ಬಿಟ್​ ಕಾಯಿನ್ ದಂಧೆಯಲ್ಲಿ ಕಾಂಗ್ರೆಸ್​ನವರಿದ್ದರೆ ಹೆಸರು ಹೇಳಿ ಬಂಧಿಸಲಿ; ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ಸವಾಲು | Bitcoin Scam Siddaramaiah Challenges CM Basavaraj Bommai to disclose Bitcoin Scam Accused Names


ಬಿಟ್​ ಕಾಯಿನ್ ದಂಧೆಯಲ್ಲಿ ಕಾಂಗ್ರೆಸ್​ನವರಿದ್ದರೆ ಹೆಸರು ಹೇಳಿ ಬಂಧಿಸಲಿ; ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ಸವಾಲು

ಸಿದ್ದರಾಮಯ್ಯ- ಬಸವರಾಜ ಬೊಮ್ಮಾಯಿ

ಬೆಂಗಳೂರು: ಕರ್ನಾಟಕದಲ್ಲಿ ಬಿಟ್ ಕಾಯಿನ್ ದಂಧೆಯ ಕುರಿತ ಚರ್ಚೆ ತಾರಕಕ್ಕೇರಿದೆ. ಬಿಜೆಪಿ ಮತ್ತು ಕಾಂಗ್ರೆಸ್​ನವರು ಈ ಕುರಿತು ಪರಸ್ಪರ ಕೆಸರೆರಚಾಟ ಮಾಡಿಕೊಳ್ಳುತ್ತಲೇ ಇದ್ದಾರೆ. ಇದೀಗ ಈ ಕುರಿತು ಮತ್ತೆ ವಾಗ್ದಾಳಿ ನಡೆಸಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah), ಬಿಟ್‌ ಕಾಯಿನ್ ಹಗರಣದಲ್ಲಿ (Bitcoin Scam) ಬಿಜೆಪಿಯವರು ಇದ್ದಾರೆ ಎನ್ನುವ ಮೂಲಕ ಈ ಹಗರಣದಲ್ಲಿ ಕಾಂಗ್ರೆಸ್‌ನವರಿದ್ದಾರೆಂಬ ಸಿಎಂ ಬಸವರಾಜ ಬೊಮ್ಮಾಯಿ ಅವರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಅಲ್ಲದೆ, ಬಿಟ್ ಕಾಯಿನ್ ದಂಧೆಯಲ್ಲಿ ಕಾಂಗ್ರೆಸ್‌ನವರು ಇದ್ದರೆ ಅವರನ್ನು ಬಂಧಿಸಲಿ ಎಂದು ಸಿಎಂ ಬೊಮ್ಮಾಯಿ(Basavaraj Bommai)ಗೆ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ಬಿಟ್‌ ಕಾಯಿನ್ ಕೇಸ್‌ನಲ್ಲಿ ಕಾಂಗ್ರೆಸ್‌ನವರಿರುವುದು ಸಾಬೀತಾದರೆ ಬಂಧಿಸಲಿ. ಈ ಪ್ರಕರಣದ ಬಗ್ಗೆ ಸಿಎಂ ಬೇಜವಾಬ್ದಾರಿತನದ ಹೇಳಿಕೆ ನೀಡ್ತಿದ್ದಾರೆ. ಕಾಂಗ್ರೆಸ್‌ ಪಕ್ಷದವರು ಭಾಗಿಯಾಗಿದ್ದರೆ ಅವರ ಹೆಸರು ಹೇಳಲಿ. ಅವರದ್ದೇ ಸರ್ಕಾರವಿದೆ, ಆರೋಪಿಗಳ ಹೆಸರು ಹೇಳಲಿ. ಹೆಸರು ಹೇಳಲು ಆಗಿಲ್ಲ ಅಂದ್ರೆ ಸರ್ಕಾರ ಬಿಟ್ಟು ಕೊಡಲಿ. ನಾವು ಅಧಿಕಾರಕ್ಕೆ ಬಂದು ಆರೋಪಿಗಳ ಹೆಸರು ಹೇಳ್ತೇವೆ. ಸಿಎಂ ಈ ರೀತಿ ಮಾತನಾಡಿದ್ದು ನೋಡಿದರೆ ಅನುಮಾನ ಹೆಚ್ಚಾಗುತ್ತಿದೆ. ಅವರೇ ಸಿಕ್ಕಿಹಾಕಿಕೊಂಡಿರುವಂತೆ ನಡೆದುಕೊಳ್ಳುತ್ತಿದ್ದಾರೆ. ಆದ್ರೆ ನಾನು ಎಲ್ಲೂ ಸಿಎಂ ಬಸವರಾಜ ಬೊಮ್ಮಾಯಿ ಅವರ ಹೆಸರು ಹೇಳಿಲ್ಲ. ಆದರೂ ಅವರ ಹೇಳಿಕೆ ನೋಡುತ್ತಿದ್ದರೆ ಅನುಮಾನ ಬರ್ತಿದೆ. ಆರೋಪಿ ಶ್ರೀಕೃಷ್ಣ ಏನು ಹೇಳಿದ್ದಾರೆಂದು ಸರ್ಕಾರ ಬಹಿರಂಗಪಡಿಸಲಿ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಇನ್ನು, ಬಿಟ್ ಕಾಯಿನ್ ಪ್ರಕರಣದ ಕುರಿತು ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಕೂಡ ಪ್ರತಿಕ್ರಿಯೆ ನೀಡಿದ್ದು, ಬಿಟ್ ಕಾಯಿನ್ ಬಗ್ಗೆ ಬಿಜೆಪಿ, ಕಾಂಗ್ರೆಸ್​ ನಡುವೆ ಆರೋಪ ಹೆಚ್ಚಾಗಿದೆ. ಇವರ ಮೇಲೆ ಅವರು, ಅವರ ಮೇಲೆ ಇವರು ಆರೋಪಿಸುತ್ತಿದ್ದಾರೆ. 2 ಪಕ್ಷಗಳ ಕೆಸರೆರಚಾಟದಿಂದ ಸತ್ಯ ಹೊರಗೆ ಬರುವುದಿಲ್ಲ. ಆರೋಪ ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತವಾಗುತ್ತಿದೆ. 2016-17ರಲ್ಲಿ ಬಿಟ್ ಕಾಯಿನ್ ದಂಧೆ ಬೆಳಕಿಗೆ ಬಂದಿತ್ತು. ಆಗ ಸಿಎಂ ಆಗಿದ್ದವರು ಈಗ ಪ್ರತಿಪಕ್ಷ ನಾಯಕರಾಗಿದ್ದಾರೆ ಎಂದು ಸಿದ್ದರಾಮಯ್ಯನವರ ವಿರುದ್ಧ ಪರೋಕ್ಷವಾಗಿ ಟೀಕಾ ಪ್ರಹಾರ ನಡೆಸಿದ್ದಾರೆ.

ಪ್ರಧಾನಿ ಅಮೆರಿಕ ಪ್ರವಾಸದಲ್ಲಿದ್ದಾಗ ಮಾಹಿತಿ ತಿಳಿದಿದೆಯಂತೆ. ಸರ್ಕಾರದಲ್ಲಿ ಇರುವವರು ಸತ್ಯವನ್ನು ಬಯಲು ಮಾಡಬೇಕು. ಯಾವ ತನಿಖೆ ಮಾಡಿದ್ರೂ ಸರ್ಕಾರದ ಅಡಿಯಲ್ಲೇ ನಡೆಯುತ್ತದೆ. ನಿಖರವಾಗಿ ಮಾಹಿತಿ ಇಲ್ಲದೆ ಪ್ರಚಾರಕ್ಕೆ ಹೇಳಿಕೆ ನೀಡಲ್ಲ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಹೆಚ್​ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ವಸೂಲಿ ಕಿಂಗ್, ಬಿಟ್ ಕಾಯಿನ್ ದಂಧೆ ಕುರಿತು ದಾಖಲೆಯಿದ್ದರೆ ಬಹಿರಂಗಪಡಿಸಲಿ; ಸಚಿವ ಈಶ್ವರಪ್ಪ ಸವಾಲ್

ಬಿಟ್ ಕಾಯಿನ್ ಪ್ರಕರಣ ಸಿಎಂ ಬಲಿ ಪಡೆಯುತ್ತೆ; ಶಾಸಕ ಪ್ರಿಯಾಂಕ್ ಖರ್ಗೆ ಹೇಳಿಕೆ

TV9 Kannada


Leave a Reply

Your email address will not be published.