ಕಳೆದ ಕೆಲ ದಿನಗಳಿಂದ ವರುಣ ಬಿಟ್ಟುಬಿಡದೇ ಬೆಂಗಳೂರು ಜನರನ್ನು ಕಾಡುತ್ತಿದ್ದಾನೆ. ನಿರಂತರವಾಗಿ ಸುರಿಯುತ್ತಿರೋ ಮಳೆಗೆ ಜನರು ಹೈರಾಣಾಗಿದ್ದಾರೆ. ಜನಜೀವನ ಅಸ್ತವ್ಯಸ್ತಗೊಳಿಸಿರೋ ವರುಣ ಸದ್ಯ ರಾಜಧಾನಿಯ ವಾಹನ ಸವಾರರ ಪ್ರಾಣಕ್ಕೂ ಸಂಚಕಾರ ತಂದೊಡ್ಡಿದ್ದಾನೆ. ಮಂಗನಪಾಳ್ಯದಿಂದ ಬೆಗೂರು ಕಡೆಗೆ ಹೊರಟ್ಟಿದ್ದ ಬೈಕ್ ಸವಾರ ಅಭಿಷೇಕ್ ರಸ್ತೆ ಗುಂಡಿ ತಪ್ಪಿಸಲು ಹೋಗಿ ಅಪಘಾತಕ್ಕೀಡಾಗಿದ್ದು, ಕಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ. ಏರ್ಪೋರ್ಟ್ ರಸ್ತೆಯಲ್ಲಿ ಎರಡು ಕಾರುಗಳ ನಡುವೆ ಡಿಕ್ಕಿಯಾಗಿ ಮೂವರು ಸಾವನ್ನಪ್ಪಿದ್ದಾರೆ. ಮಳೆ ಹಿನ್ನೆಲೆ ರಸ್ತೆ ಕಾಣದೆ ಕಾರೊಂಡು ಡಿವೈಡರ್ಗೆ ಗುದ್ದಿ ಬಳಿಕ ಬಳಿಕ ಎದುರಿಗೆ ಬರ್ತಿದ್ದ ಮತ್ತೊಂದು ಕಾರಿನ ಮೇಲೆ ಬಿದ್ದಿದೆ.
ಈ ದೃಶ್ಯಗಳನ್ನು ನೋಡ್ತಿದ್ರೆ ಐಟಿ ಕ್ಯಾಪಿಟಲ್ ಬೆಂಗಳೂರು ಌಕ್ಸಿಡೆಂಟ್ ಕ್ಯಾಪಿಟಲ್ ಆಗ್ತಿರೋ ಅನುಮಾನ ಶುರುವಾಗಿದೆ. ಕಳೆದೆರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರೋ ಮಳೆಯಿಂದಾಗಿ ಮನೆ ಗೋಡೆ ಕುಸಿತ, ಮನೆಗುಳಿಗೆ ನೀರು ನುಗ್ಗಿ ಜನ ಪರದಾಡೋದು ಒಂದೆಡೆಯಾದ್ರೆ ವಾಹನ ಸವಾರರ ಪ್ರಾಣಕ್ಕೂ ಕಂಟಕ ಎದುರಾಗಿದೆ. ಜನರ ಜೀವಕ್ಕೆ ಸಂಚಕಾರ ಎದುರಾಗಲು ಕಾರಣವಾಗಿರೋದು ರಾಜಧಾನಿಯ ಕಳಪೆ ರಸ್ತೆಗಳು.
ನಿರಂತರ ಮಳೆಯಿಂದಾಗಿ ರಾಜಧಾನಿಯ ರಸ್ತೆಗಳ ಟಾರ್ ಕಿತ್ತುಬರ್ತಿದೆ. ರಸ್ತೆ ಗುಂಡಿಗಳಲ್ಲಿ ನೀರು ತುಂಬಿಕೊಂಡು ರಸ್ತೆ ಯಾವುದೋ ಗುಂಡಿ ಯಾವುದೋ ತಿಳಿಯದೇ ಅಪಘಾತಗಳು ಸಂಭವಿಸುತ್ತಿವೆ. ಈ ಮಾತಿಗೆ ಸಾಕ್ಷಿ ಹೇಳುತ್ತಿವೆ ಗುಂಡಿಗಳಿಂದಲೇ ತುಂಬಿಕೊಂಡಿರೋ ಸುಂಕದ ಕಟ್ಟೆ ರಸ್ತೆಗಳು.
ಇದನ್ನೂ ಓದಿ: ಏರ್ಪೋರ್ಟ್ ರಸ್ತೆಯಲ್ಲಿ ಭೀಕರ ಅಪಘಾತ.. ಕಾರಿನ ಮೇಲೆ ಕಾರು ಬಿದ್ದು ಮೂವರು ಸ್ಥಳದಲ್ಲೇ ಸಾವು
ಮಳೆ ಆರ್ಭಟದ ನಡುವೆ ಬಿಬಿಎಂಪಿ ನಿರ್ಲಕ್ಷ್ಯ ವಹಿಸುತ್ತಿದ್ದು, ಕಳಪೆ ರಸ್ತೆಗಳಿಂದಾಗಿ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ಕಳೆದೊಂದು ವಾರದಲ್ಲಿ 55 ಌಕ್ಸಿಡೆಂಟ್ ಪ್ರಕರಣಗಳು ದಾಖಲಾಗಿರೋದು ಪರಿಸ್ಥಿತಿಯ ಗಂಭೀರತೆಗೆ ಹಿಡಿದ ಕೈ ಗನ್ನಡಿಯಾಗಿದೆ.
ಬೆಂಗಳೂರು ಪೂರ್ವ ವಿಭಾಗದಲ್ಲಿ 19 ಅಪಘಾತ ಪ್ರಕರಣಗಳು ವರದಿಯಾದ್ರೆ, ಬೆಂಗಳೂರು ಪಶ್ಚಿಮ ವಿಭಾಗದಲ್ಲಿ 22 ಅಪಘಾತಗಳು ಸಂಭವಿಸಿವೆ. ಬೆಂಗಳೂರು ಉತ್ತರ ವಿಭಾಗದಲ್ಲಿ 14 ಌಕ್ಸಿಡೆಂಟ್ ಕೇಸ್ ವರದಿಯಾಗಿವೆ.
ಮೊದಲೇ ಸಿಲಿಕಾನ್ ಸಿಟಿ ರಸ್ತೆಯ ಗುಂಡಿಗಳು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದವು. ಈಗ ಮಳೆ ಬೀಳುತ್ತಿರುವುದರಿಂದ ರಸ್ತೆಗಳ ಸ್ಥಿತಿ ಇನ್ನಷ್ಟು ಹದಗೆಟ್ಟಿದ್ದು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಗುಂಡಿಗಳಿರೋ ರಸ್ತೆಯಲ್ಲೇ ಹೆಚ್ಚಿನ ಅಪಘಾತ ಪ್ರಕರಣಗಳು ವರದಿಯಾಗುತ್ತಿದ್ದು, ಇನ್ನಾದ್ರೂ ಬಿಬಿಎಂಪಿ ನಿದ್ದೆಯಿಂದ ಎದ್ದು ಕಳಪೆ ರಸ್ತೆಗಳನ್ನ ಸರಿಪಡಿಸುವತ್ತ ಗಮನ ಹರಿಸಬೇಕಿದೆ.