ಬಿಟ್ಕಾಯಿನ್ (ಸಾಂದರ್ಭಿಕ ಚಿತ್ರ)
ಬೆಂಗಳೂರು: ಸರ್ಕಾರದ ವಿರುದ್ಧ ಬಿಟ್ ಕಾಯಿನ್ ಹಗರಣ ಆರೋಪದ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಿಂದ ಸ್ಪಷ್ಟನೆ ನೀಡಲಾಗಿದೆ. ಪ್ರಕರಣದ ತನಿಖೆಯನ್ನ ಪಾರದರ್ಶಕವಾಗಿ ನಡೆಸಲಾಗಿದೆ. ಯಾವುದೇ ಬಾಹ್ಯ ಒತ್ತಡಗಳಿಗೆ ಒಳಗಾಗಿ ತನಿಖೆ ನಡೆಸಿಲ್ಲ. ಹಗರಣ ಸಂಬಂಧ 3 ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಸೈಬರ್ ಕ್ರೈಂ, ಕೆ.ಜಿ.ನಗರ, ಅಶೋಕನಗರ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ. ಕೆ.ಜಿ.ನಗರ ಠಾಣೆಯಲ್ಲಿ ದಾಖಲಾದ ದೂರಿನಲ್ಲಿ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಈಗಾಗಲೇ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಿಂದ ಸ್ಪಷ್ಟನೆ ನೀಡಲಾಗಿದೆ.
ಕೆ.ಜಿ.ನಗರ ಠಾಣೆಯಲ್ಲಿ ದಾಖಲಾಗಿದ್ದ ದೂರಿನಿಂದ ರಾಜ್ಯದಲ್ಲಿ ಬಿಟ್ ಕಾಯಿನ್ ಹಗರಣದ ಬಗ್ಗೆ ವಿಚಾರ ಬಯಲಾಗಿತ್ತು. ಕಳೆದ ವರ್ಷ ನವೆಂಬರ್ 4 ರಂದು ದೂರು ದಾಖಲಾಗಿತ್ತು. 500 ಗ್ರಾಂ ಹೈಡ್ರೋ ಗಾಂಜಾ ಸಹಿತ ಓರ್ವ ಆರೋಪಿ ಸೆರೆ ಆಗಿದ್ದ. ಬಳಿಕ ಸೆರೆಯಾದ 10 ಜನ ಪೈಕಿ ಶ್ರೀಕಿ ಸಹ ಓರ್ವ ಆರೋಪಿ ಆಗಿದ್ದಾನೆ. ಕ್ರಿಪ್ಟೋ ಕರೆನ್ಸಿ ವೆಬ್‌ಸೈಟ್ ಹ್ಯಾಕಿಂಗ್ ಬಗ್ಗೆ ಆತ ಮಾಹಿತಿ ನೀಡಿದ್ದ. ತನಿಖೆಯಲ್ಲಿ ಹ್ಯಾಕಿಂಗ್ ಬಗ್ಗೆ ಮಾಹಿತಿ ನೀಡಿದ್ದ ಆರೋಪಿ ಶ್ರೀಕಿ. ಬಳಿಕ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾಯಿಸಲಾಗಿತ್ತು ಎಂದು ಪೊಲೀಸ್ ಆಯುಕ್ತರ ಕಚೇರಿಯಿಂದ ಹೇಳಲಾಗಿದೆ.
ತನಿಖೆಯ ದೃಷ್ಟಿಯಿಂದ ಬಿಟ್ ಕಾಯಿನ್ ವ್ಯಾಲೆಟ್ ತೆರೆಯುವುದು ಅಗತ್ಯವಾಗಿತ್ತು. ಕೋರ್ಟ್ ಅನುಮತಿ ಪಡೆದು ಸೈಬರ್ ತಜ್ಞರ ಸಮ್ಮುಖದಲ್ಲಿ ವ್ಯಾಲೆಟ್ ತೆರೆದಿದ್ದೆವು. 31.8 ಬಿಟ್ ಕಾಯಿನ್ ಜಫ್ತಿ ಮಾಡಿ ಪಾಸ್ ವರ್ಡ್ ಸಮೇತ ನ್ಯಾಯಾಲಕ್ಕೆ ಸಲ್ಲಿಸಲಾಗಿದೆ. ಬಳಿಕ ಬಿಟ್ ಕಾಯಿನ್ ವರ್ಗಾವಣೆಗಾಗಿ ನ್ಯಾಯಾಲಯದ ಅನುಮತಿ ಪಡೆಯಲಾಯ್ತು. ವ್ಯಾಲೆಟ್ ತೆರೆದಾಗ ಪತ್ತೆಯಾಗಿದ್ದು 186.811 ಬಿಟ್ ಕಾಯಿನ್. ಅಸಲಿಗೆ ಆರೋಪಿ ಶ್ರೀಕೃಷ್ಣನ ಬಳಿ ಸ್ವಂತ ಬಿಟ್ ಕಾಯಿನ್ ವ್ಯಾಲೆಟ್ ಇರಲಿಲ್ಲ. ಆತನಿಂದ ವಶಕ್ಕೆ ಪಡೆದಿದ್ದು ಲೈವ್ ವ್ಯಾಲೆಟ್ ಆಗಿರುತ್ತದೆ. ಮತ್ತು ಆ ಲೈವ್ ವ್ಯಾಲೆಟ್ ನ ಕೀ ಸಹ ಆರೋಪಿ ಬಳಿ ಪತ್ತೆಯಾಗಿರುವುದಿಲ್ಲ. ಹಾಗಾಗಿ ವಶಪಡಿಸಿಕೊಂಡ ವ್ಯಾಲೆಟ್ ಹಾಗೆಯೇ ಬಿಡಲಾಗಿರುತ್ತದೆ. ಮತ್ತು ಈ ಎಲ್ಲ ವಿವರಣೆಗಳ ಸಹಿತ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.
ಪೊಲೀಸ್ ಸಿಬ್ಬಂದಿ, ನುರಿತ ಸೈಬರ್ ತಜ್ಞರನ್ನ ಒಳಗೊಂಡಂತೆ ತನಿಖೆ ನಡೆಸಲಾಗಿದೆ. ತನಿಖೆಯ ಪ್ರತೀ ಹಂತದಲ್ಲಿಯೂ ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ವೇಲ್ ಅಲರ್ಟ್ ನಲ್ಲಿ 14,682 ಬಿಟ್ ಕಾಯಿನ್ ವರ್ಗಾವಣೆ ಆಗಿದೆ ಎಂದಿರುವುದು ಆಧಾರರಹಿತ. ಈ ನೆಲದ ಕಾನೂನಿನಂತೆ ನಿಷ್ಪಕ್ಷಪಾತ ತನಿಖೆ ಮಾಡಲಾಗಿದೆ. ನಿರ್ದಿಷ್ಟವಲ್ಲದ, ಸಾಮಾಜಿಕ ಜಾಲತಾಣದ ಆರೋಪಗಳಿಗೆ ಉತ್ತರಿಸಲು ಸಾಧ್ಯವಿಲ್ಲ. ಬಂಧಿತ ಆರೋಪಿಗಳು ಮಾಧ್ಯಮಗಳಲ್ಲಿ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಆದರೂ ಸಹ ಯಾವುದೇ ವಿದೇಶಿ, ಅಂತರಾಷ್ಟ್ರೀಯ ತನಿಖಾ ಸಂಸ್ಥೆ ನಮ್ಮನ್ನ ಸಂಪರ್ಕಿಸಿಲ್ಲ. ಆರೋಪಿ ಹೇಳಿಕೊಂಡಿರುವಂತೆ ಹ್ಯಾಕಿಂಗ್ ಆಗಿದೆ ಎನ್ನುವುದನ್ನ ಯಾರೊಬ್ಬರೂ ಖಚಿತಪಡಿಸಿಲ್ಲ ಎಂದು ತಿಳಿಸಿದ್ದಾರೆ.
ಬಿಟ್ ಕಾಯಿನ್ ಹಗರಣದ ಬಗ್ಗೆ ಪ್ರಧಾನಿ ಮಹತ್ವದ ಸಭೆ
ಬಿಟ್ ಕಾಯಿನ್ ಹಗರಣದ ಬಗ್ಗೆ ಪ್ರಧಾನಿ ಮಹತ್ವದ ಸಭೆ ನಡೆಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಾಗಿದೆ. ಹಿರಿಯ ಅಧಿಕಾರಿಗಳ ಜೊತೆ ಪ್ರಧಾನಿ ಮೋದಿ ಚರ್ಚೆ ಮಾಡಿದ್ದಾರೆ. ಆರ್‌ಬಿಐ, ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳು, ಕೇಂದ್ರ ಗೃಹ ಇಲಾಖೆ ಹಿರಿಯ ಅಧಿಕಾರಿಗಳ ಜತೆ ಸಭೆ ಮಾಡಲಾಗಿದೆ. ತಜ್ಞರ ಜೊತೆ ಪ್ರಧಾನಿ ಮಹತ್ವದ ಸಭೆ ನಡೆಸುತ್ತಿದ್ದಾರೆ. ದೆಹಲಿಯ ಪ್ರಧಾನಿ ನಿವಾಸದಲ್ಲಿ ಸಭೆ ನಡೆಯುತ್ತಿದೆ.
ಇದನ್ನೂ ಓದಿ: ಬಿಟ್ಕಾಯಿನ್ ಕುರಿತು ಅಧಿಕಾರಿಗಳ ಆಡಿಯೋ ವೈರಲ್; ಇಬ್ಬರನ್ನೂ ವಿಚಾರಣೆ ನಡೆಸಿದ ಪೊಲೀಸರು
ಇದನ್ನೂ ಓದಿ: ಬಿಟ್ ಕಾಯಿನ್ ಪ್ರಕರಣ: ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಬಸವರಾಜ ಬೊಮ್ಮಾಯಿ ಚರ್ಚೆ