ಬೆಂಗಳೂರು: ಕೋವಿಡ್ ಮಹಾಮಾರಿಯಿಂದ ಬಳಲಿದ ಬಿಪಿಎಲ್ ಕುಟುಂಬ ವರ್ಗದವರಿಗೆ ಚಿಕಿತ್ಸಾ ವೆಚ್ಚವಾಗಿ 3ಲಕ್ಷ ರೂ. ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಆಗ್ರಹಿಸಿ ಮಾಜಿ ಸಚಿವ ಎಂ ಬಿ ಪಾಟೀಲ್ ಆಗ್ರಹಿಸಿದ್ದಾರೆ. ಈ ಸಂಬಂಧ ಎಂ.ಬಿ ಪಾಟೀಲ್ ಸಿಎಂ ಯಡಿಯೂರಪ್ಪನವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಎಂ ಬಿ ಪಾಟೀಲ್ ಬರೆದ ಪತ್ರದ ವಿವರ ಹೀಗಿದೆ:
ಶ್ರೀ ಬಿ.ಎಸ್.ಯಡಿಯೂರಪ್ಪನವರು
ಸನ್ಮಾನ್ಯ ಮುಖ್ಯಮಂತ್ರಿಗಳು
ಕರ್ನಾಟಕ ಸರ್ಕಾರ
ವಿಧಾನಸೌಧ ಬೆಂಗಳೂರು- ಇವರಿಗೆ

ವಿಷಯ: ಕೋವಿಡ್ ಮಹಾಮಾರಿಯಿಂದ ಬಳಲಿದ ಬಿ.ಪಿ.ಎಲ್ ಕುಟುಂಬ ವರ್ಗದವರಿಗೆ ಚಿಕಿತ್ಸಾ ವೆಚ್ಚ 3ಲಕ್ಷ ರೂ. ಪ್ಯಾಕೇಜ್ ಘೋಷಣೆ ಮಾಡುವ ಕುರಿತು.

ಕೋವಿಡ್ ಮಹಾಮಾರಿಯಿಂದ ಕರ್ನಾಟಕದ ಸಾವಿರಾರು ಬಡಕುಟುಂಬಗಳು ಜೀವ ಹಾನಿ ಸೇರಿದಂತೆ ತೀವ್ರತರ ಆರ್ಥಿಕ ಹಾನಿ ಅನುಭವಿಸಿವೆ. ಅನೇಕರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೇ, ಕೆಲವರು ಸರ್ಕಾರಿ ಆಸ್ಪತ್ರೆಯ ರೆಫರೆನ್ಸ್ ಮೇಲೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅಂತವರಿಗೆ ಮಾತ್ರ ವಿಮಾ ಯೋಜನೆಯ ಎ.ಬಿ.ಎಆರ್.ಕೆ(ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ), ಭೀಮಾ ಯೋಜನೆಯ ಪ್ರಯೋಜನ ದೊರೆತಿದೆ. ಆದರೆ ಸರಿಯಾದ ಮಾಹಿತಿ ಇಲ್ಲದ ಕಾರಣ ಹಲವರು ರೋಗ ಲಕ್ಷಣ ಕಂಡುಬಂದ ತಕ್ಷಣ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅಲ್ಲಿ 7,8,10 ಮತ್ತು 12 ಲಕ್ಷ ರೂ. ಈ ರೀತಿಯಾಗಿ ವಿಪರೀತ ಹಣ ತಮ್ಮ ಕುಟುಂಬಸ್ಥರನ್ನು ಉಳಿಸಲು ಖರ್ಚು ಮಾಡಿದ್ದಾರೆ. ಬಡವರಾದ ಇವರು ಸಾಲ-ಸೋಲ ಮಾಡಿ ಇಷ್ಟೇಲ್ಲ ಖರ್ಚು ಮಾಡಿ, ಕೆಲವರು ಚಿಕಿತ್ಸೆಗೆ ಸ್ಪಂದಿಸಿ ಬದುಕುಳಿದಿದ್ದಾರೆ. ಕೆಲವರು ಮರಣವನ್ನು ಅಪ್ಪಿರುವುದು ವಿಷಾಧನೀಯ ಸಂಗತಿ.

ಮನೆ, ಒಡವೆ ಮಾರಿ, ಅಡವಿಟ್ಟು ಚಿಕಿತ್ಸೆಗಾಗಿ ಸಾಲ ಪಡೆದ ಬಿ.ಪಿ.ಎಲ್ ಕುಟುಂಬಗಳಿಗೆ ಸಹಾಯಹಸ್ತ ಚಾಚುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಆದ್ದರಿಂದ ಕರ್ನಾಟಕದ ಕೊರೊನಾ ಬಾಧಿತ ಬಿ.ಪಿ.ಎಲ್ ಕುಟುಂಬಗಳಿಗೆ 3ಲಕ್ಷ ರೂ.ಗಳನ್ನು ಅವರು ಖರ್ಚು ಮಾಡಿರುವ ಚಿಕಿತ್ಸಾ ವೆಚ್ಚ ಮರು ಪಾವತಿಸಲು ಅನುಕೂಲವಾಗುವಂತೆ ಒಂದು ವಿಶೇಷ ಪ್ಯಾಕೇಜ್ ಘೋಷಣೆ ಮಾಡಲು ತಮ್ಮಲ್ಲಿ ವಿನಂತಿಸುತ್ತೇನೆ. ಇದನ್ನೂ ಓದಿ: ರಾಜ್ಯ ಸರ್ಕಾರ ವಜಾಕ್ಕೆ ರಾಜ್ಯಪಾಲರು ಶಿಫಾರಸ್ಸು ಮಾಡಬೇಕು – ಸಿದ್ದರಾಮಯ್ಯ

ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಯಿಂದ ಬಾಧಿತ ಬಿ.ಪಿ.ಎಲ್. ಕುಟುಂಬಗಳ ವಿವರ ಪಡೆದು, ಜಿಲ್ಲಾಧಿಕಾರಿಗಳ ಮುಖಾಂತರವೇ ಈ ಆರ್ಥಿಕ ಪ್ಯಾಕೇಜ್ ಆ ಕುಟುಂಬಗಳಿಗೆ ತಲುಪುವಂತೆ ನೋಡಿಕೊಳ್ಳಲು ವಿನಂತಿಸಲಾಗಿದೆ ಎಂದು ಎಂಬಿ ಪಾಟೀಲ್ ಪತ್ರದಲ್ಲಿ ಒತ್ತಾಯಿಸಿದ್ದಾರೆ.

The post ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಕೋವಿಡ್ ಚಿಕಿತ್ಸಾ ವೆಚ್ಚ 3 ಲಕ್ಷ ರೂ. ಪ್ಯಾಕೇಜ್ ಘೋಷಿಸಿ: ಎಂಬಿ ಪಾಟೀಲ್ ಆಗ್ರಹ appeared first on Public TV.

Source: publictv.in

Source link