ಬೆಂಗಳೂರು: ಲಾಕ್​ಡೌನ್ ಸಡಿಲಿಕೆ ಘೋಷಣೆ ಮಾಡಿದ ಬೆನ್ನಲ್ಲೇ ಜನರು ಬೆಂಗಳೂರಿಗೆ ವಾಪಸ್ಸಾಗುತ್ತಿರುವ ಹಿನ್ನೆಲೆ ಅವರಿಗೆ ಕಡ್ಡಾಯವಾಗಿ ಕೊರೊನಾ ಟೆಸ್ಟ್​ ಮಾಡಿಸಲು ಅಧಿಕಾರಿಗಳಿಗೆ ಹೇಳಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಹೇಳಿದ್ದಾರೆ.

ಶುಕ್ರವಾರ ಹಾಸನಕ್ಕೆ ಹಾಗೂ ನಿನ್ನೆ ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಿದ್ದ ಸಿಎಂ ಜಿಲ್ಲಾ ಪ್ರವಾಸ ಮುಗಿಸಿ ಇಂದು ಶಿಕಾರಿಪುರದಿಂದ ಕಾವೇರಿ ನಿವಾಸಕ್ಕೆ ವಾಪಸ್​ ಆಗಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಹಾಸನ, ಶಿವಮೊಗ್ಗ ಜಿಲ್ಲೆ ಅಭಿವೃದ್ಧಿ, ಕೋವಿಡ್ ಬಗ್ಗೆ ಪರಿಶೀಲನೆ ಮುಗಿಸಿದ್ದೇನೆ. ಜಿಲ್ಲೆಯ ಅಭಿವೃದ್ಧಿ ಕೆಲಸ ಮತ್ತು ಕೋವಿಡ್ ಸ್ಥಿತಿಗತಿ ಬಗ್ಗೆ ಚರ್ಚೆ ಮಾಡಿದ್ದೇವೆ. ಯಶಸ್ವಿ ಪ್ರವಾಸ ಆಗಿದೆ ಎಂದರು.

ಜಿಲ್ಲೆಯ ವಾಸ್ತವಿಕ ಸ್ಥಿತಿ ತಿಳಿಯೋಕೆ ಅವಕಾಶ ಆಯ್ತು. ಹಾಸನದಲ್ಲಿ ಏರ್ಪೋರ್ಟ್ ಕೆಲಸ ನಡೆಯುತ್ತಿದೆ. ಆದಷ್ಟು ಬೇಗ ದೇವೇಗೌಡರ ಜೊತೆ ಶಂಕುಸ್ಥಾಪನೆ ಕಾರ್ಯ ಮಾಡ್ತೇನೆ. ಅಭಿವೃದ್ಧಿ ಕಾರ್ಯ ಕೂಡ ಮಾಡಲಾಗುವುದು ಎಂದು ಸಿಎಂ ತಿಳಿಸಿದ್ರು.

ಮುಂದಿನ ವಾರ ಅರುಣ್ ಸಿಂಗ್ ರಾಜ್ಯಕ್ಕೆ ಆಗಮಿಸುತ್ತಿರುವ ಬಗ್ಗೆ ಮಾತನಾಡಿದ ಬಿಎಸ್​ವೈ, ಅರುಣ್ ಸಿಂಗ್ ಎರಡು ಮೂರು ದಿನ ರಾಜ್ಯಕ್ಕೆ ಬರ್ತಾರೆ. ರಾಜ್ಯದ ಸ್ಥಿತಿಗತಿ ಬಗ್ಗೆ ಶಾಸಕರು, ಸಚಿವರು, ಸಂಸದರ ಜತೆ ಚರ್ಚೆ ಮಾಡ್ತಾರೆ.  ಅವರು ಬಂದಾಗ ನಾನು ಪೂರ್ಣವಾಗಿ ಸಹಕರಿಸ್ತೇನೆ ಎಂದು ಹೇಳಿದರು.

ತಿರುಕನ ಕನಸು ಕಾಣುವವರಿಗೆ ನಾನು ಏನೂ ಹೇಳೋದಿಲ್ಲ
ಕಾಂಗ್ರೆಸ್​ ನಾಯಕ ದಿಗ್ವಿಜಯ ಸಿಂಗ್, ದೇಶದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದ್ರೆ ಆರ್ಟಿಕಲ್ 370 ಮರುಪರಿಶೀಲನೆ ಮಾಡುವುದಾಗಿ ನೀಡಿರೋ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಬಿಎಸ್​ವೈ, ತಿರುಕನ ಕನಸು ಕಾಣುವವರಿಗೆ ನಾನು ಏನೂ ಹೇಳೋದಿಲ್ಲ ಎಂದು ಹರಿಹಾಯ್ದರು. ಅವರ ನಾಯಕತ್ವದ ಕೊರತೆಯಿಂದ ಪಕ್ಷ ಎಲ್ಲಿದೆ ಅನ್ನೋದು ಗೊತ್ತಿದೆ. ಕಾಂಗ್ರೆಸ್ ಪರಿಸ್ಥಿತಿ ಹೇಗಿದೆ ಅನ್ನೋದು ಎಲ್ಲರೂ ಗಮನಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ರು.

ಖಾಸಗಿ ಶಾಲೆಗಳ ಫೀಸ್ ಕಡಿಮೆ ಮಾಡದ ವಿಚಾರವಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಜೊತೆ ಮಾತನಾಡ್ತೇನೆ. ಆ ಬಗ್ಗೆ ಪರಿಶೀಲನೆ ಮಾಡಲು ಸೂಚಿಸೂತ್ತೇನೆ ಎಂದು ಸಿಎಂ ತಿಳಿಸಿದ್ರು.

The post ಬೆಂಗಳೂರಿಗೆ ವಾಪಸ್ಸಾಗ್ತಿರುವವರಿಗೆ ಕಡ್ಡಾಯ ಕೊರೊನಾ ಟೆಸ್ಟ್ ಮಾಡಲು ಸೂಚನೆ -ಸಿಎಂ appeared first on News First Kannada.

Source: newsfirstlive.com

Source link