ಬಹು ನಿರೀಕ್ಷಿತ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ, ಲೀಗ್ ಹಂತದಲ್ಲೇ ಹೊರ ಬಿದ್ದಿದೆ. ಇದೀಗ ಆಟಗಾರರ ಚಿತ್ತ ನ್ಯೂಜಿಲೆಂಡ್ ಸರಣಿ ಮೇಲೆ ನೆಟ್ಟಿದೆ. ನವೆಂಬರ್ 17ರಿಂದ 3 ಪಂದ್ಯಗಳ ಟಿ20 ಸರಣಿ ಶುರುವಾಗಲಿದ್ದು, ಇಂದೇ ಭಾರತ ತಂಡ ಪ್ರಕಟವಾಗುವ ಸಾಧ್ಯತೆ ಇದೆ. ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲು ಸೆಲೆಕ್ಷನ್ ಕಮಿಟಿ ನಿರ್ಧರಿಸಿದ್ದು, ಹೊಸ ಮುಖಗಳಿಗೆ ಅವಕಾಶ ನೀಡುವತ್ತ, ಗಮನ ಹರಿಸಿದೆ.
ರೋಹಿತ್ ಶರ್ಮಾಗೆ ರೆಸ್ಟ್..?
ವಿಶ್ವಕಪ್ ಬಳಿಕ ಟಿ20 ಕ್ರಿಕೆಟ್ ನಾಯಕತ್ವದಿಂದ ಕೊಹ್ಲಿ ಕೆಳಗಿಳಿಯಲಿದ್ದಾರೆ. ಬಳಿಕ ಈ ಜವಾಬ್ದಾರಿ ರೋಹಿತ್ ಹೆಗಲೇರುವ ಸಾಧ್ಯತೆ ಇದೆ. ಆದ್ರೆ ಈ ಸರಣಿಗೆ ರೋಹಿತ್, ವಿರಾಟ್, ಬೂಮ್ರಾ, ಶಮಿ ಸೇರಿದಂತೆ ಸೀನಿಯರ್ ಪ್ಲೇಯರ್ಸ್ಗೆ ರೆಸ್ಟ್ ನೀಡುವ ಸಾಧ್ಯತೆ ಇದೆ. ಹಾಗಾಗಿ ಈ ಸರಣಿಗೆ ಕೆ.ಎಲ್.ರಾಹುಲ್, ನಾಯಕತ್ವ ವಹಿಸಿಕೊಳ್ಳೋದು ಪಕ್ಕಾ ಎನ್ನಲಾಗ್ತಿದೆ. ಇನ್ನ ಇದೇ ಸರಣಿಯಲ್ಲಿ ಹೆಡ್ಕೋಚ್ ಆಗಿ ರಾಹುಲ್ ದ್ರಾವಿಡ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡುವ ಪರಿಣಾಮ, ನ್ಯೂಜಿಲೆಂಡ್ ಕದನಕ್ಕೆ ಯುವ ಆಟಗಾರರನ್ನೇ ಆಯ್ಕೆ ಮಾಡುವ ಸಾಧ್ಯತೆ ಇದೆ. ಸಿನಿಯರ್ ಪ್ಲೇಯರ್ಸ್ ಟಿ20 ಸರಣಿಗೆ ವಿಶ್ರಾಂತಿ ಪಡೆದರೂ, ಆ ಬಳಿಕ ಶುರುವಾಗುವ ಟೆಸ್ಟ್ ಸರಣಿಗೆ ತಂಡ ಸೇರಿಕೊಳ್ಳಲಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಹಿರಿಯ ಆಟಗಾರರು ಸತತ ಬಯೋ-ಬಬಲ್ನಲ್ಲಿದ್ದಾರೆ. ಹಾಗಾಗಿ ಅವರಲ್ಲಿನ ಮಾನಸಿಕ ಒತ್ತಡದ ನಿರ್ಮೂಲನೆಗೆ ವಿಶ್ರಾಂತಿ ನೀಡಲು ಬಿಸಿಸಿಐ ನಿರ್ಧರಿಸಿದೆ. ಫಿಟ್ನೆಸ್ ಸಮಸ್ಯೆಗೆ ಒಳಗಾದ ಹಾರ್ದಿಕ್ರನ್ನ ಕೈಬಿಡಲು ಮುಂದಾಗಿದೆ.
ಋತುರಾಜ್, ವೆಂಕಟೇಶ್ ಅಯ್ಯರ್ ಅವಕಾಶ ಪಡೆಯೋದು ಖಚಿತ..!
ಕಿವೀಸ್ ಸರಣಿಗೆ ಯಂಗ್ ಇಂಡಿಯಾ ಕಟ್ಟೋಕೆ ಬಿಸಿಸಿಐ ಈಗಾಗಲೇ ಚಿಂತಿಸಿದೆ. ರಿಷಭ್ ಪಂತ್, ಇಶಾನ್ ಕಿಶನ್, ಸೂರ್ಯಕುಮಾರ್, ಶಾರ್ದೂಲ್ ಠಾಕೂರ್, ವರುಣ್, ರಾಹುಲ್ ಚಹರ್ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರ ಜೊತೆಗೆ IPLನಲ್ಲಿ ಅಬ್ಬರಿಸಿದ ಯುವ ಆಟಗಾರರಿಗೆ ಚಾನ್ಸ್ ನೀಡಲು ತೀರ್ಮಾನಿಸಿದೆ. ಅದರಲ್ಲೂ CSK ತಂಡದ ಋತುರಾಜ್ ಗಾಯಕ್ವಾಡ್, KKR ತಂಡದ ವೆಂಕಟೇಶ್ ಅಯ್ಯರ್ ತಮ್ಮ ಸ್ಥಾನವನ್ನು ಅದಾಗಲೇ ಭದ್ರಪಡಿಸಿಕೊಂಡಿದ್ದಾರೆ ಎಂದೇ ಹೇಳಲಾಗ್ತಿದೆ.
ಉಳಿದಂತೆ ಆವೇಶ್ ಖಾನ್, ಚೇತನ್ ಸಕಾರಿಯಾ, ಮೊಹಮ್ಮದ್ ಸಿರಾಜ್ ಕೂಡ ಸ್ಥಾನ ಪಡೆಯುವ ಅವಕಾಶ ಹೆಚ್ಚಿದೆ. ಹಾಗೇ ಮನೀಶ್ ಪಾಂಡೆ, ಶ್ರೇಯಸ್ ಅಯ್ಯರ್, ದೀಪಕ್ ಚಹರ್, ಯಜುವೇಂದ್ರ ಚಹಲ್ ಟೀಮ್ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡುವ ನಿರೀಕ್ಷೆ ಇದೆ. ಟೀಮ್ ಇಂಡಿಯಾ ಎದುರಿನ ಸರಣಿಗಾಗಿ ನ್ಯೂಜಿಲೆಂಡ್, ಬಲಿಷ್ಠ ತಂಡವನ್ನೇ ಪ್ರಕಟಿಸಿದೆ. ಅದಕ್ಕೆ ಸರಿ ಸಮನಾದ ತಂಡ ಪ್ರಕಟಿಸೋಕೆ, ಬಿಸಿಸಿಐ ಕೂಡ ಸಾಕಷ್ಟು ಪ್ಲಾನ್ ಹಾಕಿಕೊಂಡಿದೆ. ಹಾಗಾಗಿ ಯಾರೆಲ್ಲಾ ಆಯ್ಕೆಯಾಗ್ತಾರೆ ಅನ್ನೋದು ಕುತೂಹಲ ಮೂಡಿಸಿದೆ.
The post ಬಿಸಿಸಿಐ-ಆಯ್ಕೆ ಸಮಿತಿ ಇಂದು ಮಹತ್ವದ ಸಭೆ; ಕಿವೀಸ್ ಸರಣಿಗೆ ಟೀಂ ಇಂಡಿಯಾದಲ್ಲಿ ಯಾರೆಲ್ಲಾ ಇರಬೇಕು? appeared first on News First Kannada.