ಬೆಂಗಳೂರು: ರಾಜ್ಯದ ಆರೋಗ್ಯ ವ್ಯವಸ್ಥೆಯಲ್ಲಿ ಮೂಲ ಸೌಕರ್ಯ ಹೆಚ್ಚಳಕ್ಕೆ ತೀರ್ಮಾನ ಮಾಡಲಾಗಿದೆ ಅಂತ ಕೋವಿಡ್​ ಕಾರ್ಯಪಡೆ ಅಧ್ಯಕ್ಷ ಹಾಗೂ ಡಿಸಿಎಂ ಅಶ್ವಥ್​ ನಾರಾಯಣ್​ ಮಾಹಿತಿ ನೀಡಿದ್ದಾರೆ.

ಕೋವಿಡ್ -19 ಕಾರ್ಯಪಡೆ ಸಭೆ ಬಳಿಕ ಮಾತನಾಡಿದ ಅವ್ರು, ಕಾರ್ಯಪಡೆ ಸಭೆಯಲ್ಲಿ ಹಲವು ನಿರ್ಣಯಗಳನ್ನ‌ ಕೈಗೊಳ್ಳಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ಪತ್ರೆಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಬೆಂಗಳೂರಿನ ಯಾವ ಕ್ಷೇತ್ರದಲ್ಲಿ ಆಸ್ಪತ್ರೆಗಳ ಕೊರತೆ ಇದೆಯೋ ಅಲ್ಲಿ ನಿರ್ಮಾಣ ಮಾಡೋದಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ. ನೂರು ಬೆಡ್​ಗಳ ಆಸ್ಪತ್ರೆ ನಿರ್ಮಾಣಕ್ಕೆ ನಿರ್ಣಯ ಮಾಡಲಾಗಿದೆ ಎಂದರು.

ನಾಲ್ಕು ವಿಧಾನಸಭೆ ಕ್ಷೇತ್ರಗಳಿಗೆ ಒಂದರಂತೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ನಿರ್ಧಾರ ಮಾಡಲಾಗಿದೆ. ಹೊಸ ಆಸ್ಪತ್ರೆ ನಿರ್ಮಾಣಕ್ಕೆ ಭೂಮಿಯ ಅಗತ್ಯವಿದೆ. ಬಿಬಿಎಂಪಿ ಮುಖ್ಯ ಆಯುಕ್ತರು ಭೂಮಿ ಗುರುತಿಸಬೇಕಾಗಿದೆ. ಬೆಂಗಳೂರು ಹೊರತುಪಡಿಸಿ 146 ತಾಲ್ಲೂಕು ಹಾಗೂ 19  ಜಿಲ್ಲಾಸ್ಪತ್ರೆಗಳನ್ನ ಮೇಲ್ದರ್ಜೆಗೆ ಏರಿಸುವ ನಿರ್ಣಯ ಮಾಡಲಾಗಿದೆ. ಇದಕ್ಕಾಗಿ ಮೂರು ತಿಂಗಳ ಸಮಯಾವಕಾಶ ನೀಡಲಾಗಿದೆ ಅಂತ ಹೇಳಿದ್ರು.

ಮೂರನೇ ಅಲೆಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ
ಮೂರನೇ ಅಲೆಗೆ ಬೇಕಾದ ತಯಾರಿ ಕುರಿತು ಚರ್ಚಿಸಲಾಗಿದೆ. ಇದಕ್ಕಾಗಿ ಒಂದೂವರೆ ಸಾವಿರ ಕೋಟಿ ವೆಚ್ಚವಾಗಲಿದೆ. ವೈದ್ಯರಿಗೆ ಸಂಬಳ ನೀಡುವುದಕ್ಕೆ 600 ಕೋಟಿಯಾಗಲಿದೆ, ಉಳಿದ 800 ಕೋಟಿ ಮೂಲಭೂತ ಸೌಕರ್ಯಕ್ಕೆ ವೆಚ್ಚವಾಗಲಿದೆ ಎಂದು ಅಶ್ವಥ್ ನಾರಾಯಣ್ ಹೇಳಿದ್ದಾರೆ.

ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಐಸಿಯು ಬೆಡ್ ಜೊತೆಗೆ ವೆಂಟಿಲೇಟರ್ ಬೆಡ್​ಗಳ ಸಂಖ್ಯೆ ಹೆಚ್ಚಳ‌ಕ್ಕೆ ನಿರ್ಧಾರವಾಗಿದೆ. ಅದರಲ್ಲಿ 25 ಐಸಿಯು ಬೆಡ್, 50 ಆಕ್ಸಿಜನೇಟೆಡ್ ಬೆಡ್ ಸೇರಿ ಒಟ್ಟು 100 ಬೆಡ್ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ 4 ಸಾವಿರ ಮಂದಿ ವೈದ್ಯರ ಅಗತ್ಯ ಎಂದರು.

ಸರ್ಕಾರದಿಂದ ಲಸಿಕೆ ಖರೀದಿ ಸ್ಥಗಿತ 
ಕಾರ್ಯಪಡೆ ಸಭೆಯಲ್ಲಿ ಈ ಎಲ್ಲದಕ್ಕೂ ಅನುಮೋದನೆ ನೀಡಲಾಗಿದೆ. ಮೂರು ತಿಂಗಳವರೆಗೆ ಈ ಎಲ್ಲಾ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ತಾಂತ್ರಿಕ ಸಮಿತಿಯನ್ನೂ ರಚಿಸಲು ನಿರ್ಧರಿಸಲಾಗಿದೆ. ಜಿಲ್ಲಾ ಮಟ್ಟದಲ್ಲೇ 95% ಮಂದಿಗೆ ಚಿಕಿತ್ಸೆ ನೀಡಬೇಕು. ರಾಜ್ಯ ಸರ್ಕಾರದಿಂದ ಲಸಿಕೆ ಖರೀದಿ ಮಾಡುವುದನ್ನ ಸ್ಥಗಿತಗೊಳಿಸಿದ್ದೇವೆ. ಕೋವಿಡ್ ನಿರ್ವಹಣೆ ಸಂಬಂಧ ಇರುವ ವಿವಿಧ ಌಪ್​ನ್ನು ಒಟ್ಟುಗೂಡಿಸಿ ಇಂಟಿಗ್ರೇಟ್ ಮಾಡಲು ನಿರ್ಧಾರ ಮಾಡಿದ್ದೇವೆ. ಒಂದೇ ಪೋರ್ಟಲ್​ನಲ್ಲಿ ಇಂಟಿಗ್ರೇಟ್ ಮಾಡಲು ನಿರ್ಧಾರ ಮಾಡಲಾಗಿದೆ.

ಎರಡು ತಿಂಗಳಲ್ಲಿ ಇಂಟಿಗ್ರೇಟೆಡ್ ಪೋರ್ಟಲ್​ನ್ನು ಮಾಡಲು ಸೂಚನೆ ನೀಡಲಾಗಿದೆ. ಅಷ್ಟೇ ಅಲ್ಲ, ಮೂರನೇ ಅಲೆಗೆ ಬೇಕಾಗಿರುವ 5 ಲಕ್ಷ ರೆಮ್ಡೆಸಿವರ್ ಔಷಧವನ್ನು ಬಫರ್ ಸ್ಟಾಕ್ ಮಾಡಲು ಸರ್ಕಾರ ನಿರ್ಧರಿಸಿದೆ.

The post ಬೆಂಗಳೂರಲ್ಲಿ ಆಸ್ಪತ್ರೆಗಳ ಕೊರತೆ ನೀಗಿಸಲು ‘ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ’ ನಿರ್ಮಾಣಕ್ಕೆ ನಿರ್ಣಯ  appeared first on News First Kannada.

Source: newsfirstlive.com

Source link