ಬೀದರ ಜಿಲ್ಲಾ ಆಸ್ಪತ್ರೆ ಕ್ಷಯರೋಗ ನಿಯಂತ್ರಣ ಕೇಂದ್ರ ಆವರಣದಲ್ಲಿ ರಾಶಿರಾಶಿ ಕಸ; ಇಲ್ಲಿ ಹಂದಿಗಳದ್ದೇ ದರ್ಬಾರು! | Medical waste dumped in BRIMS’ District TB Centre premises. Pigs rule the roost here!!


ಬೀದರ್ ಜಿಲ್ಲಾ ಆಸ್ಪತ್ರೆಯನ್ನು ಬ್ರಿಮ್ಸ್ (ಬಿ ಆರ್ ಐ ಎಮ್ ಎಸ್, ಬೀದರ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್) (BRIMS) ಅಂತಲೂ ಕರೆಯುತ್ತಾರೆ. ಈ ಆಸ್ಪತ್ರೆಯನ್ನು ಬ್ರಿಮ್ಸ್ ಬದಲು ಪ್ರಿಮ್ಸ್ ಅಂತ ಕರೆಯುವುದು ಹೆಚ್ಚು ಸಮರ್ಪಕ ಎನಿಸುತ್ತದೆ. ಪ್ರಿಮ್ಸ್ ಅಂದರೆ ಪಿಗ್ಸ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್! ಇದನ್ನು ಹೀಗೆ ನಾವು ಹೇಳಲು ಕಾರಣವಿದೆ ಮಾರಾಯ್ರೇ. ಈ ವಿಡಿಯೋನಲ್ಲಿ ಬೀದರ್ ಜಿಲ್ಲಾ ಆಸ್ಪತ್ರೆಯ ಭಾಗವಾಗಿರುವ ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರದ (TB Centre) ಅವರಣವನ್ನು ನಿಮಗೆ ತೋರಿಸುತ್ತಿದ್ದೇವೆ. ಈ ಆವರಣ ನೋಡುತ್ತಿದ್ದರೆ, ಚಿಕಿತ್ಸೆಗೆಂದು ಇಲ್ಲಿಗೆ ಬರುವ ಮತ್ತು ಒಳರೋಗಿಗಳಾಗಿ ಭರ್ತಿ ಆಗಿರಬಹುದಾದ ಕ್ಷಯರೋಗಿಗಳು ಸ್ವಸ್ಥರಾಗುವ ಬದಲು ರೋಗ ಉಲ್ಬಣಗೊಳ್ಳುವ ಅಪಾಯಕ್ಕೆ ಸಿಲುಕುತ್ತಾರೆ. ಈ ಆವರಣ ಗಬ್ಬೆದ್ದು ನಾರುತ್ತಿದೆ. ಇಲ್ಲಿರುವ ಪ್ರದೇಶವೆಲ್ಲ ನಮಗೆ ಸೇರಿದ್ದು ಎಂಬಂತೆ ಹಂದಿಗಳು (pigs) ರಾಜಾರೋಷವಾಗಿ ತಿರುಗಾಡುತ್ತಾ ರಾಶಿರಾಶಿಯಾಗಿ ಡಂಪ್ ಮಾಡಿರುವ ವೈದ್ಯಕೀಯ ತ್ಯಾಜ್ಯವನ್ನು ಮೇಯುತ್ತಿವೆ. ಅವುಗಳಿಗೆ ಯಾವ ರೋಗವೂ ಬರಲಾರದು!

ಆಸ್ಪತ್ರೆಯ ಸಿಬ್ಬಂದಿ ಮೆಡಿಕಲ್ ವೇಸ್ಟ್ ಬಿಸಾಡಿರುವ ರೀತಿಯಲ್ಲೇ ಆಸ್ಪತ್ರೆಯನ್ನು ಹೇಗೆ ನಿರ್ವಹಿಸಲಾಗುತ್ತಿದೆ ಅನ್ನೋದಕ್ಕೆ ಸುಳಿವು ಸಿಗುತ್ತದೆ. ವೈದ್ಯಕೀಯ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಆವರಣದಲ್ಲಿ ಗುಡ್ಡೆ ಹಾಕಿರುವ ಕಸದಲ್ಲಿ ಪಿಪಿಇ ಕಿಟ್, ಮಾಸ್ಕ್ ಮತ್ತು ಕೋವಿಡ್-19 ಸೋಂಕಿನ ನಿಯಂತ್ರಣಕ್ಕೆ ಸಂಬಂಧಿಸಿದ ಇತರ ಪದಾರ್ಥಗಳು ಸಹ ಸಿಗುತ್ತವೆ. ಆಸ್ಪತ್ರೆಯನ್ನು ನಿರ್ವಹಿಸುವ ರೀತಿಯೇ ಇದು?

ಈ ಭಾಗದ ಬಿಜೆಪಿ ನಾಯಕರು ಮತ್ತು ರಾಜ್ಯ ಸಚಿವ ಸಂಪುಟದಲ್ಲಿ ಪಶು ಸಂಗೋಪನಾ ಸಚಿವರಾಗಿರುವ ಪ್ರಭು ಚೌಹಾನ್ ಕೇವಲ ಒಂದು ವಾರದ ಹಿಂದೆ ಬೀದರ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಕೋವಿಡ್ ಸೋಂಕನ್ನು ತಡೆಯಲು ತೆಗೆದುಕೊಂಡಿರುವ ಕ್ರಮಗಳನ್ನು ಪರಿಶೀಲಿಸಿದರು. ಆ ಸಂದರ್ಭದಲ್ಲಿ ಹಿರಿಯ ನಾಗರಿಕರು ಬೂಸ್ಟರ್ ಡೋಸ್ ತೆಗೆದುಕೊಳ್ಳಬೇಕೆಂದು ನೆರೆದಿದ್ದ ಜನರಿಗೆ ಹೇಳಿದರು.

ಮಾನ್ಯ ಸಚಿವರಿಗೆ ಆವರಣದಲ್ಲಿರುವ ಕೊಳೆಯುತ್ತಿರುವ ಕಸ, ರಸ್ತೆಗಳಲ್ಲಿ ಐಷಾರಾಮಿ ಕಾರುಗಳು ಓಡಾಡುವ ಹಾಗೆ ಓಡಾಡುತ್ತಿರುವ ಹಂದಿಗಳು ಕಣ್ಣಿಗೆ ಬೀಳಲಿಲ್ಲವೇ? ಕಂಡಿಲ್ಲ ಅಂತಾದರೆ ಅವರು ಬ್ರಿಮ್ಸ್​​ನಲ್ಲೇ ತಮ್ಮ ಕಣ್ಣುಗಳನ್ನು ಟೆಸ್ಟ್ ಮಾಡಿಸಿಕೊಳ್ಳುವುದು ಒಳಿತು!

TV9 Kannada


Leave a Reply

Your email address will not be published. Required fields are marked *