ಬೆಂಗಳೂರಿನಲ್ಲಿ‌ ಸದ್ದಿಲ್ಲದೆ ಮಾನವ ಕಳ್ಳ ಸಾಗಾಣೆ ನಡೆತಿದೆಯಾ? ಕಲಬುರಗಿ ರೈಲ್ವೇ ನಿಲ್ದಾಣದಲ್ಲಿ ಪ್ರಕರಣ ಬಯಲು

ಬೆಂಗಳೂರಿನಿಂದ ಮುಂಬೈಗೆ ಅಕ್ರಮವಾಗಿ ಬಾಲಕಿಯನ್ನ ಕಳ್ಳ ಸಾಗಣೆ ಮಾಡುತ್ತಿದ್ದಾಗ ಬಾಲಕಿ ವಿರೋಧಿಸಿದ ಹಿನ್ನಲೆ ಆ ಯುವಕ ಕಲಬುರಗಿ ರೈಲ್ವೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮುಂಬೈನಲ್ಲಿ ಕೆಲಸ ಕೊಡಿಸೊದಾಗಿ ಬಾಲಕಿಯ ಅಜ್ಜಿಗೆ ಒಂದಿಷ್ಟು ಹಣ ಕೊಟ್ಟು ಕರೆದುಕೊಂಡು ಹೋಗ್ತಿದ್ದಾತ ಈಗ ರೈಲ್ವೆ ಪೊಲೀಸ್ ಅತಿಥಿಯಾಗಿದ್ದಾನೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ‌ ಸದ್ದಿಲ್ಲದೆ ಮಾನವ ಕಳ್ಳ ಸಾಗಾಣೆ ನಡೆತಿದೆಯಾ ಅನ್ನೋ ಅನುಮಾನ ಶುರುವಾಗಿದೆ.

ರಾಜ್ಯದಲ್ಲಿ ಮಾನವ ಕಳ್ಳಸಾಗಾಣಿಕೆ ನಡೆಯುತ್ತಿದೆಯಾ ಎಂಬ ಅನುಮಾನ ಮೂಡಿದೆ. ಯಾಕಂದ್ರೆ, ಕಲಬುರಗಿಯಲ್ಲಿ ಇಂಥದ್ದೊಂದು ಪ್ರಕರಣ ಪತ್ತೆಯಾಗಿದೆ.

ಬೆಂಗಳೂರಿನಿಂದ ಮುಂಬೈಗೆ ಮಾನವ ಕಳ್ಳ ಸಾಗಣೆಗೆ ಯತ್ನ?
ಯೆಸ್‌.. ಬೆಂಗಳೂರು ಮೂಲದ 12 ವರ್ಷದ ಬಾಲಕಿಯನ್ನ  ಮಹಾರಾಷ್ಟ್ರ ಮೂಲದ ಯುವಕ ವಿವೇಕ್ ಸಿಂಗ್ ಎಂಬಾತ ಬಲವಂತವಾಗಿ ಕರೆದುಕೊಂಡು ಹೋಗೊಕೆ ಮುಂದಾಗಿದ್ದ ಎನ್ನಲಾಗಿದೆ. ಬೆಂಗಳೂರಿನಿಂದ ರೈಲಿನ ಮೂಲಕ ಮುಂಬೈಗೆ ಹೋಗುವಾಗ ಬಾಲಕಿ ಯುವಕನ ಜೊತೆ ಜಗಳ ತೆಗೆದಿದ್ದಾಳೆ. ಅಲ್ಲದೇ ಕಲಬುರಗಿ ರೇಲ್ವೇ ನಿಲ್ದಾಣ ಬರ್ತಿದ್ದ ರೈಲಿನಿಂದ‌ ಕೆಳಗಿಳಿದು ಪ್ಲಾಟ್ ಫಾರಂ ಮೇಲೆ‌ ಕೂತು ಕಣ್ಣೀರು ಹಾಕುತ್ತಾ ನಿಂತಿದ್ದಾಳೆ. ಆಗ ತಕ್ಷಣ ಇವರಿಬ್ಬರ ಗಲಾಟೆ ನೋಡಿದ ರೈಲ್ವೆ ಪೊಲೀಸರು ಮಕ್ಕಳ ರಕ್ಷಣಾ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಮಕ್ಕಳ ರಕ್ಷಣಾ ಅಧಿಕಾರಿಗಳು ಬಾಲಕಿಯನ್ನ ವಿಚಾರಿಸಿದಾಗ ತನ್ನನ್ನ ಬಲವಂತದಿಂದ ಮುಂಬೈಗೆ ಕರೆದುಕೊಂಡು‌ ಹೋಗ್ತಿರುವುದಾಗಿ ಹೇಳಿದ್ದಾಳೆ.

ಕ್ಯಾಂಟೀನ್​ನಲ್ಲಿ ಅಡುಗೆ ಕೆಲಸ ಕೊಡಿಸುವುದಾಗಿ ಹೇಳಿ ನನ್ನನ್ನು ಕರೆದುಕೊಂಡು ಹೋಗುತ್ತಿದ್ದ. ಮನೆಯಲ್ಲಿ ನಾನು ನನ್ನ ಅಜ್ಜಿ ಮಾತ್ರ ಇದ್ದು, ನನಗೆ ಕೆಲಸಕ್ಕೆ ಹೋಗಲು ಇಷ್ಟವಿಲ್ಲದಿದ್ದರೂ ಒತ್ತಾಯ ಪೂರ್ವಕವಾಗಿ ಅಜ್ಜಿ ಕೆಲಸಕ್ಕೆ ಕಳಿಸಿದ್ದರು. ಅಣ್ಣನಿಗೆ ಫೋನ್​ ಮಾಡಿ ರೈಲ್ವೆ ಸ್ಟೇಷನ್​ಗೆ ಕರೆಸಿದೆ.

ಇನ್ನು ಮುಂಬೈ ಮೂಲದ‌ ವಿವೇಕ್ ಸಿಂಗ್ ಬೆಂಗಳೂರಿನ ಶಿವಾಜಿನಗರದ ಹೊಟೇಲ್ ಒಂದರಲ್ಲಿ ಕೆಲಸ ಮಾಡ್ತಿದ್ದನಂತೆ. ತಾನು ಕೆಲಸ ಮಾಡುವ ಏರಿಯಾದಲ್ಲಿನ ಬಾಲಕ ಬಾಲಕಿಯರನ್ನ ಪರಿಚಯ ಮಾಡಿಕೊಂಡು ಅವರ ಕುಟುಂಬದವರಿಗೆ ಒಂದಷ್ಟು ದುಡ್ಡು ಕೊಟ್ಟು ಕರೆದುಕೊಂಡು ಹೋಗ್ತಿದ್ದನಂತೆ. ಅದೇ ರೀತಿಯಾಗಿ ಈ 12 ವರ್ಷದ ಬಾಲಕಿಯ ಅಜ್ಜಿಗೂ ಒಂದಿಷ್ಟು ದುಡ್ಡು ಕೊಟ್ಟು ಕರೆದೊಯ್ತಿರುವ ಅನುಮಾನವೂ ಶುರುವಾಗಿದೆ.

ಈ ಹುಡುಗಿ ನನಗೆ ಬೆಂಗಳೂರಿನಲ್ಲಿ ಸಿಕ್ಕಿದ್ದಳು, ನನಗೆ ಕೆಲಸ ಬೇಕು ಎಂದು ಕೇಳಿಕೊಂಡಿದ್ದಳು. ಆಕೆ ಅಜ್ಜಿಯೊಂದಿಗೆ ಫೋನಿನಲ್ಲಿ ಮಾತನಾಡಿದಾಗ ನಾನು ಕೆಲಸ ಕೊಡಿಸಲು ಮುಂಬೈಗೆ ಕರೆದುಕೊಂಡು ಹೋಗುತ್ತಿದ್ದೆ. ಇಲ್ಲಿಯವರೆಗೆ ಸುಮಾರು 20ರಿಂದ 22 ಜನರಿಗೆ ಮುಂಬೈನಲ್ಲಿ ಕೆಲಸ ಕೊಡಿಸಿದ್ದೇನೆ.

ಇನ್ನು ಯುವಕನ ದ್ವಂದ ಹೇಳಿಕೆಗಳು ಮತ್ತು ಬಾಲಕಿಯ ಹೇಳಿಕೆಗಳು ಸಾಕಷ್ಟು ಅನುಮಾನ ಮೂಡಿಸುತ್ತಿವೆ. ಹೀಗಾಗಿ ಮಕ್ಕಳ ರಕ್ಷಣಾ ಅಧಿಕಾರಿಗಳು ಯುವಕ ವಿವೇಕ್ ಸಿಂಗ್ ವಿರುದ್ಧ ವಾಡಿ ರೇಲ್ವೇ ಠಾಣೆಯಲ್ಲಿ ದೂರು ದಾಖಲಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಇನ್ನು ವಿವೇಕ್ ಸಿಂಗ್‌ ಜೊತೆಗಿದ್ದ ಬಾಲಕಿಯನ್ನ ಬಾಲ ಮಂದಿರದಲ್ಲಿಟ್ಟು ರಕ್ಷಣೆ ನೀಡಲಾಗಿದೆ. ಒಟ್ನಲ್ಲಿ ಬಲವಂತವಾಗಿ ಬಾಲಕಿಯನ್ನ ಮುಂಬೈ ನಂತಹ  ಮಾಯಾನಗರಿಗೆ ಕರೆದುಕೊಂಡು ಹೋಗಿ ಅದೇನು ಮಾಡ್ತಿದ್ದನೋ ಏನೋ ಆ ಯುವಕ. ಆದ್ರೆ ರೈಲ್ವೆ ಪೊಲೀಸ್ ಮತ್ತು ಮಕ್ಕಳ ರಕ್ಷಣಾ ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ಬಾಲಕಿಯನ್ನ ರಕ್ಷಣೆ ಮಾಡಲಾಗಿದೆ. ಅದೇನೆ ಇರ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೈಲೆಂಟ್ ಆಗಿ ಸಾಗ್ತಾ ಇರುವ ಈ ಮಾನವ ಕಳ್ಳ ಸಾಗಾಣೆಯನ್ನ ಪೊಲೀಸರು ಗಂಭೀರವಾಗಿ ಪರಿಗಣಿಸಬೇಕಿದೆ.

ವಿಶೇಷ ಬರಹ: ಬಜರಂಗಿ, ನ್ಯೂಸ್ ಫಸ್ಟ್, ಕಲಬುರಗಿ.

News First Live Kannada

Leave a comment

Your email address will not be published. Required fields are marked *