ಬಿಟ್​ಕಾಯಿನ್ ಬಗ್ಗೆ ಕಾಂಗ್ರೆಸ್ ನಾಯಕರು ಮಾಹಿತಿ ಕೊಟ್ಟರೆ ಅದನ್ನೇ ಆಧರಿಸಿ ತನಿಖೆ: ಯಡಿಯೂರಪ್ಪ ಭರವಸೆ | BS Yediyurappa Asks Congress to Give Information about Bitcoin Scandal


ಬಿಟ್​ಕಾಯಿನ್ ಬಗ್ಗೆ ಕಾಂಗ್ರೆಸ್ ನಾಯಕರು ಮಾಹಿತಿ ಕೊಟ್ಟರೆ ಅದನ್ನೇ ಆಧರಿಸಿ ತನಿಖೆ: ಯಡಿಯೂರಪ್ಪ ಭರವಸೆ

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (ಸಂಗ್ರಹ ಚಿತ್ರ)

ಬೆಂಗಳೂರು: ಬಿಟ್​ಕಾಯಿನ್ ಹಗರಣ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಕಾಂಗ್ರೆಸ್ ನಾಯಕರ ಬಳಿ ಏನೇ ಮಾಹಿತಿ ಇದ್ದರೂ ಕೊಡಲಿ. ಅವರು ನೀಡುವ ಮಾಹಿತಿ ಆಧರಿಸಿಯೇ ತನಿಖೆ ಮಾಡಿಸೋಣ. ಅಪರಾಧಿ ಯಾರೇ ಇದ್ದರೂ ಕ್ರಮ ಕೈಗೊಳ್ಳಲಾಗುವುದು. ಯಾರ ಬಳಿ ಮಾಹಿತಿ ಇದ್ದರೂ ಕರ್ನಾಟಕ ರಾಜ್ಯದ ಹಿತದೃಷ್ಟಿಯಿಂದ ಮಾಹಿತಿ ನೀಡಲು ಮುಂದೆ ಬರಬೇಕು ಎಂದು ನಿಕಟಪೂರ್ವ ಮುಖ್ಯಮಂತ್ರಿ ಮತ್ತು ಬಿಜೆಪಿಯ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಸಲಹೆ ಮಾಡಿದರು. ಯಾವುದೇ ಪಕ್ಷದ ಬಳಿ ಮಾಹಿತಿ ಇದ್ದರೆ ಅದನ್ನು ತನಿಖೆಗೆ ಕೊಡಲಿ. ಬಿಟ್​ಕಾಯಿನ್​ ವಿಚಾರದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮೌನದ ಬಗ್ಗೆ ಪ್ರತಿಕ್ರಿಯಿಸಲು ಯಡಿಯೂರಪ್ಪ ನಿರಾಕರಿಸಿದರು. ಕಾಂಗ್ರೆಸ್ ಬಳಿ ಮಾಹಿತಿ ಇದ್ದರೆ ತನಿಖೆ ನಡೆಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಯಾರೇ ಅಪರಾಧ ಮಾಡಿದ್ದರೂ ಕ್ರಮ ತೆಗೆದುಕೊಳ್ಳಲು ನಾವು ಹಿಂದೆಮುಂದೆ ನೋಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ವಿಧಾನ ಪರಿಷತ್ ಚುನಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ಅಭ್ಯರ್ಥಿಗಳ ಪಟ್ಟಿ ನಾಳೆ (ನ.18) ಪ್ರಕಟವಾಗಬಹುದು. ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುವಂತೆ ಟಿಕೆಟ್​ ಆಕಾಂಕ್ಷಿಗಳಿಗೆ ಸೂಚನೆ ನೀಡಲಾಗಿದೆ. ನಾಳೆಯಿಂದ 4 ತಂಡದಿಂದ ಜನಸ್ವರಾಜ್ ಯಾತ್ರೆ ಆರಂಭವಾಗಲಿದೆ. ಜ್ವಲಂತ ಸಮಸ್ಯೆಗಳ ಬಗ್ಗೆ ಕಾರ್ಯಕರ್ತರ ಜತೆ ಚರ್ಚಿಸುತ್ತೇವೆ. ಪರಿಷತ್ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಸೂಚಿಸುತ್ತೇವೆ. ಈ ಬಾರಿಯ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಪೂರಕ ವಾತಾವರಣ ಇದೆ ಎಂದರು.

ಜನ ಸ್ವರಾಜ್ ಯಾತ್ರೆಯ ಬಳಿಕ, ಅಂದರೆ ಇನ್ನು 10-12 ದಿನಗಳ ಬಳಿಕ ನಾನು ಜಿಲ್ಲೆಗಳಿಗೆ ಭೇಟಿ ಕೊಡುತ್ತೇನೆ. ಪಕ್ಷ ಸಂಘಟನೆ ದೃಷ್ಟಿಯಿಂದ ಕಾರ್ಯಕರ್ತರ ಜತೆ ಸಮಾಲೋಚನೆ ನಡೆಸುತ್ತೇನೆ. ನಾಳೆ ದೆಹಲಿಯಿಂದ ವಿಧಾನಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಬಹುದು. ಎರಡು ಸ್ಥಾನಗಳ ವಿಚಾರದಲ್ಲಿ ತೊಂದರೆ ಆಗಬಹುದು. ಉಳಿದೆಲ್ಲಾ ಸ್ಥಾನಗಳನ್ನು ನಾವು ಗೆಲ್ಲುತ್ತೇವೆ ಎಂದು ಆತ್ಮವಿಶ್ವಾಸದ ಮಾತು ಆಡಿದರು. ಬಿಜೆಪಿ ಜನಸ್ವರಾಜ್ ಯಾತ್ರೆ ಆರಂಭ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಅವರು ಹುಬ್ಬಳ್ಳಿಗೆ ತೆರಳಿದರು. ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿರುವ ಜನಸ್ವರಾಜ್ ಯಾತ್ರೆ ಉತ್ತರ ಕನ್ನಡ ಜಿಲ್ಲೆಯಿಂದ ಆರಂಭವಾಗಲಿದೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಸಚಿವ ಕೆ.ಎಸ್.ಈಶ್ವರಪ್ಪ ನೇತೃತ್ವದ 4 ತಂಡಗಳು ಯಾತ್ರೆಯ ಪ್ರಯುಕ್ತ ವಿವಿಧೆಡೆ ಸಂಚರಿಸಲಿವೆ.

ಇದನ್ನೂ ಓದಿ: ಬಿಟ್​ಕಾಯಿನ್ ತನಿಖೆ ಸರಿಯಾಗಿ ನಡೆದರೆ ರಾಜ್ಯಕ್ಕೆ 3ನೇ ಸಿಎಂ ಹೇಳಿಕೆಗೆ ಬದ್ಧ: ಪ್ರಿಯಾಂಕ್ ಖರ್ಗೆ ಸವಾಲು
ಇದನ್ನೂ ಓದಿ: ಬಿಟ್​ಕಾಯಿನ್ ಅಂದ್ರೆ ಕನ್ನಡಿಯೊಳಗಿನ ಗಂಟು: ಗೃಹ ಸಚಿವ ಆರಗ ಜ್ಞಾನೇಂದ್ರ

TV9 Kannada


Leave a Reply

Your email address will not be published. Required fields are marked *