
ಹೆಚ್.ಡಿ.ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ರಾಮನ ಹೆಸರು, ರಾವಣ ರಾಜಕೀಯ. ಜಾತ್ಯತೀತತೆ ಸೋಗು ಹಾಕಿಕೊಂಡು ಪೋಸು ಕೊಡುವ ಆಸಾಮಿ. ಜಾತಿಗೊಂದು ಸಮಾವೇಶ ನಡೆಸುತ್ತೀರಿ ಎಂದು ಹೆಚ್ಡಿಕೆ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಲ್ಪಸಂಖ್ಯಾತ ವ್ಯಕ್ತಿಯನ್ನ 2ನೇ ಅಭ್ಯರ್ಥಿ ಮಾಡಿದ ಗುಟ್ಟೇನು?
ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ(HD Kumaraswamy) ಸಿದ್ದರಾಮಯ್ಯ(Siddaramaiah) ವಿರುದ್ಧ ಮುಗಿಬಿದ್ದಿದ್ದಾರೆ. ಸರಣಿ ಟ್ವೀಟ್ ಮಾಡುವ ಮೂಲಕ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ. ಬಿಜೆಪಿ ಸರ್ಕಾರದ ಕಾರಣಪುರುಷ, ಆಹಿಂದ ಆದಿಪುರುಷ, ಕಾಂಗ್ರೆಸ್ ಮುಗಿಸಲು ಹೊರಟ ಸಿದ್ಧಹಸ್ತ ಮಹಾಶಯ. ಮುಸ್ಲಿಮರ ರಾಜಕೀಯ ನರಮೇಧಕ್ಕೆ ಇನ್ನೊಂದು ವಿನಾಶಕಾರಿ ಅಧ್ಯಾಯವನ್ನು ಆರಂಭಿಸಿದ್ದೀರಿ ಎಂದು ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
‘ಭಾಷಣ ಒಂದು, ರಾಜಕಾರಣ ಇನ್ನೊಂದು’ ಇದಯ್ಶಾ ಕಿಲಾಡಿರಾಮಯ್ಯನ ರಾಜನೀತಿ ಮತ್ತು ರಣನೀತಿ. ಅಲ್ಪಸಂಖ್ಯಾತರನ್ನೇ ಅಯ್ಯೋ ಎನ್ನುವಂತೆ ಮಾಡುತ್ತಿದ್ದೀರಲ್ಲ? ಇದು ನ್ಯಾಯವೇ ಎಂದು ಸಿದ್ದರಾಮಯ್ಯಗೆ ಹೆಚ್ಡಿಕೆ ಪ್ರಶ್ನೆ ಮಾಡಿದ್ದಾರೆ. ಸೋಲು ಖಚಿತ ಎಂದು ಗೊತ್ತಿದ್ದರೂ ಮನ್ಸೂರ್ ಖಾನ್ ಅವರನ್ನು ಬಲಿಪೀಠದ ಮುಂದೆ ನಿಲ್ಲಿಸಿದ್ದೀರಿ. ಏನಿದರ ಹಕೀಕತ್ತು? ಮುಸ್ಲಿಂ ನಾಯಕರನ್ನು ಸಾಲು ಸಾಲಾಗಿ ರಾಜಕೀಯ ಗಿಲೋಟಿನ್ ಯಂತ್ರಕ್ಕೆ ತಳ್ಳುತ್ತಿದ್ದೀರಿ. ‘ಮುಸ್ಲಿಂ ಮೂಲೋತ್ಪಾಟನಾ ರಾಜಕೀಯ’ಕ್ಕೆ ರಾಜ್ಯಸಭೆ ಚುನಾವಣೆಯನ್ನೂ ಬಳಸಿಕೊಳ್ಳುತ್ತಿದ್ದೀರಲ್ಲ? ಎಂದು ಟ್ವೀಟ್ ಮೂಲಕ ಸಿದ್ದರಾಮಯ್ಯಗೆ ಪ್ರಶ್ನಿಸಿದ್ದಾರೆ.