ಬೀದರ್ ತೋಟಗಾರಿಕಾ ಕಾಲೇಜಿನಲ್ಲಿ ಕೃಷಿ ಪ್ರಾಯೋಗಿಕ ಕಲಿಕೆ; ರೈತರಂತೆ ಬೆಳೆ ಬೆಳೆದು ಹಣ ಸಂಪಾದಿಸಿದ ವಿದ್ಯಾರ್ಥಿಗಳು
ಬೀದರ್: ಬೀನ್ಸ್, ಹಾಗಲಕಾಯಿ, ಟೊಮೆಟೊ, ಸೊಪ್ಪು ಅಬ್ಬಬ್ಬಾ.. ಒಂದಾ.. ಎರಡಾ.. ಹತ್ತಾರು ಬೆಳೆಗಳು. ಪ್ರಾಯೋಗಿಕ ಕಲಿಕೆಯಲ್ಲೇ ವಿದ್ಯಾರ್ಥಿಗಳು ರೈತರಾಗಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಬೀದರ್ ನ ತೋಟಗಾರಿಕಾ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿಗಳು ಭಾರಿ ಸದ್ದು ಮಾಡ್ತಿದ್ದಾರೆ. ತರಕಾರಿ, ಹೂವಿನ ಗಿಡ ಬೆಳೆಸಿ, ಫಲ ಬಂದ ಮೇಲೆ ಮಾರಾಟ ಮಾಡಿ, ಹಣಗಳಿಸುತ್ತಿದ್ದಾರೆ. ತರಕಾರಿ ಬೆಳೆಯುವುದರ ಜೊತೆಗೆ ಫಲಕೊಡುವ ಸಸಿಗಳನ್ನೇ ಬೆಳೆಸಿ, ಅವುಗಳನ್ನು ರೈತರಿಗೆ ಮಾರಾಟ ಮಾಡಿ ಜೇಬು ತುಂಬಿಸಿಕೊಳ್ತಿದ್ದಾರೆ. ಈ ಮೂಲಕ ಕಾಲೇಜಿನ ಕಲಿಯುತ್ತಲೇ ಗಳಿಸುತ್ತಾ, ಬದುಕಿನಲ್ಲಿ ಸ್ವಾವಲಂಬಿಗಳಾಗಿ ಬದುಕಲು ಕಾಲೇಜಿನ ಪ್ರಾಧ್ಯಾಪಕರು ಇವರಿಗೆ ತರಬೇತಿ ನೀಡುತ್ತಿದ್ದಾರೆ.
ಬಾಗಲಕೋಟೆ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಬೀದರ್ ತೋಟಗಾರಿಕಾ ಕಾಲೇಜಿನ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ 6 ತಿಂಗಳ ಪ್ರಾಯೋಗಿಕ ಕಲಿಕೆ ಕಡ್ಡಾಯ. ಈ ಅವಧಿಯಲ್ಲಿ ವಿದ್ಯಾರ್ಥಿಗಳು ಕಾಲೇಜಿನ ಆವರಣದಲ್ಲಿರುವ ಹೊಲದಲ್ಲಿ ಜೊತೆಗೆ ಪಾಲಿಹೌಸ್ನಲ್ಲಿ ಬೆಳೆ ಬೆಳೆಯುತ್ತಾರೆ. ಪಾಲಕ್ ಸೋಪ್ಪು, ಹಿರೇಕಾಯಿ, ಬದನೆ, ಬೆಂಡಿಕಾಯಿ, ಹೂಕೊಸು, ಟೊಮ್ಯಾಟೊ, ಸೀತಾಫಲ, ಕರಿಬೇವು, ಸೇವಂತಿಗೆ ಹೀಗೆ ವಿವಿಧ ಬಗೆಯ ತರಕಾರಿ ಬೆಳೆದು ಅದನ್ನ ಮಾರಾಟ ಮಾಡುತ್ತಾರೆ. ಬಂದ ಆದಾಯದಲ್ಲಿ ಶೇ.75 ರಷ್ಟು ಹಣವನ್ನ ತಾವಿಟ್ಟುಕೊಂಡು ಇನ್ನುಳಿದ ಶೇ.25 ರಷ್ಟು ಹಣವನ್ನ ಕಾಲೇಜಿಗೆ ಕೊಡುತ್ತಾರೆ. ವಿದ್ಯಾರ್ಥಿಗಳು ಬೆಳೆದ ಈ ತರಹೇವಾರಿ ಗಿಡಗಳಿಗೆ ಭಾರಿ ಬೇಡಿಕೆ ಬಂದಿದೆ.
ಇನ್ನು, ವಿವಿಧ ಬಗೆಯ ಸಸಿ ತಯಾರಿಸಿ ಮಾರಾಟ ಮಾಡೋದ್ರ ಜೊತೆಗೆ ಮಾರುಕಟ್ಟೆಯ ಜ್ಞಾನವನ್ನೂ ವಿದ್ಯಾರ್ಥಿಗಳು ಪಡೆಯುತ್ತಿದ್ದಾರೆ.. ಪದವಿ ಮುಗಿದ ಬಳಿಕ ಸರ್ಕಾರಿ ಕೆಲಸ ಸಿಗದಿದ್ರೂ ಕೂಡಾ ಸ್ವಾವಲಂಬಿಗಳಾಗಿ ಬದುಕಲು ವಿದ್ಯಾರ್ಥಿಗಳಿಗೆ ಇಲ್ಲಿ ತರಬೇತಿ ನೀಡಲಾಗ್ತಿದ್ದು, ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
ವರದಿ: ಸುರೇಶ್, ಟಿವಿ9, ಬೀದರ್.

ವಿದ್ಯಾರ್ಥಿಗಳು ಬೆಳೆದ ಬೆಳೆ

ರೈತರಾದ ವಿದ್ಯಾರ್ಥಿಗಳು

ಬೀದರ್ ನ ತೋಟಗಾರಿಕಾ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿಗಳು