ಒಂದ್ಕಡೆ ದಿನ ಬಿಟ್ಟು ದಿನ ನಿರಂತರವಾಗಿ ಸುರಿಯುತ್ತಿರೋ ಮಳೆ. ಮತ್ತೊಂದ್ಕಡೆ ಮಳೆಯಿಂದಾಗಿ ಕೆರೆಯಂತಾದ ರಸ್ತೆ ಗುಂಡಿಗಳು. ದಿನೇ ಒಂದಿಲ್ಲೊಂದು ಕಟ್ಟಡಗಳ ಕುಸಿತ. ಬೆಂಗಳೂರಿನಲ್ಲಿ ಸುರಿಯುತ್ತಿರೋ ವರುಣಾರ್ಭಟಕ್ಕೆ ಸಿಲಿಕಾನ್ ಸಿಟಿಯಲ್ಲಾದ ಅವಾಂತರಗಳು.
ಕಟ್ಟಡದ ಮಾಲೀಕರ ನಿರ್ಲಕ್ಷ್ಯ, ಬಿಬಿಎಂಪಿಯ ಬೇಜವ್ದಾರಿಗೆ 50 ವರ್ಷ ಹಳೆಯ ಕಟ್ಟಡ ಸಂಪೂರ್ಣ ನೆಲಸಮವಾಗ್ಬಿಟ್ಟಿದೆ. ಹಲಸೂರು ಸ್ಟ್ರೀಟ್ ಬಳಿಯ ಲಿಡೋ ಮಾಲ್ ಬಳಿ ಅವಘಡ ಸಂಭವಿಸಿದ್ದು, ಮುಖ್ಯರಸ್ತೆಯಲ್ಲೇ ಇದ್ದ ಒಂದು ಅಂತಸ್ತಿನ ಮನೆ ನಿರಂತರವಾಗಿ ಸುರಿಯುತ್ತಿರೋ ಮಳೆಯಿಂದಾಗಿ ಕುಸಿತವಾಗಿದೆ. ಕಟ್ಟಡ ಬೀಳುವ ಮುನ್ಸೂಚನೆಗೆ ನಿನ್ನೆ ರಾತ್ರಿಯೇ ನಿವಾಸಿಗಳು ಬೇರೆಡೆ ಸ್ಥಳಾಂತರಗೊಂಡಿದ್ರಿಂದ, ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.
ಇವತ್ತು ಮುಂಜಾನೆ 5 ಗಂಟೆ ಸುಮಾರಿಗೆ ಕಟ್ಟಡ ಕುಸಿತದಿದ್ದು, ಮೂರು ಬೈಕ್ಗಳು ಸಂಪೂರ್ಣ ಜಖಂಗೊಂಡಿವೆ. ಕಷ್ಟಪಟ್ಟು ದುಡಿದ ಹಣದಲ್ಲಿ ಕಟ್ಟಿದ್ದ ಮನೆ ಕಳೆದುಕೊಂಡು ಮಾಲೀಕ ಕಣ್ಣೀರಿಟ್ಟರು. ಇನ್ನು, ಬಿಟ್ಟು ಬಿಡದೇ ಸುರಿಯುತ್ತಿರೋ ಭಾರೀ ಮಳೆಗೆ ಹಂತ ಹಂತವಾಗಿ ಕಟ್ಟಡ ಬಿರುಕು ಬಿಡ್ತಿದ್ರೂ, ಅದೇ ಮನೆಯಲ್ಲೇ ಕುಟುಂಬ ವಾಸವಿತ್ತು. ಕೊನೆಗೂ ಮನೆ ಕುಸಿದಿದ್ದು, ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಮಣ್ಣುಪಾಲಾಗಿವೆ. ಸದ್ಯ, ಸ್ಥಳದಲ್ಲಿ ಯಾರು ಓಡಾಡದಂತೆ ನಿಷೇಧಿಸಲಾಗಿದೆ.
ಮತ್ತೊಂದ್ಕಡೆ ಭಾರೀ ಮಳೆಗೆ ಅಮ್ಮಾನಿ ಕೆರೆ ಕೋಡಿ ಒಡೆದ ಹಿನ್ನೆಲೆ ಯಲಹಂಕ ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್ಗೆ ಜಲ ದಿಗ್ಭಂದನವಾಗ್ಬಿಟ್ಟಿದೆ. ಅಪಾರ್ಟ್ಮೆಂಟ್ನಲ್ಲಿದ್ದ ಕಾರು, ಬೈಕ್, ಸೈಕಲ್ ನೀರಿನಲ್ಲಿ ಜಲಾವೃತವಾಗಿದೆ. 3 ಸಾವಿರಕ್ಕೂ ಹೆಚ್ಚು ನಿವಾಸಿಗಳು ವಾಸವಿರೋ ಅಪಾರ್ಟ್ಮೆಂಟ್ನಲ್ಲಿ ಆತಂಕ ಮನೆ ಮಾಡಿದೆ.
ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಕೊಡಿಗೆಹಳ್ಳಿ ಅಂಡರ್‌ಪಾಸ್ ಭರ್ತಿಯಾಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ಸುಮಾರು 2 ಅಡಿಗೂ ಹೆಚ್ಚು ನೀರು ಅಂಡರ್‌ಪಾಸ್‌ನಲ್ಲೇ ನಿಂತಿದ್ದು, ಅಂಡರ್ಪಾಸ್ಗಳು ಬ್ಲಾಕ್ ಆಗಿವೆ. ಒಂದ್ಕಡೆ ಭಾರೀ ಮಳೆ, ಇನ್ನೊಂದ್ಕಡೆ ಗುಂಡಿಗಳ ಭಯ ಶುರುವಾಗಿದೆ. ಭಾರೀ ಮಳೆಯಿಂದಾಗಿ ಸುಂಕದಕಟ್ಟೆಯಲ್ಲಿ ರಸ್ತೆ ಗುಂಡಿಗಳೆಲ್ಲಾ ಕೆರೆಯಂತಾಗಿವೆ. ನೀರು ಹೋಗೋದಕ್ಕೆ ಜಾಗವಿಲ್ಲದೇ ವಾಹನ ಸವಾರರು ಪರದಾಡುವಂತಾಗಿದೆ.
ಇತ್ತ, ರಾಜ್ಯದಲ್ಲಾಗ್ತಿರೋ ಮಳೆ ಹಾನಿ, ಪರಿಹಾರದ ಬಗ್ಗೆ ನಡೆಯಬೇಕಿದ್ದ ಸಿಎಂ ಬೊಮ್ಮಾಯಿ ನೇತೃತ್ವದ ಸಭೆಯೂ ಮುಂದೂಡಲ್ಪಟ್ಟಿದೆ. ಮತ್ತೊಂದ್ಕಡೆ, ನಗರದಲ್ಲಿ ಬಿಟ್ಟು ಬಿಡದೇ ಮಳೆ ಸುರಿದು ಇಷ್ಟೆಲ್ಲಾ ಅವಾಂತವಾದ್ರೂ, ಬೆಂಗಳೂರು ಉಸ್ತುವಾರಿಯೇ ಇಲ್ಲದಿರೋರು ಸರ್ಕಾರದ ಬೇಜವಾಬ್ದಾರಿಯನ್ನ ಎದ್ದು ತೋರಿಸುತ್ತದೆ. ಸಿಎಂ ಬೊಮ್ಮಾಯಿಯೇ ನೇರವಾಗಿ ಬೆಂಗಳೂರು ನಗರದ ಉಸ್ತುವಾರಿ ಹೊಣೆ ಹೊತ್ತಿದ್ದು, ಅವರಿಗೆ ಜನರ ಬವಣೆ ಕೇಳದೇ ಇರೋದು ವಿಪರ್ಯಾಸ. ಬೆಂಗಳೂರಿನ ಖೋಟಾದಡಿಯಲ್ಲಿ 7 ಮಂದಿ ಸಚಿವರಿದ್ದು, ಆ ಪೈಕಿ ಯಾರಿಗಾದ್ರು ಒಬ್ಬರಿಗೆ ಬೆಂಗಳೂರು ಉಸ್ತುವಾರಿಯನ್ನು ನೀಡಿದ್ರೆ, ಬೆಂಗಳೂರು ಈ ಸ್ಥಿತಿಗೆ ಬರುತ್ತಿರಲಿಲ್ಲವೆನೋ..
The post ಬೆಂಗಳೂರಿನಲ್ಲಿ ಭಾರೀ ಮಳೆ; ಮನೆಗಳಿಗೆ ನುಗ್ಗುತ್ತಿರುವ ನೀರು; ಜೀವಭಯದಲ್ಲಿ ಸ್ಥಳೀಯರು appeared first on News First Kannada.