ಬೆಂಗಳೂರಲ್ಲಿ ಬ್ಲ್ಯಾಕ್ ಫಂಗಸ್‍ಗೆ 2 ಬಲಿ – 50ಕ್ಕೂ ಹೆಚ್ಚು ಜನರಿಗೆ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ನಿಯಂತ್ರಣ ಆಗುತ್ತಿಲ್ಲ. ಇದು ಸಾಲದು ಎಂಬಂತೆ  ಈಗ ರಾಜ್ಯದ ಜನರಿಗೆ ಬ್ಲಾಕ್ ಫಂಗಸ್ ಹಾವಳಿ ಬೇರೆ. ನಿನ್ನೆ ಬ್ಲ್ಯಾಕ್ ಫಂಗಸ್‍ಗೆ ರಾಜ್ಯದಲ್ಲಿ ಮೂವರು ಬಲಿ ಆಗಿದ್ದರು. ಇವತ್ತು ಕೂಡ ಬೆಂಗಳೂರಿನಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಜೆಸಿ ನಗರದ ಮತ್ತು ಚಿಕ್ಕಪೇಟೆಯ ನಿವಾಸಿಗಳು ಚಿಕಿತ್ಸೆ ಫಲಕಾರಿಯಾಗದೇ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಬೆಂಗಳೂರಲ್ಲಿ 50ಕ್ಕೂ ಹೆಚ್ಚು ಕೇಸ್, ಕೋಲಾರದಲ್ಲಿ 14, ಬೀದರಿನಲ್ಲಿ 16 ಕಪ್ಪು ಶಿಲೀಂದ್ರ ಪ್ರಕರಣಗಳು ನಮೂದಾಗಿವೆ.

ರಾಯಚೂರಿನಲ್ಲಿ ಈವರೆಗೆ 5 ಮಂದಿಯಲ್ಲಿ ಬ್ಲ್ಯಾಕ್ ಫಂಗಸ್‍ ಕಾಣಿಸಿಕೊಂಡಿದ್ದು, ಎಲ್ಲರೂ ಚಿಕಿತ್ಸೆಗೆ ಸ್ಪಂದಿಸ್ತಿದ್ದಾರೆ ಎಂದು ಡಿಎಚ್‍ಓ ಹೇಳಿದ್ದಾರೆ. ಬಾಗಲಕೋಟೆಯಲ್ಲಿ ಈವರೆಗೆ ಮೂವರಿಗೆ ಬ್ಲ್ಯಾಕ್ ಫಂಗಸ್‍ ಅಟ್ಯಾಕ್ ಆಗಿದೆ.

ಬೆಳಗಾವಿಯ ಖೇಮಲಾಪುರದ ಯುವಕ ಜೀವನ್ಮರಣದ ಮಧ್ಯೆ ಹೋರಾಟ ನಡೆಸ್ತಿದ್ದಾರೆ. ಸರ್ಕಾರದ ನೆರವಿಗೆ ಕುಟುಂಬಸ್ಥರು ಮನವಿ ಮಾಡಿದ್ದಾರೆ. ವಿಪರ್ಯಾಸ ಅಂದ್ರೆ ಬ್ಲಾಕ್ ಫಂಗಸ್ ಸೋಂಕಿನ ಬಗ್ಗೆ ರಾಜ್ಯ ಸರ್ಕಾರ ಸರಿಯಾದ ತಯಾರಿಯನ್ನೇ ನಡೆಸಿದಂತೆ ಕಾಣುತ್ತಿಲ್ಲ.

ಒಂದು ಕಡೆ ರಾಜ್ಯದಲ್ಲಿ ಕಪ್ಪು ಶಿಲೀಂದ್ರ ಸೋಂಕಿತರ ಚಿಕಿತ್ಸೆಗೆ ಔಷಧಿ ಕೊರತೆ ತೀವ್ರವಾಗಿದೆ. ಮತ್ತೊಂದು ಕಡೆ ರಾಜ್ಯದಲ್ಲಿ ಇದುವರೆಗೆ ಎಷ್ಟು ಮಂದಿಗೆ ಬ್ಲ್ಯಾಕ್ ಫಂಗಸ್‍ ಸೋಂಕು ಬಂದಿದೆ? ಎಷ್ಟು ಜನ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿಯೇ ಸರ್ಕಾರದ ಬಳಿ ಇಲ್ಲ ಎನ್ನುವ ಮೂಲಕ ಆರೋಗ್ಯ ಮಂತ್ರಿ ಡಾ.ಸುಧಾಕರ್ ಅಚ್ಚರಿ ಮೂಡಿಸಿದ್ದಾರೆ.

ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್‍ ಚಿಕಿತ್ಸೆಗೆ ಸದ್ಯ 1055 ವಯಲ್ ಅಷ್ಟೇ ಔಷಧಿ ಇರುವುದು. ಕೇಂದ್ರ ಈ ಕೂಡಲೇ 20 ಸಾವಿರ ವಯಲ್ಸ್ ಒದಗಿಸಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮೂಲಕ ಒತ್ತಾಯಿಸಿದ್ದಾರೆ.

The post ಬೆಂಗಳೂರಲ್ಲಿ ಬ್ಲ್ಯಾಕ್ ಫಂಗಸ್‍ಗೆ 2 ಬಲಿ – 50ಕ್ಕೂ ಹೆಚ್ಚು ಜನರಿಗೆ ಸೋಂಕು appeared first on Public TV.

Source: publictv.in

Source link