ನಾಯಿ ಮೇಲೆ ಕಾರು ಹತ್ತಿಸುತ್ತಿರುವ ದೃಶ್ಯ
ಬೆಂಗಳೂರು: ಬೀದಿ ನಾಯಿ (Dog) ಮೇಲೆ ಕಾರು (Car) ಹತ್ತಿಸಿ ವಿಕೃತಿ ಮೆರೆದ ಘಟನೆ ನಗರದ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಏಪ್ರಿಲ್ 19ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ನಾಯಿ ಮೇಲೆ ಕಾರು ಹತ್ತುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಸ್ತೆ ದಾಟುತ್ತಿದ್ದ ನಾಯಿ ಮೇಲೆ ಕಾರು ಹತ್ತಿಸಿದ ಚಾಲಕ ನಿಲ್ಲಿಸದೆ ಹೋಗಿದ್ದಾನೆ. ಅಪಘಾತಕ್ಕೊಳಗಾದ ನಾಯಿ ನಡು ರಸ್ತೆಯಲ್ಲೇ ವಿಲವಿಲ ಒದ್ದಾಡಿ ಮೃತಪಟ್ಟಿದೆ. ಘಟನೆ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿ ಕಾರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿದ ದೂರುದಾರ ರಾಮಚಂದ್ರ ಭಟ್ಟ, 19ರಂದು ಬೆಳಗ್ಗೆ 9 ಗಂಟೆಗೆ ಸುಮಾರಿಗೆ ಘಟನೆ ನಡೆದಿದೆ. ಆದರೆ ನಂಗೆ ಅವತ್ತು ಸಂಜೆ ವಿಷಯ ತಿಳಿಯಿತು. ಘಟನೆ ನಡೆದ ಸ್ಥಳದಲ್ಲಿದ್ದ ಮಾರ್ಟ್ಗೆ ಬಂದಿದ್ದೆ. ಕಾರು 20-25 kmps ವೇಗದಲ್ಲಷ್ಟೇ ಇತ್ತು. ಆ ಕಾರು ಚಾಲಕ ಮನಸ್ಸು ಮಾಡಿದರೆ ನಾಯಿನ ಬದುಕು ಉಳಿಸಬಹುದಿತ್ತು. ಆದರೆ ಬೇಕು ಬೇಕಂತಲೇ ನಾಯಿಯನ್ನು ಸಾಯಿಸಿದ್ದಾರೆ. ಜ್ಞಾನ ಭಾರತಿ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ದೂರು ತಗೊಂಡಿರಲಿಲ್ಲ. ಆಮೇಲೆ ಕೆಲ ಜನರ ಸಹಾಯದಿಂದ ದೂರು ದಾಖಲಿಸಿದ್ದಾರೆ. ಇದೇ ರೀತಿ ಬೆಂಗಳೂರಿನಲ್ಲಿ ಹಲವು ಘಟನೆಗಳು ನಡೆಯುತ್ತಿವೆ ಎಂದು ಹೇಳಿದರು.