ಬಿಡುಗಡೆಗೆ ಸಿದ್ಧವಾಯ್ತು ‘ಅಘೋರ’ ಸಿನಿಮಾ; ಅಘೋರಿ ಪಾತ್ರದಲ್ಲಿ ಹಿರಿಯ ನಟ ಅವಿನಾಶ್​ | Aghora Kannada movie that features senior actor Avinash in aghori role will release on 4th March


ಬಿಡುಗಡೆಗೆ ಸಿದ್ಧವಾಯ್ತು ‘ಅಘೋರ’ ಸಿನಿಮಾ; ಅಘೋರಿ ಪಾತ್ರದಲ್ಲಿ ಹಿರಿಯ ನಟ ಅವಿನಾಶ್​

‘ಅಘೋರ’ ಚಿತ್ರತಂಡ

ಹಿರಿಯ ನಟ ಅವಿನಾಶ್​ (Actor Avinash), ಅಶೋಕ್​, ರಚನಾ ದಶರತ್​, ದ್ರವ್ಯಾ ಶೆಟ್ಟಿ, ಪುನೀತ್​ ಗೌಡ ಮುಂತಾದವರು ನಟಿಸಿರುವ ‘ಅಘೋರ’ (Aghora Kannada Movie) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ‘ಅಘೋರ’ ಎಂದ ತಕ್ಷಣ ಇದು ಅಘೋರಿಗಳ ಕುರಿತಾದ ಸಿನಿಮಾ ಎಂದು ಸಿನಿಪ್ರಿಯರು ಊಹಿಸುವುದು ಸಹಜ. ಆದರೆ ನಿರ್ದೇಶಕ ಎನ್​.ಎಸ್​. ಪ್ರಮೋದ್​ ರಾಜ್​ ಹೇಳುವುದೇ ಬೇರೆ. ‘ಇದು ಅಘೋರಿಗಳ (Aghori) ಬಗ್ಗೆ ಮಾಡಿರುವ ಸಿನಿಮಾ ಅಲ್ಲ. ಕಾಸ್ಮಿಕ್​ ಎನರ್ಜಿ ಕುರಿತ ಕಥೆ ಇದೆ. ಜಗತ್ತಿನಲ್ಲಿ ಪಂಚಭೂತಗಳು ತುಂಬ ಮುಖ್ಯ. ನಮ್ಮ ದೇಹದಲ್ಲಿಯೂ ಅವು ಮಹತ್ವದ ಪಾತ್ರ ವಹಿಸುತ್ತವೆ. ಈ ವಿಚಾರವನ್ನು ಹಾರರ್​ ಶೈಲಿಯಲ್ಲಿ ಪ್ರಸ್ತುತಪಡಿಸಿದ್ದೇವೆ. ಅಘೋರ ಎಂದರೆ ಒಂದು ಘಟನೆ. ಅದನ್ನು ಆಧರಿಸಿ ಈ ಸಿನಿಮಾ ಇದೆ’ ಎಂದು ನಿರ್ದೇಶಕರು ಹೇಳಿದ್ದಾರೆ. ಉಪೇಂದ್ರ ನಟನೆಯ ‘ಮತ್ತೆ ಬಾ ಉಪೇಂದ್ರ’ ಚಿತ್ರದಲ್ಲಿ ಸಹಾಯಕ ನೃತ್ಯ ನಿರ್ದೇಶಕನಾಗಿ ಪ್ರಮೋದ್​ ರಾಜ್​ ಕೆಲಸ ಮಾಡಿದ್ದರು. ಆ ವೇಳೆ ಭೇಟಿಯಾದ ಸಾಧುವೊಬ್ಬರು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದರು. ಅವರು ಹೇಳಿದ ಮಾತುಗಳಿಂದ ಸ್ಫೂರ್ತಿ ಪಡೆದ ಪ್ರಮೋದ್​ ರಾಜ್ ಅವರು ಈ ಸಿನಿಮಾ ನಿರ್ದೇಶಿಸಿದ್ದಾರೆ. ಚಿತ್ರಕಥೆಯಲ್ಲಿ ಹೊಸ ಪ್ರಯತ್ನಗಳನ್ನು ಮಾಡಿರುವುದಾಗಿ ಅವರು ಹೇಳಿದ್ದಾರೆ. ಈ ಪ್ರಯತ್ನಗಳು ಜನರಿಗೆ ಇಷ್ಟ ಆಗುತ್ತವೆ ಎಂಬ ಭರವಸೆ ಚಿತ್ರತಂಡಕ್ಕಿದೆ.

ಇತ್ತೀಚೆಗೆ ಈ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು. ಕಾರಣಾಂತರಗಳಿಂದ ಹಿರಿಯ ನಟ ಅವಿನಾಶ್​ ಅವರು ಸುದ್ದಿಗೋಷ್ಠಿಗೆ ಹಾಜರಾಗಿರಲಿಲ್ಲ. ಇದೇ ಮೊದಲ ಬಾರಿಗೆ ಅವಿನಾಶ್​ ಅವರು ಅಘೋರಿ ಪಾತ್ರ ಮಾಡಿದ್ದಾರೆ. ಅಘೋರಿ ವೇಷಕ್ಕಾಗಿ ಮೇಕಪ್​ ಮಾಡಿಕೊಳ್ಳುವುದು ಕಷ್ಟದ ಕೆಲಸ. ಕಥೆ ಇಷ್ಟ ಆಗಿದ್ದರಿಂದ ಅವರು ಈ ಪಾತ್ರ ಒಪ್ಪಿಕೊಂಡರು. ‘ಇದು 24 ಗಂಟೆಯಲ್ಲಿ ನಡೆಯುವ ಕಥೆ. ಹಾಗಾಗಿ ಪೂರ್ತಿ ಚಿತ್ರೀಕರಣವನ್ನು ಬೆಂಗಳೂರಿನ ಒಂದೇ ಮನೆಯಲ್ಲಿ ಮಾಡಿದ್ದೇವೆ. ಕೆಆರ್​ಜಿ ಸ್ಟುಡಿಯೋಸ್​ ಮೂಲಕ ನಮ್ಮ ಸಿನಿಮಾ ಬಿಡುಗಡೆ ಆಗುತ್ತಿರುವುದು ಖುಷಿಯ ವಿಚಾರ’ ಎಂದಿದ್ದಾರೆ ನಿರ್ದೇಶಕರು.

ಪಂಚಭೂತಗಳನ್ನು ಪ್ರತಿನಿಧಿಸುವಂತಹ ಹೆಸರುಗಳನ್ನು ಈ ಚಿತ್ರದ ಮುಖ್ಯ ಪಾತ್ರಗಳಿಗೆ ಇಡಲಾಗಿದೆ. ಯಾಕೆ ಎಂಬುದು ಸಿನಿಮಾ ನೋಡಿದಾಗ ತಿಳಿಯಲಿದೆ ಎಂದಿದ್ದಾರೆ ನಟ ಅಶೋಕ್​. ‘ನನ್ನ ಪಾತ್ರದ ಹೆಸರು ಅಗ್ನಿ. ಅದು ದೀಪವೂ ಆಗಬಹುದು, ಕಾಡ್ಗಿಚ್ಚು ಕೂಡ ಆಗಬಹುದು. ತುಂಬ ಅಧ್ಯಯನ ನಡೆಸಿ ನಮ್ಮ ನಿರ್ದೇಶಕರು ಈ ಕಥೆ ಸಿದ್ಧಪಡಿಸಿದ್ದಾರೆ. ಸಾವು ಮತ್ತು ಪುನರ್ಜನ್ಮದ ನಡುವೆ ಇರುವ ಒಂದು ಅಂತರದಲ್ಲಿ ಏನಾಗುತ್ತದೆ ಎಂಬುದರ ಕುರಿತು ಅಘೋರಿಗಳು ಮತ್ತು ವಿಜ್ಞಾನಿಗಳ ಜೊತೆ ಚರ್ಚಿಸಿ ವಿಷಯ ಸಂಗ್ರಹಿಸಿದ್ದಾರೆ. ಅದನ್ನು ಜನರಿಗೆ ತಲುಪಿಸಲು ಈ ಸಿನಿಮಾ ಮಾಡಲಾಗಿದೆ’ ಎಂಬುದು ಅಶೋಕ್​ ಮಾತುಗಳು.

ಪುನೀತ್​ ಅವರು ಈ ಚಿತ್ರವನ್ನು ನಿರ್ಮಾಣ ಮಾಡುವುದರ ಜೊತೆಗೆ ಒಂದು ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಅವಿನಾಶ್​ ಜೊತೆ ಪುನೀತ್​ ಕೂಡ ಅಘೋರಿಯಾಗಿ ತೆರೆ ಹಂಚಿಕೊಂಡಿದ್ದಾರೆ. ಇಂಥ ಅವಕಾಶ ಸಿಕ್ಕಿದ್ದು ಅವರ ಸಂತಸಕ್ಕೆ ಕಾರಣ ಆಗಿದೆ. ಮಾರ್ಚ್​ 4ರಂದು ‘ಅಘೋರ’ ಚಿತ್ರ ಬಿಡುಗಡೆ ಆಗಲಿದೆ. ‘ಇದು ಬರೀ ಹಾರರ್​ ಸಿನಿಮಾ ಅಲ್ಲ. ಇದರಲ್ಲಿ ಲವ್​, ಸೆಂಟಿಮೆಂಟ್​ ಮತ್ತು ವಿಜ್ಞಾನದ ವಿಷಯಗಳನ್ನೂ ಹೇಳಲಿದ್ದೇವೆ. ಈ ಚಿತ್ರ ಪೂರ್ಣಗೊಂಡು ಎರಡು ವರ್ಷ ಕಳೆದಿದೆ. ಕೊವಿಡ್​ ಕಾರಣದಿಂದ ರಿಲೀಸ್​ ಮಾಡಲು ಆಗಲಿಲ್ಲ. ಈಗ ಸಮಯ ಕೂಡಿಬಂದಿದೆ’ ಎಂದಿದ್ದಾರೆ ಪುನೀತ್​. ದೇವರು ಮತ್ತು ಮೂಢನಂಬಿಕೆಯನ್ನು ಅತಿಯಾಗಿ ನಂಬುವಂತಹ ಪ್ರಕೃತಿ ಎಂಬ ಪಾತ್ರಕ್ಕೆ ದ್ರವ್ಯಾ ಶೆಟ್ಟಿ ಬಣ್ಣ ಹಚ್ಚಿದ್ದಾರೆ.

TV9 Kannada


Leave a Reply

Your email address will not be published. Required fields are marked *