ನಿತೀಶ್ ಪಾರ್ಕ್ ಅಪಾರ್ಟ್ಮೆಂಟ್, ಮೃತ ವಿದ್ಯಾರ್ಥಿನಿ ವೈಷ್ಣವಿ
ಆನೆಕಲ್: ಅಪಾರ್ಟ್ಮೆಂಟ್ನ 12ನೇ ಮಹಡಿಯಿಂದ ವಿದ್ಯಾರ್ಥಿನಿ ಬಿದ್ದು ಮೃತಪಟ್ಟಿರುವ ಘಟನೆ ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯ ವೇಣುಗೋಪಾಲ ನಗರದಲ್ಲಿ ನಡೆದಿದೆ. ವೇಣುಗೋಪಾಲ ನಗರದ ನಿತೀಶ್ ಪಾರ್ಕ್ ಅಪಾರ್ಟ್ಮೆಂಟ್ನ 12ನೇ ಮಹಡಿಯಿಂದ 13 ವರ್ಷದ ವೈಷ್ಣವಿ ಬಿದ್ದು ಸಾವನ್ನಪ್ಪಿದ್ದಾಳೆ. ಆತ್ಮಹತ್ಯೆಯೋ ಅಥವಾ ಆಯತಪ್ಪಿ ಬಿದ್ದಳು ಎಂಬುದರ ಬಗ್ಗೆ ಪೊಲೀಸರು ಸದ್ಯ ತನಿಖೆ ನಡೆಸುತ್ತಿದ್ದಾರೆ.
ಮೃತ ದುರ್ದೈವಿ ವೈಷ್ಣವಿ ಉತ್ತರಪ್ರದೇಶ ಮೂಲದ ವೀರೇಂದ್ರಕುಮಾರ್ ಹಾಗೂ ಸುಮನ್ ದಂಪತಿಯ ಪುತ್ರಿ. ಕಳೆದ 20 ವರ್ಷದಿಂದ ಈ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿದೆ. ವೈಷ್ಣವಿ ಖಾಸಗಿ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ರಾತ್ರಿ ಕುಟುಂಬದವರ ಜೊತೆ ಕುಳಿತು ಊಟ ಮಾಡಿದ್ದಳು. ಮನೆಯವರೆಲ್ಲರೂ ಹಾಲ್ನಲ್ಲಿ ಕುಳಿತಿದ್ದರು. ಬಾಲ್ಕನಿಯಲ್ಲಿ ಲಾಕ್ ಮಾಡಿಕೊಂಡು ಆಟವಾಡುತ್ತಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಏನೋ ಬಿದ್ದ ರೀತಿ ಶಬ್ದ ಆದಾಗ ಬಾಲ್ಕನಿ ಬಳಿ ಹೋಗಿ ನೋಡಿದಾಗ ಮಗಳು ಬಿದ್ದಿರುವುದು ಗೊತ್ತಾಗಿದೆ. ಬಾಲ್ಕನಿ ಬಳಿ ಬಂದು ನೋಡಿದಾಗ ವೈಷ್ಣವಿ ಕೆಳಗೆ ಬಿದ್ದಿದ್ದಳು. ತಲೆಗೆ ತೀವ್ರ ಪೆಟ್ಟಾದ ಕಾರಣ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಸದ್ಯ ಈ ಪ್ರಕರಣ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.