ಬಿಟ್​ಕಾಯಿನ್ ದಂಧೆ ಬಗ್ಗೆ ಇಡಿ ತನಿಖೆಗೆ ಎಚ್​ಡಿ ಕುಮಾರಸ್ವಾಮಿ ಒತ್ತಾಯ | HD Kumaraswamy Demands ED Investigation on Bitcoin Scam


ಬಿಟ್​ಕಾಯಿನ್ ದಂಧೆ ಬಗ್ಗೆ ಇಡಿ ತನಿಖೆಗೆ ಎಚ್​ಡಿ ಕುಮಾರಸ್ವಾಮಿ ಒತ್ತಾಯ

ಜೆಡಿಎಸ್ ನಾಯಕ ಎಚ್​.ಡಿ.ಕುಮಾರಸ್ವಾಮಿ

ಬೆಂಗಳೂರು: ಬಿಟ್​ ಕಾಯಿನ್ ವಿಚಾರದ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಜೆಡಿಎಸ್ ನಾಯಕ ಎಚ್​.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ನಗರದ ಜೆಡಿಎಸ್ ಕಚೇರಿಯಲ್ಲಿ ಮಾತನಾಡಿದ ಅವರು, ಬಿಟ್​ ಕಾಯಿನ್ ಪ್ರಕರಣ ತನಿಖೆ ಹಂತದಲ್ಲಿದೆ. ಇದರಲ್ಲಿ ಕಾಂಗ್ರೆಸ್​ನವರು ಇದ್ದಾರೋ, ಬಿಜೆಪಿಯವರಿದ್ದಾರೋ ಗೊತ್ತಿಲ್ಲ. ಬಿಟ್​ ಕಾಯಿನ್ ದಂದೆ ಬಗ್ಗೆ ಇಡಿ ಅಥವಾ ಸಿಐಡಿ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.

2018ರಲ್ಲಿ ಯುಬಿ ಸಿಟಿಯಲ್ಲಿ ಒಂದು ಘಟನೆ ನಡೆಯಿತು. ನಾನು ಪ್ರತಿಕ್ರಿಯೆ ನೀಡಿದ್ದೆ, ಏನಾದರೂ ಕ್ರಮಕೈಗೊಂಡ್ರಾ? ಆಗ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಿದ್ದರು. ಕಾಂಗ್ರೆಸ್​ ಪಕ್ಷದವರ ಮೇಲೆ ಯಾವ ಕ್ರಮ ಕೈಗೊಂಡರು? ಓಂ ಪ್ರಕಾಶ್ ಚೌಟಾಲ, ಲಾಲೂ ಪ್ರಸಾದ್​ಗೆ ಕಂಟಕವಾಗಿದೆ. ಭ್ರಷ್ಟಾಚಾರ ಪ್ರಕರಣದಲ್ಲಿ ಇವರಿಬ್ಬರಿಗೆ ಮಾತ್ರ ಶಿಕ್ಷೆಯಾಗಿದೆ ಎಂದು ತಿಳಿಸಿದರು.

ಜೆಡಿಎಸ್​ನಿಂದ ಸಾಕಷ್ಟು ಜನರು ಪಕ್ಷ ಬಿಟ್ಟು ಹೋಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಪಕ್ಷವನ್ನು ಬಿಟ್ಟು ಹೋಗುತ್ತಿರುವ ಬಹುತೇಕರು ಪಕ್ಷದಿಂದ ಉಪಕಾರ ಪಡೆದು ಬೇರೆ ಬಸ್ ಹತ್ತುತ್ತಿದ್ದಾರೆ. ಯಾರ್ಯಾರು ಪಕ್ಷ ಬಿಡುತ್ತಾರೆ ಎನ್ನುವುದು ಎರಡು ವರ್ಷಗಳ ಹಿಂದೆಯೇ ಗೊತ್ತಾಗಿದೆ. ನಿಮಗೆ ಇವೆಲ್ಲಾ ಹೊಸ ವಿಚಾರ ಎನಿಸುತ್ತೆ ಎಂದು ಆತ್ಮವಿಶ್ವಾಸದ ಮಾತುಗಳನ್ನು ಆಡಿದರು.

ಗುಬ್ಬಿ ಶಾಸಕ ಶ್ರೀನಿವಾಸ್ ಸಭೆ ಮಾಡ್ತಿದ್ದಾರೆ. ನಾವು ಪಕ್ಷ ಬಿಟ್ಟು ಹೋಗುತ್ತೇವೆ ಎಂದು ಅವರೇ ಹೇಳಿದ್ದಾರೆ. ಗುಬ್ಬಿಯಲ್ಲಿ ನಡೆಸಿದ ಸಭೆಯಲ್ಲಿ ಎಲ್ಲವನ್ನೂ ಜನತೆಯ ಮುಂದಿಟ್ಟಿದ್ದೇನೆ. ಜನತೆ ಅದರ ತೀರ್ಮಾನ ಮಾಡಲಿದ್ದಾರೆ. ಕಳೆದ ಎರಡು ವರ್ಷಗಳಿಂದ ಅವರು ಮಾಧ್ಯಮಗಳಿಗೆ ನೀಡಿರೋ ಹೇಳಿಕೆಗಳನ್ನು ಗಮನಿಸಿ. ಈ ಹಿಂದೆಯೇ ಅವರು ಮಾನಸಿಕವಾಗಿ ಪಕ್ಷದಿಂದ ಹೊರಗೆ ಹೋಗಿದ್ರು, ಈಗ ದೈಹಿಕವಾಗಿ ಹೋಗ್ತಿದ್ದಾರೆ. ಹೋಗುವವರು ಸಂತೋಷವಾಗಿ ಹೋಗಲಿ ಎಂದರು.

ಮುಂದಿನ ಚುನಾವಣೆಗೆ ನಮ್ಮ ಅಭ್ಯರ್ಥಿಗಳನ್ನು ಗುರುತಿಸಿಕೊಂಡಿದ್ದೇವೆ. ಯಾವ ಕ್ಷೇತ್ರ ನಮಗೆ ಅತ್ಯಂತ ಸುರಕ್ಷಿತ ಎಂಬ ಸಮೀಕ್ಷೆ ಮಾಡಿಕೊಂಡಿದ್ದೇವೆ. ತಂತ್ರಗಾರಿಕೆಗಿಂತ ಪಕ್ಷ ಸಂಘಟನೆ ನಮಗೆ ಬಹಳ ಮುಖ್ಯ. ಕಳೆದ ಹಲವು ವರ್ಷಗಳಿಂದ ಯಾವ ಕ್ಷೇತ್ರ ಬಿಗಿ ಮಾಡಿಕೊಳ್ಳಬೇಕೋ ಅದನ್ನು ಮಾಡುತ್ತಿದ್ದೇವೆ. ಕಾಂಗ್ರೆಸ್​ ಪಕ್ಷದ ಶಕ್ತಿ ದೊಡ್ಡಮಟ್ಟದಲ್ಲಿ ಇಲ್ಲ. ನಮ್ಮ ಪಕ್ಷದಿಂದ ಯಾರೆಲ್ಲಾ ಹೋಗುತ್ತಾರೆ ಎನ್ನುವ ಪಟ್ಟಿ ನನ್ನ ಬಳಿ ಪಟ್ಟಿ ಇದೆ. ಅವರು ನನಗೆ ಶಾಕ್ ನೀಡಲು ಸಾಧ್ಯವಿಲ್ಲ ಎಂದು ನುಡಿದರು.

2023ರ ಚುನಾವಣೆ ದೃಷ್ಟಿಯಿಂದ ಕಳೆದ ತಿಂಗಳು ಆರು ದಿನಗಳ ಕಾರ್ಯಗಾರ ಮಾಡಿದ್ದೆವು. ಅದರ ಮುಂದುವರಿದ ಭಾಗವಾಗಿ ನವೆಂಬರ್ 8ರಿಂದ 16 ರವರೆಗೂ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳ ಜೊತೆ ಸೀಮಿತವಾಗಿ ನಾಲ್ಕು ಕ್ಷೇತ್ರದ ಕಾರ್ಯಗಾರ ನಡೆಯಲಿದೆ. ಆರು ದಿನಗಳ ಕಾರ್ಯಗಾರದಲ್ಲಿ ಟಾಸ್ಕ್ ನೀಡಲಾಗಿತ್ತು. ಕಾರ್ಯಕಾರಿ ಸಮಿತಿಯ ಜೊತೆಗೆ ಹಿಂದುಳಿದ, ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರ ಹಿಂದುಳಿದ ಜಾತಿಗಳು, ಹಿಂದುಳಿದ ಮಹಿಳಾ ವಿಭಾಗದ ಸಮ್ಮುಖದಲ್ಲಿ ಅವರು ಸಂಘಟನೆ ಸಲಹೆ ಅಳವಡಿಸಿಕೊಂಡಿದ್ದಾರೆ ಎಂದು ವಿವರಿಸಿದರು.

ಕೋಲಾರ, ಚಿಕ್ಕಬಳ್ಳಾಪುರ ಅಭ್ಯರ್ಥಿಗಳ ಆಯ್ಕೆ ವಿಚಾರದ ಬಗ್ಗೆಯೂ ಸಭೆಯಲ್ಲಿ ಚರ್ಚೆಗಳು ನಡೆಯಲಿವೆ. ಜನತಾ ಸಂಗಮ ಹೆಸರಿನಲ್ಲಿ ನಿರಂತರವಾಗಿ ಮುಂದಿನ ದಿನಗಳಲ್ಲಿ ಸಭೆಗಳು ನಡೆಯಲಿವೆ. ರಾಜ್ಯಕ್ಕೆ ಸಂಬಂಧಿಸಿದ ಹಲವು ವಿಚಾರಗಳ ಬಗ್ಗೆ ನಾವು ಕೊಟ್ಟ ಸಲಹೆ ಎಷ್ಟರಮಟ್ಟಿಗೆ ಜಾರಿಯಾಗಿದೆ ಎನ್ನುವ ಮಾಹಿತಿ ಅದರಲ್ಲಿ ಇರಲಿದೆ. ‌ಯಾರು ಎಷ್ಟೇ ಲಘುವಾಗಿ ಮಾತನಾಡಿದರೂ 2023ರಲ್ಲಿ ನಮ್ಮ ಗುರಿ ಮುಟ್ಟಲಿದ್ದೇವೆ ಎಂದರು.

ಇದನ್ನೂ ಓದಿ: Bitcoin Case: ಬಿಟ್​ಕಾಯಿನ್ ಪ್ರಕರಣದ ಆರೋಪಿ ಶ್ರೀಕಿ ಬೆಂಗಳೂರಿನ 5 ಸ್ಟಾರ್ ಹೊಟೇಲಿನಲ್ಲಿ ಬಂಧನ
ಇದನ್ನೂ ಓದಿ: ಗೋಪೂಜೆ ಮಾಡಿದ ಜೆಡಿಎಸ್ ನಾಯಕ ಎಚ್​ಡಿ ಕುಮಾರಸ್ವಾಮಿ, ಸಚಿವ ಕೋಟ ಶ್ರೀನಿವಾಸಪೂಜಾರಿ

TV9 Kannada


Leave a Reply

Your email address will not be published. Required fields are marked *