ಬಿಟ್​​ಕಾಯಿನ್ ಯಾರಿಗೆ ತಿರುಗುಬಾಣ..? ಪ್ರಧಾನಿ ಮೋದಿ ಹೇಳಿದ ಆ ಒಂದು ಮಾತು


ರಾಜ್ಯದಲ್ಲಿ ಶ್ರೀಕಿ ಎಸೆದಿರುವ ಬಿಟ್​​ ಕಾಯಿನ್ ಚಕ್ರ ಸುಂಟರಗಾಳಿಯನ್ನೇ ಎಬ್ಬಿಸಿದೆ. ಶ್ರೀಕಿ ಪ್ರಕರಣ ಸದ್ದು ಮಾಡಿದಾಗಿನಿಂದ, ಎಲ್ಲೆಲ್ಲೂ ಬಿಟ್​​ಕಾಯಿನ್​​ನದ್ದೇ ಸುದ್ದಿ. ನಾವ್ಯಾಕ್ ಈ ಮಾತನ್ನ ಹೇಳ್ತಿದ್ದೀವಿ ಗೊತ್ತಾ? ಇವತ್ತು ಬಿಟ್​​ಕಾಯಿನ್ ಮೋಹದಲ್ಲಿ ಯುವಪೀಳಿಗೆ ಸಿಲುಕಿ, ಅದರ ದುರುಪಯೋಗವಾಗೋದರ ಬಗ್ಗೆ ಖುದ್ದು ಪ್ರಧಾನಿ ಮೋದಿಯವ್ರೇ ಎಚ್ಚರಿಕೆ ನೀಡಿದ್ದಾರೆ.. ಅದೂ ವಿದೇಶಿ ನೆಲದಲ್ಲಿ ನಿಂತು..

 ಬಿಟ್‌ಕಾಯಿನ್‌ ಅಥವಾ ಕ್ರಿಪ್ಟೋಕರೆನ್ಸಿ ಉದಾಹರಣೆಯನ್ನೇ ತೆಗೆದುಕೊಳ್ಳಿ. ಲಕ್ಷಾಂತರ ಭಾರತೀಯರು ಡಿಜಿಟಲ್ ಕರೆನ್ಸಿಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಬಿಟ್​ಕಾಯಿನ್ ಅಥವಾ ಕ್ರಿಪ್ಟೋ ಕರೆನ್ಸಿಗಳು  ಅಕ್ರಮ ಎಸಗುವ ದುಷ್ಟರ ಕೈಗೆ ಸಿಗದಂತೆ ನೋಡಿಕೊಳ್ಳಬೇಕು. ಕ್ರಿಪ್ಟೋ ಕರೆನ್ಸಿಯು ಯುವ ಸಮೂಹವನ್ನು ಹಾಳು ಮಾಡಬಹುದು. ಆದ್ದರಿಂದ ಕ್ರಿಪ್ಟೋ ಕರೆನ್ಸಿ ವಿಚಾರದಲ್ಲಿ ನಾವು ಒಟ್ಟಾಗಿ ಕೆಲ್ಸ ಮಾಡಬೇಕು -ನರೇಂದ್ರ ಮೋದಿ, ಪ್ರಧಾನ ಮಂತ್ರಿ

ಭಾರತದಲ್ಲಿ ಹೆಚ್ಚಾಗುತ್ತಿರುವ ಬಿಟ್ ಕಾಯಿನ್ ವ್ಯವಹಾರ ಕ್ರಿಪ್ಟೋ ಕರೆನ್ಸಿ ಬಗ್ಗೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ   ವರ್ಚುವಲ್  ಮೂಲಕ ನಡೆದ ಸಂವಾದದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದ  ರೀತಿ ಇದು.  ದೂರದ ಸಿಡ್ನಿಯಲ್ಲಿ ಕೂತು ಬಿಟ್​ಕಾಯಿನ್ ಬಗ್ಗೆ, ಕ್ರಿಫ್ಟೋ ಕರೆನ್ಸಿಯ ಬಗ್ಗೆ ಆಡಿರುವ ಮಾತುಗಳು, ರಾಜ್ಯದ ಬಿಟ್​ ಕಾಯಿನ್ ಪ್ರಕರಣವನ್ನೇ ಗುರಿ ಮಾಡಿದಂತಿದೆ.

ಸಿಡ್ನಿಯಲ್ಲೂ ಸ್ಫೋಟವಾಯಿತು ಶ್ರೀಕಿಯ ‘ಬಿಟ್​ ಬಾಂಬ್’
ರಾಜಕೀಯ ನಾಯಕರ ತಲೆನೋವಿಗೆ ಕಾರಣವಾದ ಶ್ರೀ‘ಕೀ’?

ಹೌದು.. ಪ್ರಶಾಂತವಾಗಿದ್ದ ರಾಜಕೀಯ ರಂಗದ ಕೊಳದಲ್ಲಿ ಶ್ರೀಕಿ ಎಸೆದ ಬಿಟ್​ ಕಾಯಿನ್ ವೆರೈಟಿ ವೆರೈಟಿ ತರಂಗ ಎಬ್ಬಿಸಿದೆ. ಅಲೆಗಳೇ ಇಲ್ಲದ ಸಮುದ್ರದಂತೆ ಶಾಂತವಾಗಿದ್ದ ರಾಜಕೀಯ ಸಾಗರದಲ್ಲಿ ಬಿಟ್​ ಕಾಯಿನ್ ಹೊಸ ಬಿರುಗಾಳಿ ಬೀಸುವಂತೆ ಮಾಡಿದೆ. ರಾಜ್ಯ ರಾಜಕಾರಣದಿಂದ ಹಿಡಿದು ರಾಷ್ಟ್ರ ರಾಜಕಾರಣದವರೆಗೂ ಪ್ರಕರಣ ಭಾರೀ ಸದ್ದು ಮಾಡ್ತಿದೆ. ಎಲ್ಲಾ ರಾಜಕೀಯ ನಾಯಕರ ಎದೆಯಲ್ಲಿ ಬಿಟ್​ ಕಾಯಿನ್​ ಅನ್ನೋ  ಪದ  ಪದೇ ಪದೇ ರಿಂಗಣಿಸುತ್ತಿದೆ. ತೂತುಬಿದ್ದ ದೋಣಿಯು ಕಡಲೊಳಗೆ ಸಿಕ್ಕಿ ಮುಳುಗು, ಏಳುವ ಆಟವಾಡುವ ಹಾಗೇ, ಬಿಜೆಪಿ ಬಿಟ್ರೆ ಕಾಂಗ್ರೆಸ್, ಕಾಂಗ್ರೆಸ್ ಬಿಟ್ರೆ ಬಿಜೆಪಿ ಬಿಟ್​ ಕಾಯಿನ್​ ಪ್ರಕರಣದಲ್ಲಿ ಪದೇ ಪದೇ ಸಿಕ್ಕಿಕೊಳ್ತಿವೆ.

ಬಿಟ್​ಕಾಯಿನ್ ಬಗ್ಗೆ ಪ್ರಧಾನಿ ಕಳವಳ ವ್ಯಕ್ತಪಡಿಸಿದ್ದೇಕೆ..?
ಶ್ರೀಕಿ ಬಿಟ್ಟ  ಬಿಟ್​ ಚಕ್ರಕ್ಕೆ ದಂಗಾದ್ರಾ ‘ದೆಹಲಿ ದೊರೆಗಳು’?

ಶ್ರೀಕಿ ಅನ್ನೋ  25 ವರ್ಷದ ಯುವಕ, ಎಬ್ಬಿಸಿರೋ ಬಿಟ್​ಕಾಯಿನ್ ಬಿರುಗಾಳಿ ದೆಹಲಿವರೆಗೂ ವ್ಯಾಪಿಸಿದೆ. ಯಾಕಂದ್ರೆ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ,  ಬಿಜೆಪಿಯ ಎಲ್ಲಾ ಧುರೀಣರಿಗೂ ರಾಜ್ಯದಲ್ಲಾಗುತ್ತಿರುವ ಬೆಳವಣಿಗೆಗಳ ಬಗ್ಗೆ ಈಗಾಗಲೇ ಮಾಹಿತಿ ಪಾಸ್ ಆಗಿದೆ.  ಯಾವಾಗ ಅಂತರಾಷ್ಟ್ರೀಯ ಮಟ್ಟದಲ್ಲಿ ಶ್ರೀಕಿಯ ಲೀಲೆಗಳು ಭಾರತಕ್ಕೆ ಮುಜುಗರ ಉಂಟುಮಾಡ್ತೋ, ಕೇಂದ್ರದ ನಾಯಕರು ಕ್ರಿಪ್ಟೋ ಕರೆನ್ಸಿ ವಿಚಾರದಲ್ಲಿ ಯುವಪೀಳಿಗೆಯನ್ನು ಎಚ್ಚರಿಸುವ ಕೆಲಸ ಮಾಡ್ತಿದ್ದಾರೆ.

ಒಂದು ಕಡೆ ಪ್ರಧಾನಿ ಮೋದಿ  ಕೂಡ  ಬಿಟ್​ಕಾಯಿನ್ ಬಗ್ಗೆ ಸಿಡ್ನಿಯಲ್ಲಿ ಮಾತನಾಡ್ತಿದ್ರೆ,  ಇತ್ತ ಹುಬ್ಬಳಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪನವರೂ ಪ್ರಕರಣದ ಬಗ್ಗೆ ರಿಯಾಕ್ಷನ್ ಕೊಟ್ರು. ಬಿಟ್​ ಕಾಯಿನ್ ಪ್ರಕರಣದಲ್ಲಿ ಯಾರೇ ಇದ್ದರೂ ಅವರ ವಿರುದ್ಧ ಕ್ರಮ ಕೊಳ್ಳಲು ಮೋದಿ ಪ್ರಯತ್ನ  ಮಾಡ್ತಿದ್ದು, ಇಲ್ಲಿ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ ಅಂತಾ ಹೇಳಿದ್ರು..

ಬಿಟ್​​ಕಾಯಿನ್ ಯಾರಿಗೆ ಅಸ್ತ್ರ? ಯಾರಿಗೆ ತಿರುಗುಬಾಣ..?
ಶ್ರೀಕಿಯ ಲೀಲೆ ಯುವಜನರ ಅಡ್ಡದಾರಿಗೆ ಕಾರಣವಾಗುತ್ತಾ?

ಎರಡೂ ರಾಜಕೀಯ ಪಕ್ಷಗಳ ಪಾಲಿಗೆ ಸ್ಲೋ ಪಾಯಿಸನ್ ಆಗಿರುವ ಬಿಟ್​ಕಾಯಿನ್​ ಪ್ರಕರಣದಲ್ಲಿ ಈಗಾಗಲೇ ಹಲವು ನಾಯಕರಿಗೆ ನಡುಕ ಶುರುವಾಗಿದೆ. ಕೆಲವರ ಹೆಸರನ್ನ ಕೆಲವು ನಾಯಕರು ಬಹಿರಂಗವಾಗಿ ಹೇಳ್ತಿದ್ರೆ, ಪ್ರಕರಣದಲ್ಲಿ ಇನ್ನೂ ಹಲವರ ಪಾತ್ರ ನಿಗೂಢವಾಗಿದೆ.

ಒಟ್ಟಿನಲ್ಲಿ ಅದೇನೇ ಇರಲಿ, ಶ್ರೀಕಿಯ ಬಿಟ್​ ಕಾಯಿನ್ ಬಾಂಬ್ ದಿನಕ್ಕೊಂದು ರಾಜಕೀಯ ಪಕ್ಷದ ಮನೆಯಲ್ಲಿ ಸಿಡಿಯುತ್ತಿದೆ. ಕ್ಷಣಕ್ಕೊಬ್ಬರನ್ನ ತೆಕ್ಕೆಗೆ ಸೆಳೆದುಕೊಳ್ತಿದೆ. ಏನೇ ಆಗ್ಲಿ ಒಬ್ಬ ಚಿಕ್ಕ ವಯಸ್ಸಿನ ಯುವಕ ತನಗಿರುವ ಬುದ್ಧಿವಂತಿಕೆಯನ್ನ ಒಳ್ಳೆ ಕೆಲಸಕ್ಕೆ ಬಳಸುವ ಬದಲು. ಈ ರೀತಿ ಅಪರಾಧ ಕೃತ್ಯಕ್ಕೆ ಬಳಸಿಕೊಂಡಿದ್ದು ನಿಜಕ್ಕೂ ದುರಂತ. ಅದನ್ನೇ ಪ್ರಧಾನಿ ಮೋದಿಯವರು ಹೇಳಿದ್ದು.. ಕ್ರಿಪ್ಟೋಕರೆನ್ಸಿಯಿಂದ ಯುವಪೀಳಿಗೆ ದಾರಿ ತಪ್ಪಬಹುದು ಅಂತಾ.

News First Live Kannada


Leave a Reply

Your email address will not be published. Required fields are marked *