ಬೀದರ್​ನ ಗೋಶಾಲೆಗಳಲ್ಲಿ ಗೋವುಗಳಿಗಿಲ್ಲ ರಕ್ಷಣೆ; ಮೇವು ಹಾಕ್ತಿಲ್ಲ, ಆರೈಕೆ ಮಾಡ್ತಿಲ್ಲ ನರಳಿ ನರಳಿ ಸಾಯುತ್ತಿವೆ ಎಂದು ಆರೋಪ | People of bidar alligates no food provides for cows in goshala


ಬೀದರ್​ನ ಗೋಶಾಲೆಗಳಲ್ಲಿ ಗೋವುಗಳಿಗಿಲ್ಲ ರಕ್ಷಣೆ; ಮೇವು ಹಾಕ್ತಿಲ್ಲ, ಆರೈಕೆ ಮಾಡ್ತಿಲ್ಲ ನರಳಿ ನರಳಿ ಸಾಯುತ್ತಿವೆ ಎಂದು ಆರೋಪ

ಪ್ರಾತಿನಿಧಿಕ ಚಿತ್ರ

ಬೀದರ್ ಜಿಲ್ಲೆಯಲ್ಲಿ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ 10ಕ್ಕೂ ಹೆಚ್ಚು ದೇವಸ್ಥಾನಗಳಿವೆ. ಭಾಲ್ಕಿ ತಾಲೂಕಿನ ಖಾನಾಪುರ ಗ್ರಾಮದ ಮೈಲಾರ ಮಲ್ಲಣ್ಣ ದೇವಸ್ಥಾನ ಹಾಗೂ ಬೀದರ್ ತಾಲೂಕಿನ ಹೊನ್ನೀಕೇರಿ ಸಿದ್ಧೇಶ್ವರ ದೇವಸ್ಥಾನ ಹೆಚ್ಚು ಪ್ರಸಿದ್ಧಿ ಪಡೆದಿವೆ. ಈ ದೇಗುಲಗಳಿಗೆ ಪ್ರತಿ ವರ್ಷವೂ ಭಕ್ತರು ನೂರಾರು ಸಂಖ್ಯೆಯಲ್ಲಿ ಗೋವುಗಳನ್ನು ಹರಕೆ ರೂಪದಲ್ಲಿ ಇಲ್ಲಿಗೆ ತಂದು ಬಿಡ್ತಾರೆ. ಇವುಗಳ ಆರೈಕೆ ಮಾಡ್ಬೇಕಾದ ಜವಾಬ್ದಾರಿ ಮುಜರಾಯಿ ಇಲಾಖೆ ಹಾಗೂ ದೇಗುಲದ ಆಡಳಿತ ಮಂಡಳಿಯವರದ್ದು. ಇದ್ರ ಮಧ್ಯೆ ದೇವಸ್ಥಾನಕ್ಕೆ ಪ್ರತಿ ವರ್ಷವೂ ದೇಣಿಗೆ ರೂಪದಲ್ಲಿ ಲಕ್ಷಾಂತರ ಹಣ ಬರುತ್ತದೆ. ಆದ್ರೆ, ಮುಜರಾಯಿ ಇಲಾಖೆ ಅಧಿಕಾರಿಗಳು ಹಸುಗಳಿಗಾಗಿ ಒಂದೇ ಒಂದು ರೂಪಾಯಿ ಖರ್ಚು ಮಾಡ್ತಿಲ್ಲ. ಗೋವುಗಳಿಗೆ ಮೇವು, ನೀರು ಮತ್ತು ಕಾಯಿಲೆಗೆ ತುತ್ತಾದ ಹಸುಗಳಿಗೆ ಚಿಕಿತ್ಸೆ ಕೊಡಿಸುತ್ತಿಲ್ಲ. ಇದ್ರಿಂದಾಗಿ ಗೋಶಾಲೆಯಲ್ಲಿ ಹಸುಗಳು ನರಳಿ ನರಳಿ ಸಾಯುತ್ತಿವೆ ಅಂತಾ ಸ್ಥಳೀಯರು ಆರೋಪಿಸಿದ್ದಾರೆ.

ಎರಡೂ ದೇವಸ್ಥಾನಗಳ ಗೋಶಾಲೆಗಳಲ್ಲಿ 200 ಕ್ಕೂ ಅಧಿಕ ಗೋವುಗಳಿವೆ. ಭಕ್ತರು ತಂದು ಬಿಡುವ ಹರಕೆ ಜಾನುವಾರು ಹೊರತುಪಡಿಸಿ ರೈತರು ಕೂಡಾ ಹಸುಗಳಿಗೆ ಮೇವು ಹಾಕಲಾಗದೇ ಇಲ್ಲಿಗೆ ತಂದು ಬಿಡ್ತಿದ್ದಾರೆ. ಇಲ್ಲೂ ಕೂಡ ಮೇವು, ನೀರು ಸಿಗದೇ ಹಸುಗಳು ಸಾಯುತ್ತಿವೆ. ಸಹಾಯಕ ಆಯಕ್ತರಾಗಲಿ, ತಹಶೀಲ್ದಾರ್ ಆಗಲಿ, ಜಿಲ್ಲಾಡಳಿತದ ಯಾವೊಬ್ಬ ಅಧಿಕಾರಿಯೂ ಇತ್ತ ತಿರುಗಿ ನೊಡ್ತಿಲ್ಲ. ಈ ಸಾವಿಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಅಂತಾ ಸ್ಥಳೀಯರು ಆರೋಪಿಸುತ್ತಿದ್ದಾರೆ. ಈ ಬಗ್ಗೆ ದೇವಸ್ಥಾನದ ಆಡಳಿತಾಧಿಕಾರಿಯನ್ನ ಕೇಳಿದ್ರೆ, ವಯಸ್ಸಾದ ಹಸುಗಳ ಆರೈಕೆ ಮಾಡೋದು ಕಷ್ಟವಾಗ್ತಿದೆ ಅಂತಿದ್ದಾರೆ.

ಒಟ್ನಲ್ಲಿ, ಸರ್ಕಾರದ ಸುಪರ್ದಿಯಲ್ಲಿರುವ ದೇಗುಲಗಳ ಗೋಶಾಲೆಗಳಲ್ಲೇ ಹಸುಗಳ ಆರೈಕೆ ಮಾಡಲಾಗ್ತಿಲ್ಲ. ಮೇವು, ನೀರು ಸಿಗದೇ ನರಳಿ ನರಳಿ ಪ್ರಾಣ ಬಿಡ್ತಿದ್ದು, ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

ವರದಿ: ಸುರೇಶ್, ಟಿವಿ9 ಬೀದರ್.

TV9 Kannada


Leave a Reply

Your email address will not be published. Required fields are marked *