ಬಿಬಿಎಂಪಿ ವ್ಯಾಪ್ತಿಯ ಹೊಟೆಲ್, ರೆಸಾರ್ಟ್​ಗಳಿಗೆ ಆಸ್ತಿ ತೆರಿಗೆ ವಿನಾಯ್ತಿ ಘೋಷಿಸಿದ ರಾಜ್ಯ ಸರ್ಕಾರ | Tax Rebate to Hotel Resort Entertainment Parks in BBMP Karnataka Govt Announces

ಬಿಬಿಎಂಪಿ ವ್ಯಾಪ್ತಿಯ ಹೊಟೆಲ್, ರೆಸಾರ್ಟ್​ಗಳಿಗೆ ಆಸ್ತಿ ತೆರಿಗೆ ವಿನಾಯ್ತಿ ಘೋಷಿಸಿದ ರಾಜ್ಯ ಸರ್ಕಾರ

ಬಿಬಿಎಂಪಿ (ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿರುವ ಹೊಟೆಲ್, ರೆಸಾರ್ಟ್ ಹಾಗೂ ಮನರಂಜನಾ ಪಾರ್ಕ್​ಗಳ ಆಸ್ತಿ ತೆರಿಗೆ ಪಾವತಿಯಲ್ಲಿ ಶೇ 50ರಷ್ಟು ರಿಯಾಯ್ತಿ ಘೋಷಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕೊವಿಡ್​ನಿಂದ ಪ್ರವಾಸೋದ್ಯಮ ತೀವ್ರ ಸಂಕಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ನಿರ್ಧಾರ ಪ್ರಕಟಿಸಿದೆ. ರಾಜ್ಯ ಸರ್ಕಾರ ಈ ಹಿಂದೆಯೂ ಹಲವು ಬಾರಿ ಆಸ್ತಿ ತೆರಿಗೆಗೆ ವಿನಾಯ್ತಿ ಘೋಷಿಸಿತ್ತು.

ಈ ಮೊದಲು ಬೆಂಗಳೂರು ಹೊರತುಪಡಿಸಿ ಕರ್ನಾಟಕದ ಉಳಿದೆಲ್ಲ ಜಿಲ್ಲೆಗಳಿಗೆ ಆಸ್ತಿ ತೆರಿಗೆ ವಿನಾಯ್ತಿ ಘೋಷಿಸಿ ರಾಜ್ಯ ಸರ್ಕಾರ ನವೆಂಬರ್ 6ರಂದು ಆದೇಶ ಹೊರಡಿಸಿತ್ತು.

ಕೋವಿಡ್‌ ಮೊದಲ ಮತ್ತು ಎರಡನೇ ಅಲೆಯಿಂದ ಪ್ರವಾಸೋದ್ಯಮ ವಲಯ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ಆಸ್ತಿ ತೆರಿಗೆ ಮನ್ನಾ ಮಾಡುವಂತೆ ಕರ್ನಾಟಕ ಪ್ರವಾಸೋದ್ಯಮ ಸೊಸೈಟಿ ಬೇಡಿಕೆ ಸಲ್ಲಿಸಿತ್ತು. 288 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಹೋಟೆಲ್‌ಗಳು, ಅತಿಥಿಗೃಹಗಳು, ವಸತಿಗೃಹಗಳು, ರೆಸ್ಟೋರೆಂಟ್‌ಗಳಿಂದ ತೆರಿಗೆ ಮತ್ತು ಶೇ 26ರಷ್ಟು ಉಪಕರ ಸೇರಿ ₹ 46.04 ಕೋಟಿ ಸಂಗ್ರಹ ಆಗಬೇಕಿದೆ. ಶೇ 50ರಷ್ಟು ತೆರಿಗೆ ವಿನಾಯಿತಿ ನೀಡಿದರೆ ಸುಮಾರು ₹ 23.02 ಕೋಟಿ ಆರ್ಥಿಕ ನಷ್ಟ ಉಂಟಾಗಲಿದೆ. ಈ ಮೊತ್ತವನ್ನು ಸರಿತೂಗಿಸಲು ರಿಯಾಯಿತಿ ಮೊತ್ತವನ್ನು ನಗರ ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರ ನೀಡಲಿದೆ ಎಂದು ಅಧಿಕಾರಿಗಳು ಹೇಳಿದ್ದರು.

ಶೇ 50ರಷ್ಟು ತೆರಿಗೆ ಪಾವತಿಸಿ, ಉಳಿದ ಶೇ 50ರಷ್ಟು ರಿಯಾಯಿತಿಗೆ ಹೋಟೆಲ್‌, ರೆಸಾರ್ಟ್‌, ರೆಸ್ಟೋರೆಂಟ್‌ ಮತ್ತು ಮನೋರಂಜನಾ ಪಾರ್ಕ್‌ಗಳ ಮಾಲೀಕರು ಅರ್ಜಿ ಸಲ್ಲಿಸಬೇಕು. ಈ ಅರ್ಜಿಗಳನ್ನು ಕಂದಾಯ ನಿರೀಕ್ಷಕರು ಪರಿಶೀಲಿಸಿದ ಬಳಿಕ, ಜಿಲ್ಲಾಮಟ್ಟದ ಸಮಿತಿ ಸಂಬಂಧಿಸಿದ ಇಲಾಖೆಗೆ ಸಲ್ಲಿಸಲಿದೆ ಎಂದು ರಾಜ್ಯ ಸರ್ಕಾರವು ಸರ್ಕಾರಿ ಆದೇಶದಲ್ಲಿ ಷರತ್ತು ವಿಧಿಸಿತ್ತು.

ಹುಬ್ಬಳ್ಳಿ-ಧಾರವಾಡ ಪಾಲಿಕೆಯ ತೆರಿಗೆ ಸಂಗ್ರಹ ಹೆಚ್ಚಳ
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಈ ವರ್ಷ ಅಚ್ಚರಿ ಎನ್ನುವಂತೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು 2021-22ನೇ ಸಾಲಿನ ಅರ್ಧ ವಾರ್ಷಿಕ ಅವಧಿಯಲ್ಲಿ (ಸೆಪ್ಟೆಂಬರ್ 30 ರವರೆಗೆ) ಆಸ್ತಿ ತೆರಿಗೆ ಮೂಲಕ 49.37 ಕೋಟಿ ರೂಪಾಯಿ ಆದಾಯ ಸಂಗ್ರಹಿಸಿ, ದಾಖಲೆ ಮಾಡಿದೆ.

2020-21ಕ್ಕೆ ಹೋಲಿಸಿದರೆ 6.24 ಕೋಟಿ ರೂಪಾಯಿ ಹೆಚ್ಚಳವಾಗಿದೆ. ಕಳೆದ ಸಾಲಿನ ಏಪ್ರಿಲ್ 1 ರಿಂದ ಸೆಪ್ಟೆಂಬರ್ 30 ರವರೆಗೆ ಪಾಲಿಕೆಯು ಆಸ್ತಿ ತೆರಿಗೆಯಿಂದ 43.13 ಕೋಟಿ ರೂಪಾಯಿ ಸಂಗ್ರಹಿಸಿತ್ತು. ಈ ಬಾರಿ ಹೆಚ್ಚಳವಾಗಲು ಆಸ್ತಿ ತೆರಿಗೆ ದರ ಆಕರಣಿಯಲ್ಲಿ ಪರಿಷ್ಕರಣೆ ಮಾಡಿರುವುದು ಹಾಗೂ ರಾಜ್ಯ ಸರ್ಕಾರ ಶೇ 5ರಷ್ಟು ರಿಯಾಯಿತಿಯನ್ನು ಆಗಸ್ಟ್ 31 ರವರೆಗೆ ವಿಸ್ತರಿಸಿದ್ದು, ಮುಖ್ಯ ಕಾರಣವಾಗಿದೆ.

ಇದನ್ನೂ ಓದಿ: ಕೇಂದ್ರದ ತೆರಿಗೆಯಲ್ಲಿ ರಾಜ್ಯಗಳ ಪಾಲಿನ ಹಣ ಬಿಡುಗಡೆ: ಕರ್ನಾಟಕಕ್ಕೆ ‌3,467 ಕೋಟಿ ರೂಪಾಯಿ ಲಭ್ಯ
ಇದನ್ನೂ ಓದಿ: Tax On Cryptocurrency: ಕೇಂದ್ರ ಬಜೆಟ್​ನಲ್ಲಿ ಕ್ರಿಪ್ಟೋ ಗಳಿಕೆಯ ಮೇಲೆ ತೆರಿಗೆ ಬದಲಾವಣೆ ಸಾಧ್ಯತೆ

TV9 Kannada

Leave a comment

Your email address will not be published. Required fields are marked *