ಬೆಂಗಳೂರಿನಲ್ಲಿ ಒಂದೇ ದಿನ 73.4 ಮಿಮೀ ಮಳೆ: ಇನ್ನೂ ಕೆಲ ದಿನ ಮುಂದುವರಿಯಲಿದೆ ಧಾರಾಕಾರ ಮಳೆ | Bengaluru Receives 73 mm rain in 24 hours wettest November more rains predicted


ಬೆಂಗಳೂರಿನಲ್ಲಿ ಒಂದೇ ದಿನ 73.4 ಮಿಮೀ ಮಳೆ: ಇನ್ನೂ ಕೆಲ ದಿನ ಮುಂದುವರಿಯಲಿದೆ ಧಾರಾಕಾರ ಮಳೆ

ಬೆಂಗಳೂರಿನಲ್ಲಿ ಮಳೆಯು ಬಿಡುವು ಕೊಡದೆ ಸುರಿಯುತ್ತಿದೆ.

ಬೆಂಗಳೂರು: ಕಳೆದ 24 ಗಂಟೆಗಳಲ್ಲಿ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ 73.4 ಮಿಮೀ ಮಳೆಯಾಗಿದೆ. ಗುರುವಾರ ಮುಂಜಾನೆ 8.30ರಿಂದ ಶುಕ್ರವಾರ ಬೆಳಿಗ್ಗೆ 8.30ರ ಅವಧಿಯಲ್ಲಿ ಈ ಪ್ರಮಾಣದ ಮಳೆ ದಾಖಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ನವೆಂಬರ್ ತಿಂಗಳಲ್ಲಿ ಇಷ್ಟೊಂದು ಮಳೆ ದಾಖಲಾಗಿರಲಿಲ್ಲ. ನಗರದ ವಿವಿಧೆಡೆ ಮರ ಉರುಳಿದ, ಗೋಡೆ ಕುಸಿತ ಹಾಗೂ ನೀರು ನುಗ್ಗಿದ ಬಗ್ಗೆ ಬಿಬಿಎಂಪಿ ಕಂಟ್ರೋಲ್​ ರೂಂಗೆ ಹಲವು ದೂರುಗಳು ಬಂದಿವೆ. ಬೆಂಗಳೂರಿನ ಪೂರ್ವ ವಲಯದಲ್ಲಿ ಉತ್ತಮ ಮಳೆಯಾಗಿದೆ. ಆರ್​ಟಿ ನಗರ ಮತ್ತು ಟ್ರಿನಿಟಿ ವೃತ್ತದಲ್ಲಿ ಮರಗಳು ಉರುಳಿವೆ. ಲಿಡೊ ಮಾಲ್ ಸಮೀಪ ಕಟ್ಟಡವೊಂದು ಕುಸಿದಿದೆ. ಪಶ್ಚಿಮ ವಲಯದಲ್ಲಿ ಮನೆಗಳಿಗೆ ನೀರು ನುಗ್ಗಿದ ಪ್ರಕರಣಗಳು ಹೆಚ್ಚಾಗಿ ವರದಿಯಾಗಿವೆ. ನಂದಿನಿ ಲೇಔಟ್​ನ ಹೊನ್ನಮ್ಮ ಬಿಲ್ಡಿಂಗ್ ಸಮೀಪ ಮನೆಯೊಂದರ ಗೋಡೆ ಕುಸಿದಿದೆ. ದಕ್ಷಿಣ ಮತ್ತು ರಾಜರಾಜೇಶ್ವರಿ ನಗರ ವಲಯಗಳಲ್ಲಿ ಮಳೆ ಅನಾಹುತಕ್ಕೆ ಸಂಬಂಧಿಸಿದಂತೆ ಯಾವುದೇ ದೂರುಗಳು ದಾಖಲಾಗಿಲ್ಲ.

ದಾಸರಹಳ್ಳಿಯ ಮಲ್ಲಸಂದ್ರ ಕೆರೆ ಕೋಡಿ ಹರಿದಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಮಹದೇವಪುರ ಸುತ್ತಮುತ್ತ ಭಾರಿ ಮಳೆಯಾಗಿದ್ದು ಬಸವನಪುರ ಮೇನ್, ಸೀಗೆಹಳ್ಳಿ ಸರ್ಕಲ್​ನ ಸಾಯಿಬಾಬ ದೇಗುಲ, ವಡ್ಡರಪಾಳ್ಯ, ಟಿಸಿ ಪಾಳ್ಯ ಮುಖ್ಯರಸ್ತೆಯಿಂದ ಅಣ್ಣಯ್ಯಪ್ಪ ವೃತ್ತ, ನ್ಯೂ ಹೊರೈಜಾನ್ ಕಾಲೇಜು ರಸ್ತೆ, ವಿಜ್ಞಾನ ನಗರ, ಕಗ್ಗದಾಸಪುರ, ಅಭ್ಯಾರೆಡ್ಡಿ ಲೇಔಟ್, ಅಪೆಕ್ಸ್ ಆಸ್ಪತ್ರೆ ರಸ್ತೆ, ಅಣ್ಣಸಂದ್ರ ಪಾಳ್ಯ ಮತ್ತು ಬೆಳ್ಳಂದೂರಿನ ರೇನ್​ಗೊ ರೆಸಿಡೆನ್ಸಿಗೆ ನೀರು ನುಗ್ಗಿದೆ. ಯಲಹಂಕ ಮತ್ತು ಬೊಮ್ಮನಹಳ್ಳಿ ವಲಯಗಳಲ್ಲಿ ನೀರು ನುಗ್ಗಿರುವ ಬಗ್ಗೆ ಐದು ದೂರುಗಳು ಬಂದಿವೆ. ಬೆಂಗಳೂರಿನಲ್ಲಿ ಅತಿಹೆಚ್ಚು ಮಳೆ ದಾಖಲಾದ ಪ್ರದೇಶಗಳಿವು. ಹಲಸೂರಿನಲ್ಲಿ ವಸತಿ ಕಟ್ಟಡವೊಂದು ಕುಸಿದಿದೆ. ಕಟ್ಟಡದಲ್ಲಿದ್ದ ನಾಲ್ವರು ಅಪಾಯದಿಂದ ಪಾರಾಗಿದ್ದಾರೆ.

ಹವಾಮಾನ ಇಲಾಖೆಯು ಬೆಂಗಳೂರಿಗೆ ಇಂದು ಯೆಲ್ಲೊ ಅಲರ್ಟ್ ಘೋಷಿಸಿದೆ. ಮುಂದಿನ ಎರಡು ದಿನ ಭಾರಿ ಮಳೆ ಆಗಬಹುದು ಎಂದು ನಿರೀಕ್ಷಿಸಲಾಗಿದೆ. ಕರ್ನಾಟಕದ ಉತ್ತರ ಮತ್ತು ದಕ್ಷಿಣ ಒಳನಾಡಿನ ಹಲವೆಡೆ ಸಿಡಿಲು-ಗುಡುಗು ಸಹಿತ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ತಮಿಳುನಾಡು ಮತ್ತು ಆಂಧ್ರದ ಕರಾವಳಿಯಲ್ಲಿ ಪ್ರಬಲಗಾಳಿ ಬೀಸುತ್ತಿದೆ. ಪುದುಚೇರಿ, ಚೆನ್ನೈ ಪ್ರದೇಶದಲ್ಲಿ ವ್ಯಾಪಕ ಮಳೆ ಸುರಿಯುತ್ತಿದೆ. ಮುಂದಿನ 12 ಗಂಟೆಗಳಲ್ಲಿ ಈ ಪ್ರದೇಶದಲ್ಲಿ ಮಳೆ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರ್ನಾಟಕದಲ್ಲಿ ಬೆಂಗಳೂರು, ಮೈಸೂರು, ಶಿವಮೊಗ್ಗ, ಕೊಡಗು, ಮಲೆನಾಡು ಸೇರಿದಂತೆ 11 ಜಿಲ್ಲೆಗಳಲ್ಲಿ ಇಂದಿನಿಂದ ನವೆಂಬರ್ 23ರವರೆಗೆ ಭಾರೀ (Heavy Rain) ಮಳೆಯಾಗಲಿದ್ದು, ಇಂದು ಆರೆಂಜ್ ಅಲರ್ಟ್​ (Orange Alert) ಘೋಷಿಸಲಾಗಿದೆ. ಭಾರತ ಹವಾಮಾನ ಇಲಾಖೆ (ಐಎಂಡಿ) ಬೆಂಗಳೂರಿನಲ್ಲಿ ಇಂದು ಆರೆಂಜ್ ಅಲರ್ಟ್ ಘೋಷಿಸಿದ್ದು, ನವೆಂಬರ್ 23ರವರೆಗೆ ವ್ಯಾಪಕ ಮಳೆಯಾಗುವ (Karnataka Rain) ಮುನ್ಸೂಚನೆ ನೀಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ರಾಮನಗರ, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಿಗೆ ಹವಾಮಾನ ಇಲಾಖೆ (IMD) ಹಳದಿ ಅಲರ್ಟ್ (Yellow Alert) ಘೋಷಿಸಿದೆ.

ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ನವೆಂಬರ್ ತಿಂಗಳಲ್ಲಿ ಅತಿ ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಕಡಿಮೆ ಒತ್ತಡದ ವಾತಾವರಣದಿಂದ ಮಳೆಯಾಗುತ್ತಿದ್ದು, ಈಗ ಕಡಿಮೆ ಒತ್ತಡ ಉಂಟಾಗಿ ವಾಯುಭಾರ ಕುಸಿತ ಉಂಟಾಗಿದೆ. ಬೆಂಗಳೂರಿನಲ್ಲಿ ಇಂದು ಮೋಡ ಕವಿದ ವಾತಾವರಣ ಮುಂದುವರಿಯಲಿದೆ. ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ರಾಮನಗರ, ತುಮಕೂರು, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಸೇರಿದಂತೆ ಕರ್ನಾಟಕದ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಇಂದು ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿರುವುದರಿಂದ ಹಳದಿ ಅಲರ್ಟ್ ನೀಡಲಾಗಿದೆ.

ಇದನ್ನೂ ಓದಿ: ಮಳೆಗೆ ಧಾರವಾಡದಲ್ಲಿ ಅಪಾರ ಹಾನಿ; ಸಮಸ್ಯೆ ಇದ್ದ ಕಡೆ ಶಾಲೆಗಳಿಗೆ ರಜೆ ಕೊಡುವಂತೆ ಸೂಚಿಸಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ
ಇದನ್ನೂ ಓದಿ: ಗೌರಿಬಿದನೂರು -ನಿರಂತರ ಮಳೆಗೆ ಕುಸಿದ ಮನೆ, ಮುಳಬಾಗಿಲಿನಲ್ಲಿ ಮನೆ ಕುಸಿದು ವ್ಯಕ್ತಿ ಸಾವು, ಗ್ರಾಮ ಬಿಡುತ್ತಿರುವ ಗೌನಿಪಲ್ಲಿ ಜನ

TV9 Kannada


Leave a Reply

Your email address will not be published. Required fields are marked *