ಬೆಂಗಳೂರಿಗೆ ಪ್ರತ್ಯೇಕ ಪ್ರಣಾಳಿಕೆ, ಕರ್ನಾಟಕಕ್ಕೆ ಪಂಚರತ್ನ ಕಾರ್ಯಕ್ರಮ: ಜೆಡಿಎಸ್ ಸಂಘಟನೆಗೆ ಹೊಸ ವೇಗ ನೀಡಲು ಎಚ್​ಡಿ ಕುಮಾರಸ್ವಾಮಿ ನಿರ್ಧಾರ | JDS Leader HD Kumaraswamy Alleges a Former CM Trying to Woo JDS MLAs


ಬೆಂಗಳೂರಿಗೆ ಪ್ರತ್ಯೇಕ ಪ್ರಣಾಳಿಕೆ, ಕರ್ನಾಟಕಕ್ಕೆ ಪಂಚರತ್ನ ಕಾರ್ಯಕ್ರಮ: ಜೆಡಿಎಸ್ ಸಂಘಟನೆಗೆ ಹೊಸ ವೇಗ ನೀಡಲು ಎಚ್​ಡಿ ಕುಮಾರಸ್ವಾಮಿ ನಿರ್ಧಾರ

ಜೆಡಿಎಸ್ ನಾಯಕ ಎಚ್​.ಡಿ.ಕುಮಾರಸ್ವಾಮಿ

ಬೆಂಗಳೂರು: ಕಳೆದ 9 ದಿನಗಳಿಂದ ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಡೆದ ಜನತಾ ಪರ್ವ ಎರಡನೇ ಹಂತದ ಕಾರ್ಯಗಾರ ‘ಜನತಾ ಸಂಗಮ’ಕ್ಕೆ ಬುಧವಾರ ತೆರೆಬಿತ್ತು. ಮುಂದಿನ ಹಂತದ ಕಾರ್ಯಕ್ರಮವನ್ನು ಶೀಘ್ರವೇ ಘೋಷಣೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಕಚೇರಿಯಲ್ಲಿ 9 ದಿನಗಳಿಂದ ಸಂಘಟನೆ ಕಾರ್ಯಕ್ರಮ ನಡೆಯುತ್ತಿದೆ. ಎಲ್ಲ ಜಿಲ್ಲೆಗಳ ಮುಖಂಡರ ಜತೆ ಸಭೆ ನಡೆಸಿದ್ದೇವೆ. ಬಿಡದಿ ಕಾರ್ಯಾಗಾರದ ನಂತರ ಪಕ್ಷದ ಕಚೇರಿಯಲ್ಲಿ ಜನತಾ ಸಂಗಮ ನಡೆದಿದೆ. ಮುಖಂಡರು, ಪದಾಧಿಕಾರಿಗಳು ಹಾಗೂ ಮುಂಬರುವ ಚುನಾವಣೆ ಸಂಭವನೀಯ ಅಭ್ಯರ್ಥಿಗಳ ಜತೆ ಚರ್ಚೆ ಮಾಡಿದ್ದೇವೆ. ದೇವೇಗೌಡರ ಸಮ್ಮುಖದಲ್ಲಿ ಅವರಿಗೆಲ್ಲ ಗುರಿ ದಾರಿ ತೋರಿದ್ದೇವೆ ಎಂದು ಅವರು ಹೇಳಿದರು.

ಸಿಂದಗಿ ಕ್ಷೇತ್ರದಲ್ಲಿ ನಿರೀಕ್ಷೆಯಂತೆ ಫಲಿತಾಂಶ ಸಿಗಲಿಲ್ಲ. ಆದರೂ ನಮ್ಮ ಕಾರ್ಯಕರ್ತರು, ಮುಖಂಡರಲ್ಲಿ ಉತ್ಸಾಹ ಕುಗ್ಗಿಲ್ಲ. ಎಲ್ಲ ಜಿಲ್ಲೆಗಳಿಂದ ಬಂದವರು ಸಂಘಟನಾತ್ಮಕವಾಗಿ ಹೆಚ್ಚು ಆಸಕ್ತಿ ವಹಿಸಿದ್ದರು. ಅವರ ಅನುಮಾನ, ಗೊಂದಲಗಳನ್ನು ಬಗೆಹರಿಸಿದ್ದೇವೆ. ಜನರ ಸಮೀಪ ಹೋಗಲು ಕೆಲ ಯೋಜನೆಗಳನ್ನು ರೂಪಿಸಿಕೊಂಡಿದ್ದೇವೆ ಎಂದು ನುಡಿದರು. ಕೆಲ ಜಿಲ್ಲೆಗಳಲ್ಲಿ ನಮ್ಮ ಪಕ್ಷಕ್ಕೆ ಹಿನ್ನಡೆಯಾಗಿದೆ. ಅಲ್ಲಿನ ಹಲವು ಕೊರತೆಗಳ ಕಾರಣ ಸಂಘಟನೆಗೆ ಸ್ವಲ್ಪ ಸಮಯಾವಕಾಶ ಬೇಕಿದೆ. ಬೆಂಗಳೂರು ನಗರದ ಸಭೆ ನಿರೀಕ್ಷೆಗೂ‌ ಮೀರಿ ಯಶಸ್ವಿಯಾಗಿದೆ. ಮುಂದಿನ ಬಿಬಿಎಂಪಿ ಚುನಾವಣೆ ಹಾಗೂ 2023ರ ಚುನಾವಣೆ ಗಮನದಲ್ಲಿ ಇಟ್ಟುಕೊಂಡು ಬೆಂಗಳೂರು ನಗರಕ್ಕೆ ಪ್ರತ್ಯೇಕ ಪ್ರಣಾಳಿಕೆ ಸಿದ್ಧಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಬೆಂಗಳೂರು ಮಹಾನಗರಕ್ಕೆ ದೇವೇಗೌಡರು ಮುಖ್ಯಮಂತ್ರಿ, ಪ್ರಧಾನಿ ಆಗಿದ್ದಾಗ ಅನೇಕ ಕೊಡುಗೆಗಳನ್ನು ನೀಡಿದ್ದರು. ನಾನು ಮುಖ್ಯಮಂತ್ರಿ ಆಗಿದ್ದಾಗ ಕೂಡ ಅತ್ಯುತ್ತಮ ಕೊಡುಗೆಗಳನ್ನು ನೀಡಿದ್ದೇನೆ. ನಗರದ ಮೊತ್ತ ಮೊದಲ ಮೇಲ್ಸೇತುವೆ ಎನಿಸಿದ, ಸಿರ್ಸಿ ವೃತ್ತದಿಂದ ಕಾರ್ಪೊರೇಷನ್​ವರೆಗಿನ ಮೇಲುಸೇತುವೆ ಗೌಡರು ಕೊಟ್ಟ ಕೊಡುಗೆ ಎಂದು ಅವರು ತಿಳಿಸಿದರು. ಈಗಾಗಲೇ ರಾಜ್ಯಕ್ಕೆ ಪಂಚರತ್ನ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ್ದೇವೆ. 2023ಕ್ಕೆ ನಮ್ಮ ಪಕ್ಷದ ಸ್ವತಂತ್ರ ಸರಕಾರ ಬಂದರೆ ಕೊಟ್ಟಿರುವ ಎಲ್ಲ ಭರವಸೆಗಳನ್ನು ಕಾಲಮಿತಿಯಲ್ಲಿ ಅನುಷ್ಠಾನಕ್ಕೆ ತರುತ್ತೇವೆ ಎಂದು ಅವರು ತಿಳಿಸಿದರು.

ಜೆಡಿಎಸ್ ಮುಗಿಸುವ ಹುನ್ನಾರ: ಕುಮಾರಸ್ವಾಮಿ ಅರೋಪ
ಮುಂದಿನ ಚುನಾವಣೆ ಒಳಗೆ ಜೆಡಿಎಸ್ ಪಕ್ಷವನ್ನು ಮುಗಿಸಲೇಬೇಕೆಂಬ ದುಷ್ಟಪ್ರಯತ್ನವನ್ನು ಮಾಜಿ ಮುಖ್ಯಮಂತ್ರಿಯೊಬ್ಬರು ನಡೆಸುತ್ತಿದ್ದಾರೆ. ನಮ್ಮ ಶಾಸಕರನ್ನು ಹೈಜಾಕ್ ಮಾಡಲು ಬ್ರೈನ್ ವಾಶ್ ಮಾಡುತ್ತಿದ್ದಾರೆ. ಪಕ್ಷವನ್ನು ದುರ್ಬಲಗೊಳಿಸಲು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಕ್ಷೇತ್ರಗಳಲ್ಲಿ ಕೊಂಚ ಬಲ ಇಟ್ಟುಕೊಂಡಿರುವ ಶಾಸಕರನ್ನು, ಕಳೆದ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋತ ಅಭ್ಯರ್ಥಿಗಳನ್ನು ಅವರು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಯಾರೊಬ್ಬರ ಹೆಸರನ್ನೂ ಹೇಳದೆ ಟೀಕಿಸಿದರು.

ಜೆಡಿಎಸ್​ನ ಒಬ್ಬ ಶಾಸಕರಿಗೆ ಹನ್ನೊಂದು ಸಲ ಕರೆ ಮಾಡಿ ಏನು ತೀರ್ಮಾನ ಮಾಡಿದಿರಿ ಎಂದು ಕೇಳಿದ್ದಾರೆ. ಸ್ವತಃ ನನ್ನ ಆತ್ಮೀಯ ಶಾಸಕರೇ ಆ ಮಾಜಿ ಮುಖ್ಯಮಂತ್ರಿ ಮಾಡಿರುವ ದೂರವಾಣಿ ಕರೆಯ ಲಿಸ್ಟ್ ತೋರಿಸಿದರು. ಕಾಂಗ್ರೆಸ್ ಜತೆ ನಾವು ಸರ್ಕಾರ ಮಾಡಿದ ಬಳಿಕ ನಮ್ಮವರ ಬ್ರೈನ್​ವಾಷ್ ಮಾಡಲಾಗುತ್ತಿದೆ. ಇದರ ಬಗ್ಗೆ ನನಗೆ ಯಾವುದೇ ಆತಂಕ‌ ಇಲ್ಲ. ಮುಖ್ಯವಾಗಿ ಹಳೆಯ ಮೈಸೂರು ಭಾಗದಲ್ಲಿ ನಮ್ಮ ಮುಖಂಡರು ಹಾಗೂ ಶಾಸಕರನ್ನು ಸೆಳೆಯುವ ಪ್ರಯತ್ನ ನಡೆಸಲಾಗುತ್ತಿದೆ ಎಂದರು. ನಮಗೆ ನಮ್ಮ ಪಕ್ಷದ ಶಾಸಕರು ಇದ್ದಾರೆ. ಕಾರ್ಯಕರ್ತರ ಪಡೆ ಇದೆ. ಆದರೆ, ಆ ಪಕ್ಷಕ್ಕೆ ನಾಯಕರ ಕೊರತೆ ಇದೆ. ಬೇರೆ ಗತಿ ಇಲ್ಲದೆ ನಮ್ಮ ಪಕ್ಷದವರಿಗೆ ಗಾಳ ಹಾಕುತ್ತಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷ ಮತ್ತು ನಮ್ಮ ಬಗ್ಗೆ ಲಘು ಮಾತು ಬೇಡ
ಯಾರಿಗೆ ಎಲ್ಲಿ ಅನುಕೂಲ ಆಗುತ್ತೋ ಅವರು ಅಲ್ಲಿಗೆ ಹೋಗಲಿ. ಆದರೆ, ಹೋಗುವ ಮುನ್ನ ಅಥವಾ ಹೋದ ಮೇಲೆ ನಮ್ಮ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡುವುದು ಬೇಡ. ಇಲ್ಲಿಂದ ಎಲ್ಲ ಶಕ್ತಿ ಪಡೆದುಕೊಂಡು ನಮ್ಮ ಬಗ್ಗೆ ಮಾತನಾಡುವುದು ಬೇಡ. ಯಾರು ಪಕ್ಷ ಬಿಡಲು ಒಂದು ಹೆಜ್ಜೆ ಇಟ್ಟಿದ್ದಾರೆಯೋ ಅಥವಾ ಯಾರು ಎರಡೂ ಕಾಲು ಆಚೆ ಇಟ್ಟಿದ್ದಾರೆಯೋ? ಎಲ್ಲಿ ಭವಿಷ್ಯ ಇದೆ ಎಂದು ಅನ್ನಿಸುವುದೋ ಅಲ್ಲಿಗೆ ಹೋಗಲಿ. ಅವರು ಪಕ್ಷ ಬಿಟ್ಟು ಹೋಗುತ್ತಾರೆ ಎಂದು ನಾವು ಅಳುತ್ತಾ ಕೂರಲು ಆಗಲ್ಲ. ಆದರೂ ಕೆಲವರನ್ನು ಮನವೊಲಿಸಲು ಸಾಧ್ಯವಿದ್ದರೆ ಮಾಡುತ್ತೇವೆ. ಆ ಪ್ರಯತ್ನವನ್ನು ನಾವು ಬಿಟ್ಟಿಲ್ಲ ಎಂದು ವಿವರಿಸಿದರು.

ಇದನ್ನೂ ಓದಿ: ಕಲಬುರಗಿ ಪಾಲಿಕೆಯಲ್ಲಿ ಕಿಂಗ್ ಮೇಕರ್ ಆಗಿದ್ದ ದಳಪತಿಗಳು ಕಂಗಾಲು; ಬಿಜೆಪಿ ಹೊಸತಂತ್ರಕ್ಕೆ ಬೆಚ್ಚಿಬಿದ್ದ ಜೆಡಿಎಸ್
ಇದನ್ನೂ ಓದಿ: ಬಿಜೆಪಿ ಹೇಳುವುದೊಂದು, ಮಾಡುವುದು ಇನ್ನೊಂದು; ಮನೆಯಲ್ಲಿ ಒಂದು ಮುಖ, ಬೀದಿಯಲ್ಲೊಂದು ಮುಖ- ಬಿಜೆಪಿ ವಿರುದ್ಧ ಜೆಡಿಎಸ್ ಸರಣಿ ಟ್ವೀಟ್

TV9 Kannada


Leave a Reply

Your email address will not be published. Required fields are marked *