ಸಮನ್ವಿ ಅಂತ್ಯಕ್ರಿಯೆ
ಜನವರಿ 13ರಂದು ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಬಾಲನಟಿ, ಅಮೃತಾ ನಾಯ್ಡು ಮಗಳು ಸಮನ್ವಿ ಅಂತ್ಯಕ್ರಿಯೆ ಇಂದು (ಜನವರಿ 14) ಬನಶಂಕರಿ ಚಿತಾಗಾರದಲ್ಲಿ ನೆರವೇರಿದೆ. ಬಣಜಿಗ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿದೆ. ಈ ಮೂಲಕ ಸಮನ್ವಿ ಪಂಚಭೂತಗಳಲ್ಲಿ ಲೀನಳಾಗಿದ್ದಾಳೆ. ಋಷಿ ಕುಮಾರ ಸ್ವಾಮೀಜಿ ಅವರ ನೇತೃತ್ವದಲ್ಲಿ ಅಂತ್ಯಸಂಸ್ಕಾರ ನೆರವೇರಿದೆ. ಕುಟುಂಬದವರು, ಕಿರುತೆರೆ ಸೆಲೆಬ್ರಿಟಿಗಳು ಇದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಕುಟುಂಬದವರು ಹಾಗೂ ಸೆಲೆಬ್ರಿಟಿಗಳ ಆಕ್ರಂದನ ಮುಗಿಲುಮುಟ್ಟಿದೆ.
ಸಮನ್ವಿ ನಿಧನಕ್ಕೆ ಕಿರುತೆರೆ ಲೋಕದ ಅನೇಕರು ಕಂಬನಿ ಮಿಡಿಯುತ್ತಿದ್ದಾರೆ. ಸೃಜನ್ ಲೋಕೇಶ್ ಅವರು ಸೋಶಿಯಲ್ ಮೀಡಿಯಾ ಮೂಲಕ ಸಂತಾಪ ಸೂಚಿಸಿದ್ದಾರೆ. ‘ದೇವರು ನಿಜವಾಗಿಯೂ ದೇವರಾ? ಅಥವಾ ದೇವರು ಇದ್ದಾನಾ? ಇಲ್ಲ, ದೇವರನ್ನ ನಂಬಲೇಬೇಕಾ? ಈ ಪ್ರಶ್ನೆಗಳು ಆಗಾಗ ಮೂಡಿ ಬರುತ್ತಿವೆ. ಇವತ್ತು ಈ ಘಟನೆಯ ನಂತರ ನಿಜವಾಗಲೂ ದೇವರು ಇದ್ದಾನೋ ಇಲ್ಲವೋ ಅನ್ನೋ ಪ್ರಶ್ನೆ ಮನಸ್ಸಿಗೆ ತುಂಬಾ ಗಾಢವಾಗಿ ಕಾಡುತ್ತಿದೆ. ಪುಟ್ಟ ಕಂದ ಸಮನ್ವಿ ಮಿಸ್ ಯೂ. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಸೃಜನ್ ಲೋಕೇಶ್ ಹೇಳಿದ್ದಾರೆ. ಅವರು ಕೂಡ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಇತ್ತೀಚೆಗಷ್ಟೇ ‘ನನ್ನಮ್ಮ ಸೂಪರ್ ಸ್ಟಾರ್’ ರಿಯಾಲಿಟಿ ಶೋ ಆರಂಭಗೊಂಡಿದೆ. ಈ ಕಾರ್ಯಕ್ರಮಕ್ಕೆ 6 ವರ್ಷದ ಸಮನ್ವಿ ಸ್ಪರ್ಧಿಯಾಗಿ ತೆರಳಿದ್ದಳು. ಆಕೆಗೆ ಅನೇಕ ಮಂದಿ ಅಭಿಮಾನಿಗಳಾಗಿದ್ದರು. ಮನರಂಜನಾ ಲೋಕದಲ್ಲಿ ಎತ್ತರಕ್ಕೆ ಬೆಳೆಯಬೇಕಿದ್ದ ಈ ಪುಟ್ಟ ಬಾಲಕಿ ಈಗ ಸಾವಿನ ಮನೆಯ ಹಾದಿ ಹಿಡಿದಿರುವುದು ತೀವ್ರ ನೋವಿನ ಸಂಗತಿ. ಸಮನ್ವಿ ತಾಯಿ ಅಮೃತಾ ನಾಯ್ಡು ಈಗ ನಾಲ್ಕು ತಿಂಗಳ ಗರ್ಭಿಣಿ ಎಂದು ತಿಳಿದು ಬಂದಿದೆ. ಖುಷಿಯ ದಿನಗಳನ್ನು ಎದುರು ನೋಡಬೇಕಿದ್ದ ಅವರ ಬದುಕಿನಲ್ಲಿ ದುರ್ಘಟನೆ ನಡೆದಿದೆ.
ಅಪಘಾತ ನಡೆದಿದ್ದು ಎಲ್ಲಿ?
ಜ.13ರಂದು ಬೆಂಗಳೂರಿನ ಕೋಣನಕುಂಟೆಯ ವಾಜರಹಳ್ಳಿಯಲ್ಲಿ ಸ್ಕೂಟರ್ ಮೇಲೆ ಸಮನ್ವಿ ಹಾಗೂ ಅಮೃತಾ ನಾಯ್ಡು ತೆರಳುತ್ತಿದ್ದರು. ಈ ವೇಳೆ ಸ್ಕೂಟರ್ಗೆ ಲಾರಿ ಬಂದು ಹೊಡೆಯಿತು. ಸ್ಥಳದಲ್ಲೇ ಸಮನ್ವಿ ಮೃತಪಟ್ಟಳು. ಅಮೃತಾ ಅವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಲಾರಿ ಚಾಲಕನನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆ.ಎಸ್. ಲೇಔಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.