ಬಿಹಾರದ ಮುಜಾಫರ್‌ಪುರದಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯಲ್ಲಿ ದೃಷ್ಟಿ ಕಳೆದುಕೊಂಡವರ ಸಂಖ್ಯೆ 65ಕ್ಕೆ ಏರಿಕೆ | 65 people lose vision in one eye after cataract surgery in Bihar’s Muzaffarpur


ಬಿಹಾರದ ಮುಜಾಫರ್‌ಪುರದಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯಲ್ಲಿ ದೃಷ್ಟಿ ಕಳೆದುಕೊಂಡವರ ಸಂಖ್ಯೆ 65ಕ್ಕೆ ಏರಿಕೆ

ಪ್ರಾತಿನಿಧಿಕ ಚಿತ್ರ

ಮುಜಾಫರ್​​ಪುರ್: ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯ (cataract surgery) ನಂತರ ತೀವ್ರ ಸೋಂಕಿನ ನಂತರ 40 ಜನರು ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡಿದ್ದು ಇದೀಗ ಮುಜಾಫರ್‌ಪುರದಲ್ಲಿ (Muzaffarpur) ದೃಷ್ಟಿ ಕಳೆದು ಕೊಂಡ ಜನರ ಸಂಖ್ಯೆ 65 ಕ್ಕೆ ಏರಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ನವೆಂಬರ್ 22 ಮತ್ತು 27 ರ ನಡುವೆ ನಡೆದ ಶಸ್ತ್ರ ಚಿಕಿತ್ಸೆ ನಂತರ, ಹಲವರಿಗೆ ತೀವ್ರವಾದ ಕಣ್ಣಿನ ಸೋಂಕು ಉಂಟಾಯಿತು. ಮಂಗಳವಾರದವರೆಗೆ 25 ಸಂತ್ರಸ್ತರು ಪತ್ತೆಯಾಗಿದ್ದಾರೆ. ಪಾಟ್ನಾದ ಆಸ್ಪತ್ರೆಗಳಲ್ಲಿ ಇದುವರೆಗೆ 12 ಜನರ ಸೋಂಕಿತ ಕಣ್ಣುಗಳನ್ನು ತೆಗೆದುಹಾಕಿದ್ದರೆ, ಮುಜಾಫರ್‌ಪುರದ ಆಸ್ಪತ್ರೆಯಲ್ಲಿ ಉಳಿದ 53 ಮಂದಿಗೆ ಸಹ ಇದೇ ರೀತಿ ಸಲಹೆ ನೀಡಲಾಗಿದೆ. ಮುಜಾಫರ್‌ಪುರದ ಜುರಾನ್ ಚಾಪ್ರಾ ಪ್ರದೇಶದ ಕಣ್ಣಿನ ಆಸ್ಪತ್ರೆಯು ನವೆಂಬರ್ 22 ರಂದು ನೇತ್ರ ತಪಾಸಣಾ ಶಿಬಿರವನ್ನು ಆಯೋಜಿಸಿತ್ತು. ಪರೀಕ್ಷೆಯ ನಂತರ 100 ಕ್ಕೂ ಹೆಚ್ಚು ಜನರಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ಸೂಚಿಸಲಾಗಿತ್ತು. ನೇತ್ರ ತಜ್ಞ ಎನ್.ಡಿ.ಸಾಹು ಶಸ್ತ್ರಚಿಕಿತ್ಸೆ ನಡೆಸಿದ್ದುಸಾಹು ಅವರಿಗೆ ಯಾವುದೇ ಅನುಭವ ಇಲ್ಲ ಎಂಬುದು ಬೆಳಕಿಗೆ ಬಂದಿದೆ. ಶಸ್ತ್ರಚಿಕಿತ್ಸೆಯ ನಂತರ, ಹಲವಾರು ರೋಗಿಗಳು ಕಣ್ಣುಗಳಲ್ಲಿ ನೋವಿನ ಬಗ್ಗೆ ದೂರು ನೀಡಿದಾಗ, ಆಸ್ಪತ್ರೆಯ ಆಡಳಿತವು ಅವರಿಗೆ ನೋವು ನಿವಾರಕ ಚುಚ್ಚುಮದ್ದನ್ನು ನೀಡಿತ್ತು. “ಕಣ್ಣಿನ ಸೋಂಕಿನ ಹೆಚ್ಚಿನ ಪ್ರಕರಣಗಳು ನಮ್ಮ ಗಮನಕ್ಕೆ ಬಂದಿವೆ,.ಈ ಬಗ್ಗೆ ತನಿಖೆ ನಡೆಸಲು ನಾವು ಈಗಾಗಲೇ ಜಿಲ್ಲೆಯ ಅಂಧತ್ವ ನಿಯಂತ್ರಣ ಅಧಿಕಾರಿ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದೇವೆ. ತಂಡವು ಆಸ್ಪತ್ರೆಯನ್ನು ಪರಿಶೀಲಿಸಿದೆ ಮತ್ತು ಶಸ್ತ್ರಚಿಕಿತ್ಸೆಗೆ ಬಳಸಲಾದ ಆಪರೇಷನ್ ಥಿಯೇಟರ್, ನೈರ್ಮಲ್ಯವಿಲ್ಲದ ಕೆಲವು ಉಪಕರಣಳಿಂದಾಗಿ ಈ ರೀತಿ ಸಂಭವಿಸಿದೆ ಎಂದು ಮುಜಾಫರ್‌ಪುರದ ಸಿವಿಲ್ ಸರ್ಜನ್ ವಿನಯ್ ಕುಮಾರ್ ಶರ್ಮಾ ಹೇಳಿರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಸಾಹು ಅವರ ಪರವಾನಿಗೆ ರದ್ದುಪಡಿಸುವಂತೆಯೂ ತಂಡ ಶಿಫಾರಸು ಮಾಡಿದೆ. ನಾವು ಆಸ್ಪತ್ರೆಯ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ” ಎಂದು ಶರ್ಮಾ ಹೇಳಿದರು. ಘಟನೆಯ ನಂತರ ಎಲ್ಲಾ 65 ಜನರು ಒಂದು ಕಣ್ಣನ್ನು ಕಳೆದುಕೊಂಡಿದ್ದಾರೆ. ಅವರಲ್ಲಿ ಹೆಚ್ಚಿನವರನ್ನು ಶ್ರೀ ಕೃಷ್ಣ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮುಜಾಫರ್‌ಪುರದಲ್ಲಿ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ನವೆಂಬರ್ 22 ರಂದು ಆಸ್ಪತ್ರೆಯಿಂದ ಮೆಗಾ ನೇತ್ರ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ನಮಗೆ ತಿಳಿದಿದೆ. ಅದರಂತೆ ನಾನು ವೈದ್ಯರು ಹೇಳಿದ ಆಸ್ಪತ್ರೆಗೆ ಬಂದಿದ್ದೇನೆ. ನನಗೆ ಕಣ್ಣಿನ ಪೊರೆ ಇದೆ, ಅದನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕಬೇಕಾಗಿದೆ. ಶಸ್ತ್ರಚಿಕಿತ್ಸೆಯ ನಾಲ್ಕು ಗಂಟೆಗಳ ನಂತರ, ಶಸ್ತ್ರಚಿಕಿತ್ಸೆಯ ಕಣ್ಣುಗಳು ನೋಯಲಾರಂಭಿಸಿದವು. ನಾನು ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿದಾಗ, ಅವರು ನನಗೆ ನೋವು ನಿವಾರಕ ಮಾತ್ರೆ ಮತ್ತು ಚುಚ್ಚುಮದ್ದನ್ನು ನೀಡಿದರು ಎಂದು ಶೆಯೋಹರ್ ಜಿಲ್ಲೆಯ ಸೋನ್ವರ್ಶಾ ಗ್ರಾಮದ ಸಂತ್ರಸ್ತರಾದ ರಾಮ್ ಮೂರ್ತಿ ಸಿಂಗ್ ಹೇಳಿದ್ದಾರೆ.

ಚುಚ್ಚುಮದ್ದು ನನಗೆ ತಾತ್ಕಾಲಿಕ ಪರಿಹಾರವನ್ನು ನೀಡಿತು. ಕೆಲವು ಗಂಟೆಗಳ ನಂತರ, ನೋವು ಮತ್ತೆ ಕಾಣಿಸಿಕೊಂಡಿತು ಎಂದು ಸಿಂಗ್ ಹೇಳಿದರು. “ಶಸ್ತ್ರಚಿಕಿತ್ಸೆಯ ನಂತರ ನನ್ನ ಕಣ್ಣಿನಲ್ಲಿ ಅಪಾರ ನೋವು ಕಾಣಿಸಿಕೊಂಡಿತು, ಸಂಪರ್ಕಿಸಿದಾಗ, ಸಂಬಂಧಪಟ್ಟ ವೈದ್ಯರು ನೋವು ನಿವಾರಕ ಇಂಜೆಕ್ಷನ್ ನೀಡಿದರು, ರಾತ್ರಿ, ವಾಂತಿ ಕೂಡ ಪ್ರಾರಂಭವಾಯಿತು. ಆಸ್ಪತ್ರೆಯಿಂದ ಮರುದಿನ ನನ್ನನ್ನು ಬಿಡುಗಡೆ ಮಾಡಿದರು ಎಂದು ಮುಜಾಫರ್‌ಪುರದ ಮುಶಾರಿ ಪ್ರದೇಶದ ನಿವಾಸಿ ಮೀನಾ ದೇವಿ ಅವರು ಹೇಳಿದ್ದಾರೆ.

ಮರುದಿನ (ನವೆಂಬರ್ 24) ನಾನು ಆಸ್ಪತ್ರೆಗೆ ಬಂದಾಗ, ಸೋಂಕು ತಗುಲಿದ್ದಕ್ಕೆ ವೈದ್ಯರು ನನ್ನನ್ನು ದೂರಿದರು. ನಾನು ವೈದ್ಯರಿಗೆ ಬಲವಾಗಿ ಸವಾಲು ಹಾಕಿದಾಗ ಅವರು ಸೋಂಕಿತ ಕಣ್ಣನ್ನು ತೆಗೆದುಹಾಕಲು ಹೇಳಿದರು. ಕುಟುಂಬದಿಂದ ಯಾರೂ ಇಲ್ಲದ ಕಾರಣ, ಅವರು ಹೇಳಿದಂತೆ ಕಣ್ಣು ತೆಗೆಯಲು ನಾನು ಒಪ್ಪಿದೆ ಎಂದು ಎಂದು ಮೀನಾ ದೇವಿ ಹೇಳಿದರು.

“ತೀವ್ರವಾದ ಸೋಂಕಿನಿಂದ ಬಳಲುತ್ತಿರುವ ಒಂಬತ್ತು ರೋಗಿಗಳು ಕಣ್ಣಿನ ತಪಾಸಣೆಗಾಗಿ ಪಾಟ್ನಾಗೆ ಹೋಗಿದ್ದಾರೆ. ಪಾಟ್ನಾದ ವೈದ್ಯರು ತಪ್ಪಾದ ಆಪರೇಷನ್‌ನಿಂದ ತೀವ್ರ ಸೋಂಕು ಉಂಟಾಗುತ್ತದೆ ಎಂದು ನಮಗೆ ಹೇಳಿದರು. ಅವರು ತೆಗೆದುಹಾಕಲು ನಮಗೆ ಸೂಚಿಸಿದರು. ಆಪರೇಟ್ ಮಾಡಿದ ಕಣ್ಣು ಇಲ್ಲದಿದ್ದರೆ ಅದು ಇತರ ಕಣ್ಣಿಗೆ ಸೋಂಕು ತರಬಹುದು ಎಂದು ವೈದ್ಯರು ಹೇಳಿರುವುದಾಗಿ ಸಂತ್ರಸ್ತ ರಾಮ್ ಮೂರ್ತಿ ಶರ್ಮಾ ಅವರ ಸಂಬಂಧಿ ಹರ್ನೇದ್ರ ರಜಾಕ್ ಹೇಳಿರುವುದಾಗಿ ಪತ್ರಿಕೆ ವರದಿ ಮಾಡಿದೆ.

ಇದನ್ನೂ ಓದಿ: ಬಿಹಾರದ ವಿಧಾನಸಭೆ ಬಳಿ ಖಾಲಿ ಆಲ್ಕೋಹಾಲ್ ಬಾಟಲಿಗಳು ಪತ್ತೆ; ನಿತೀಶ್ ಕುಮಾರ್ ಸರ್ಕಾರಕ್ಕೆ ಭಾರೀ ಮುಖಭಂಗ

TV9 Kannada


Leave a Reply

Your email address will not be published. Required fields are marked *