ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 3 ಪಟ್ಟು ಹೆಚ್ಚಳ: ಪಾಸಿಟಿವಿಟಿ ಪ್ರಮಾಣ ಶೇ 2.9, ಮಹದೇವಪುರದಲ್ಲೇ ಹೆಚ್ಚು | Bengaluru sees 3 fold rise in Covid cases  positivity rate Mahadevapura Area Increase


ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 3 ಪಟ್ಟು ಹೆಚ್ಚಳ: ಪಾಸಿಟಿವಿಟಿ ಪ್ರಮಾಣ ಶೇ 2.9, ಮಹದೇವಪುರದಲ್ಲೇ ಹೆಚ್ಚು

ಪ್ರಾತಿನಿಧಿಕ ಚಿತ್ರ

ನಗರದ 10 ವಾರ್ಡ್​ಗಳಲ್ಲಿ ಪಾಸಿಟಿವಿಟಿ ಪ್ರಮಾಣವೂ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿದೆ. ಈ ಪೈಕಿ 8 ವಾರ್ಡ್​ಗಳು ಮಹದೇವಪುರ ವ್ಯಾಪ್ತಿಯಲ್ಲಿಯೇ ಇವೆ.

ಬೆಂಗಳೂರು: ನಗರದಲ್ಲಿ ಕಳೆದ 10 ದಿನಗಳಲ್ಲಿ ಕೊವಿಡ್ ಪ್ರಕರಣಗಳು ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿವೆ. 10 ದಿನಗಳ ಹಿಂದೆ ಶೇ 1.1ರಷ್ಟಿದ್ದ ಪಾಸಿಟಿವಿಟಿ ಪ್ರಮಾಣ ಇದೀಗ ಶೇ 2.9ಕ್ಕೆ ಹೆಚ್ಚಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (Bruhat Bengaluru Mahanagara Palike – BBMP) ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ಮೇ 31ರಂದು 178 ಪ್ರಕರಣಗಳು ವರದಿಯಾಗಿದ್ದರೆ, ಜೂನ್ 10ರಂದು ವರದಿಯಾಗಿರುವ ಪ್ರಕರಣಗಳ ಸಂಖ್ಯೆ 494 ದಾಟಿದೆ. ನಗರದ 10 ವಾರ್ಡ್​ಗಳಲ್ಲಿ ಪಾಸಿಟಿವಿಟಿ ಪ್ರಮಾಣವೂ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿದೆ. ಈ ಪೈಕಿ 8 ವಾರ್ಡ್​ಗಳು ಮಹದೇವಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿಯೇ ಇರುವುದು ಗಮನಾರ್ಹ ಅಂಶ. ಇತರ ಎರಡು ವಾರ್ಡ್​ಗಳು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿವೆ.

ಈ ಎಲ್ಲ 10 ವಾರ್ಡ್​ಗಳಲ್ಲಿಯೂ ಜನಸಂದಣಿ ಗಮನಾರ್ಹ ಪ್ರಮಾಣದಲ್ಲಿದೆ. ಬೆಳ್ಳಂದೂರು ವಾರ್ಡ್​ನ ಜನಸಂಖ್ಯೆ 1,30,000 ಇದೆ. ಅದೇ ರೀತಿ ಹಗದೂರು ಮತ್ತು ವರ್ತೂರು ವಾರ್ಡ್​ಗಳ ಜನಸಂಖ್ಯೆ 60,000 ದಾಟಿದೆ. ಜನಸಾಂದ್ರತೆ ಹೆಚ್ಚಾಗಿರುವ ಕಾರಣ ಈ ವಾರ್ಡ್​ಗಳಲ್ಲಿ ಕೊರೊನಾ ಪ್ರಕರಣಗಳೂ ಹೆಚ್ಚಾಗಿವೆ ಎಂದು ಮಹದೇವಪುರದ ಬಿಬಿಎಂಪಿ ಆರೋಗ್ಯ ಅಧಿಕಾರಿ ಡಾ ಆರ್.ಸುರೇಂದ್ರ ಅಭಿಪ್ರಾಯಪಟ್ಟಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಈ ಪ್ರದೇಶದಲ್ಲಿ ಗಮನಾರ್ಹ ಪ್ರಮಾಣದಲ್ಲಿರುವ ವಲಸೆ ಕಾರ್ಮಿಕರು ಮತ್ತು ಕಟ್ಟಡ ಕಾರ್ಮಿಕರು ಸಹ ಕೊರೊನಾ ಸೋಂಕು ಹೆಚ್ಚಳಕ್ಕೆ ಕಾರಣ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ. ಈ ಪ್ರದೇಶದಲ್ಲಿ ಮಾಹಿತಿ ತಂತ್ರಜ್ಞಾನಕ್ಕೆ (Information Technology – IT) ಸಂಬಂಧಿಸಿದ ಕಂಪನಿಗಳ ಕಚೇರಿಗಳು ಸಹ ಗಮಾರ್ಹ ಪ್ರಮಾಣದಲ್ಲಿವೆ. ಸಾಕಷ್ಟು ಜನರು ದೇಶೀಯ ಮತ್ತು ಅಂತರರಾಷ್ಟ್ರೀಯ ಯಾನಗಳನ್ನು ಕೈಗೊಳ್ಳುತ್ತಾರೆ. ಸೋಂಕು ಹೆಚ್ಚಾಗಲು ಈ ಎಲ್ಲ ಅಂಶಗಳೂ ಕಾರಣ ಇರಬಹುದು ಎಂದು ಹೇಳಲಾಗಿದೆ.

ಸೋಂಕು ಬಿಗಡಾಯಿಸಿರುವ ಕ್ಲಸ್ಟರ್​ಗಳು

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಕೊವಿಡ್ ಹೆಚ್ಚಾಗಿ ಕಾಣಿಸಿಕೊಂಡಿರುವ ಕ್ಲಸ್ಟರ್​ಗಳ ಸಂಖ್ಯೆಯು ಕಳೆದ 10 ದಿನಗಳಲ್ಲಿ 5ರಿಂದ 12ಕ್ಕೆ ಹೆಚ್ಚಾಗಿದೆ. ಶುಕ್ರವಾರ ಒಂದೇ ದಿನ ಐದು ಹೊಸ ಕ್ಲಸ್ಟರ್​ಗಳು ವರದಿಯಾಗಿವೆ. 12 ಕ್ಲಸ್ಟರ್​ಗಳ ಪೈಕಿ 11 ಮಹದೇವಪುರ ವಾರ್ಡ್​ನಲ್ಲಿಯೇ ಇವೆ.

ಒಂದು ವ್ಯಕ್ತಿಯಲ್ಲಿ ಕೊವಿಡ್ ಸೋಂಕು ದೃಢಪಟ್ಟ ನಂತರ ಇಡೀ ಕುಟುಂಬದ ಎಲ್ಲರೂ ಪಾಸಿಟಿವ್ ಆಗುತ್ತಿದ್ದಾರೆ. 11 ಕ್ಲಸ್ಟರ್​ಗಳ ಪೈಕಿ 10 ಕ್ಲಸ್ಟರ್​ಗಳು ಅಪಾರ್ಟ್​ಮೆಂಟ್​ಗಳೇ ಆಗಿವೆ. ನಗರದ ವಿವಿಧೆಡೆ ಪರೀಕ್ಷೆಯ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಆಸ್ಪತ್ರೆಗೆ ದಾಖಲಾಗುತ್ತಿರುವವರ ಆರೋಗ್ಯದ ಮೇಲೆಯೂ ನಿಗಾ ಇರಿಸಲಾಗಿದೆ. ಮಹಾದೇವಪುರ ವಾರ್ಡ್​ನಲ್ಲಿ ಈ ಮೊದಲು ಒಂದು ದಿನಕ್ಕೆ 1,400 ಮಂದಿಗೆ ತಪಾಸಣೆ ಮಾಡಲಾಗುತ್ತಿತ್ತು. ಪ್ರಸ್ತುತ ಈ ಪ್ರಮಾಣವನ್ನು 2,000ಕ್ಕೆ ಹೆಚ್ಚಿಸಲಾಗಿದೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published.