಂಡು ಬಿಟ್ಟಿದ್ದಾರೆ ವಿಶ್ವನಾಥ್.

ರಾಜ್ಯ ಬಿಜೆಪಿಯಲ್ಲಿ ಆಗುತ್ತಿರುವ ಬೆಳವಣಿಗೆ, ಕೆಲವರು ಕೊಡುತ್ತಿರುವ ಬಹಿರಂಗ ಹೇಳಿಕೆಗಳಿಂದ ಅನೇಕರಿಗೆ ಕಿರಿ ಕಿರಿ ಆಗ್ತಾ ಇದೆ. ಇದರ ಬಗ್ಗೆ ಪಕ್ಷದ ಹಿರಿಯ ನಾಯಕರು ಕೂಡ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಇಷ್ಟೆಲ್ಲಾ ಆದ ಮೇಲೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮತ್ತೇ ಆದೇ ರಾಗ-ಅದೇ ಹಾಡು ಹಾಡಿದ್ದಾರೆ. ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ ಅಂತ ಹೇಳಿ ಬಿಟ್ಟಿದ್ದಾರೆ. ಒಬ್ಬಿಬ್ಬರು ಮೊದಲಿನಿಂದಲೂ ಮಾತನಾಡ್ತಾ ಇದಾರೆ, ಈಗಲೂ ಅವರೇ ಮಾತನಾಡ್ತಾ ಇದಾರೆ ಬಿಟ್ರೆ ಬೇರೆ ಯಾರಿಗೂ ಅಸಮಾಧಾನ ಇಲ್ಲ ಅಂತ ಹೇಳಿದ್ದಾರೆ.

ಇದ್ದರೂ ಇರಬಹುದು. ಯಡಿಯೂರಪ್ಪ ಹೇಳಿದ ಹಾಗೆ ಪಕ್ಷದಲ್ಲಿ ಯಾವುದೇ ಗೊಂದಲವೂ ಇಲ್ಲದೇ ಇರಬಹುದು. ಅಥವಾ ಇದ್ದರೂ ಅದು ಲೆಕ್ಕಕ್ಕಿಲ್ಲದಿರಬಹುದು. ಯಡಿಯೂರಪ್ಪನವರ ಕುರ್ಚಿಗೂ ಯಾವುದೇ ರೀತಿ ತೊಂದರೆಯೂ ಇಲ್ಲದಿರಬಹುದು. ಆದ್ರೆ ಪಕ್ಷದ ಶಿಸ್ತಿನ ವಿಚಾರ ಬಂದಾಗ ಇದೆಲ್ಲ ಪರಿಗಣನೆಗೆ ಬರೋದಿಲ್ವಾ ಅನ್ನೋದು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರ ಪ್ರಶ್ನೆ. ಇಂತ ವಿಚಾರಕ್ಕೆ ನಾಯಕರಾದರವರು ಕಡಿವಾಣ ಹಾಕದೇ ಇದ್ರೆ ಇದು ಮುಂದಿನ ದಿನಗಳಲ್ಲಿ ಮತ್ತಷ್ಟು ಮುಜುಗರ ತರುತ್ತೆ ಅನ್ನೋದು ನಿಷ್ಠರ ಅಭಿಪ್ರಾಯ.

ಬಿಜೆಪಿ ಶಿಸ್ತಿನ ಪಕ್ಷವಾಗಿದ್ಯೋ ಇಲ್ವೋ ಅವರೇ ಹೇಳಬೇಕು. ಆದ್ರೆ ಸದ್ಯಕ್ಕಂತೂ ಜನ ಸಾಮಾನ್ಯರಿಗೆ, ಕಾರ್ಯಕರ್ತರಿಗೆ ಅನಿಸ್ತಾ ಇರೋದೇ ಬೇರೆ. ಬಿಜೆಪಿಯಲ್ಲಿ ಯಾವುದೇ ಗೊಂದಲವೂ ಇಲ್ಲದಿರಬಹುದು. ಆದ್ರೆ ಬಹಿರಂಗವಾಗಿ ನೋಡೋರಿಗೆ ಹಾಗೆ ಕಾಣಿಸ್ತಾ ಇಲ್ಲ ಅನ್ನೋದಂತ್ಯೂ ಸತ್ಯ.

The post ಬಿಜೆಪಿ ಶಿಸ್ತಿನ ಪಕ್ಷವಾಗಿ ಉಳಿದಿದ್ಯಾ? ಯಾರ ಹೇಳಿಕೆ ಸತ್ಯ, ಯಾರು ಹೇಳ್ತಿರೋದು ಮಿಥ್ಯ? appeared first on News First Kannada.

Source: newsfirstlive.com

Source link