ಬಿಟ್ ಕಾಯಿನ್ ವಿಚಾರ ಡೈವರ್ಟ್ ಮಾಡಲು ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡಲಾಗುತ್ತಿದೆ: ರಾಮಲಿಂಗಾರೆಡ್ಡಿ | Congress Leader Ramalinga Reddy on Siddaramaiah Bitcoin Dalit issue Karnataka Politics


ಬಿಟ್ ಕಾಯಿನ್ ವಿಚಾರ ಡೈವರ್ಟ್ ಮಾಡಲು ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡಲಾಗುತ್ತಿದೆ: ರಾಮಲಿಂಗಾರೆಡ್ಡಿ

ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ

ಬೆಂಗಳೂರು: ಅಧಿಕಾರಕ್ಕಾಗಿ ಕೆಲ ರಾಜಕಾರಣಿಗಳು ಬಿಜೆಪಿಗೆ ಹೋದರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಸಿದ್ದರಾಮಯ್ಯ ಈ ರೀತಿ ಹೇಳಿಕೆ ನೀಡಿದ್ದಾರೆ. ಹೊಟ್ಟೆಪಾಡಿಗೆ ಹೋಗಿದ್ದಾರೆ ಎಂದು ಎಲ್ಲಿಯೂ ಹೇಳಿಲ್ಲ. ಬಿಜೆಪಿಯವರು ವಿಷಯ ತಿರುಚುವುದರಲ್ಲಿ ಪರಿಣಿತರು. ವಿಷಯಾಂತರ ಮಾಡುವುದರಲ್ಲಿ ಬಿಜೆಪಿಯವರು ನಿಸ್ಸೀಮರು ಎಂದು ಬೆಂಗಳೂರಿನಲ್ಲಿ ಇಂದು (ನವೆಂಬರ್ 6) ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ ಸರ್ಕಾರ ದಲಿತರಿಗೆ ವಿಶೇಷ ಕೆಲಸ ಮಾಡಿದೆ. 5 ವರ್ಷದಲ್ಲಿ ಬಿಜೆಪಿ ಕೇವಲ 22 ಸಾವಿರ ಕೋಟಿ ರೂಪಾಯಿ ನೀಡಿದೆ. ಆದರೆ, ಕಾಂಗ್ರೆಸ್ 88 ಸಾವಿರ ಕೋಟಿ ರೂಪಾಯಿ ದಲಿತರಿಗೆ ನೀಡಿದೆ. ಇದು ಸಿದ್ದರಾಮಯ್ಯ ಅವರ ದಲಿತಪರ ಕಾಳಜಿ ತಿಳಿಸುತ್ತೆ. ಬಿಜೆಪಿಯವರದ್ದು ಮೊಸಳೆ ಕಣ್ಣೀರು ಎಂದು ರಾಮಲಿಂಗಾರೆಡ್ಡಿ ಬಿಜೆಪಿ ನಾಯಕರ ಟೀಕೆಗೆ ತಿರುಗೇಟು ನೀಡಿದ್ದಾರೆ.

ಬಿಟ್ ಕಾಯಿನ್ ದಂಧೆ ಪ್ರಕರಣದ ತನಿಖೆಯಾದರೆ, ಅದರ ಬಗ್ಗೆ ನಿಷ್ಪಕ್ಷಪಾತ ತನಿಖೆಯಾದ್ರೆ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಕಂಟಕ ಎದುರಾಗಲಿದೆ. ಬಿಟ್ ಕಾಯಿನ್ ವಿಚಾರ ಡೈವರ್ಟ್ ಮಾಡಲು ಈ ಆರೋಪ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ದಲಿತ ವಿರೋಧಿ ಎಂದು ಬಿಂಬಿಸುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಬಿಟ್ ಕಾಯಿನ್‌ ಹ್ಯಾಕ್​​ ಮಾಡಿ ಕೋಟ್ಯಂತರ ಹಣ ಮಾಡಿದ್ದಾರೆ. 7 ರಿಂದ 8 ಸಾವಿರ ಕೋಟಿ ಮಾಡಿದ ಬಗ್ಗೆ ಮಾತಾಡ್ತಿದ್ದಾರೆ. ಇದರ ಹಿಂದೆ ಪ್ರಭಾವಿಗಳು ಇರುವ ಮಾಹಿತಿ ಇದೆ. ಬಿಟ್​ ಕಾಯಿನ್​ ದಂಧೆ ಬಗ್ಗೆ ಎಫ್‌ಬಿಐ ತನಿಖೆ ಮಾಡ್ತಿದೆ. ಈಗ ಸಿಬಿಐಗೆ ಕೊಟ್ಟಿದ್ದಾಗಿ ಗೃಹ ಸಚಿವರು ಹೇಳುತ್ತಿದ್ದಾರೆ. ಯಾವಾಗ ಸಿಬಿಐ ತನಿಖೆಗೆ ಕೊಟ್ಟರು ಎಂದು ಗೊತ್ತಾಗುತ್ತಿಲ್ಲ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಕಟ್ಟಿದ ಮನೆಯಲ್ಲಿ ವಿಷ ಸರ್ಪದಂತೆ ಸೇರಿಕೊಂಡರು: ಛಲವಾದಿ ನಾರಾಯಣಸ್ವಾಮಿ
ದಲಿತರು ಹೊಟ್ಟೆಪಾಡಿಗೋಸ್ಕರ ಬಿಜೆಪಿ ಸೇರಿದ್ದಾರೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಇಂದು (ನವೆಂಬರ್ 6) ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಬಿಜೆಪಿ ಎಸ್.ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಪ್ರತಿಕ್ರಿಯೆ ನೀಡಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ ಹಲವು ಬಾರಿ ಸತ್ಯ ಹೇಳ್ತಾರೆ. ಅವರ ಮನಸಿನಲ್ಲಿರುವುದನ್ನ ಬೇರೆಯವರ ಮೇಲೆ ಹೇಳ್ತಾರೆ. ಕಾಂಗ್ರೆಸ್ ಪಕ್ಷ ಹೇಗೆ ಮುಸ್ಲಿಮರನ್ನ ಬಳಸಿಕೊಳ್ಳುತ್ತಿದೆ. ಹೊಟ್ಟೆಪಾಡಿಗಾಗಿ ಹೇಗೆ ಬಳಸಿಕೊಳ್ತಿದೆ ಎಂದು ಹೇಳಿದ್ದಾರೆ ಎಂದು ಹೇಳಿಕೆ ನೀಡಿದ್ದರು.

ದಲಿತರನ್ನಿಟ್ಟುಕೊಂಡು ರಾಜಕೀಯ ಮಾಡೋದು ಕಾಂಗ್ರೆಸ್. ಅಂಬೇಡ್ಕರ್‌ರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಕಾಂಗ್ರೆಸ್. ಬಾಬು ಜಗಜೀವನ ರಾಮ್​ರನ್ನ ಪ್ರಧಾನಿ ಮಾಡದೆ ದಲಿತರನ್ನ ಹೇಗೆ ಮತಬ್ಯಾಂಕ್ ಮಾಡಿಕೊಳ್ಳಲಾಯ್ತು ಎಂದು ಗೊತ್ತಿದೆ ಎಂದು ರವಿಕುಮಾರ್ ಹೇಳಿದ್ದರು.

ಕಟ್ಟಿದ ಮನೆಯಲ್ಲಿ ವಿಷ ಸರ್ಪದಂತೆ ಸೇರಿಕೊಂಡರು. ರಾಜ್ಯ ಕಾಂಗ್ರೆಸ್‌ನಲ್ಲಿ ಒಬ್ಬೊಬ್ಬರನ್ನೇ ಮುಗಿಸುತ್ತಾ ಬಂದರು. ಅನ್ನ ಹಳಸಿತ್ತು ನಾಯಿ ಹಸಿದಿತ್ತು ಎಂಬ ಮಾತು ಸೂಕ್ತವಾಗಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಈ ಮಾತು ಸೂಕ್ತವಾಗಿದೆ. ಡಾ.ಹೆಚ್.ಸಿ.ಮಹಾದೇವಪ್ಪ ಸಿದ್ದರಾಮಯ್ಯರ ಕಂಕಳ ಕೂಸು. ಆರ್.ಧ್ರುವನಾರಾಯಣ ಈಗ ಅಡಕತ್ತರಿಯಲ್ಲಿ ಸಿಲುಕಿದ್ದಾರೆ. ಸುದ್ದಿಗೋಷ್ಠಿ ಮಾಡಿದರೆ ಡಿ.ಕೆ.ಶಿವಕುಮಾರ್ ಬಯ್ಯುತ್ತಾರೆ. ಸುದ್ದಿಗೋಷ್ಠಿ ಮಾಡದಿದ್ದರೆ ಸಿದ್ದರಾಮಯ್ಯ ಬಯ್ಯುತ್ತಾರೆ. ದ್ವೇಷದ ರಾಜಕಾರಣ ಮಾಡೋದರಲ್ಲಿ ಅವರದ್ದು ಎತ್ತಿದ ಕೈ ಎಂದು ಸಿದ್ದರಾಮಯ್ಯ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದರು.

ಇದನ್ನೂ ಓದಿ: ನನ್ನ ಮೇಲೆ ಪೆಗಾಸಸ್ ಬಳಸಿ ಗೂಢಚರ್ಯೆ ನಡೆಸಲಾಗುತ್ತಿದೆ: ಸಿದ್ದರಾಮಯ್ಯ ಆತಂಕಕ್ಕೆ ಕೇಂದ್ರ ಗೃಹ ಇಲಾಖೆ ಸ್ಪಂದನೆ

ಇದನ್ನೂ ಓದಿ: ಕಟ್ಟಿದ ಮನೆಯಲ್ಲಿ ವಿಷ ಸರ್ಪದಂತೆ ಸೇರಿಕೊಂಡರು: ಸಿದ್ದರಾಮಯ್ಯ ವಿರುದ್ಧ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ

TV9 Kannada


Leave a Reply

Your email address will not be published.