ಬೆಂಗಳೂರು: ಕಸ್ತೂರಿ ನಿವಾಸದ ರಾಜಕುಮಾರ ನಮ್ಮನ್ನಗಲಿ 10 ದಿನಗಳು ಕಳೆದಿವೆ. ಆದರೆ ಅವರ ಕೋಟ್ಯಾಂತರ ಅಭಿಮಾನಿಗಳ ಅಂತರಾಳದಲ್ಲಿ ಪುನೀತ್ ನೆನಪು ಇನ್ನೂ ಹಸಿಯಾಗಿದೆ. ಮನ ಮೆಚ್ಚಿದ ನಾಯಕನಿಗೆ ಸಾವಿರ ಪುತ್ಥಳಿ ಸ್ಥಾಪಿಸಿ ಗೌರವ ಸೂಚಿಸಲು ಅಭಿಮಾನಿಗಳು ಸಿದ್ಧತೆ ನಡೆಸುತ್ತಿದ್ದಾರೆ. ಆದರೆ ಅಪ್ಪು ಅಭಿಮಾನಿಗಳ ಅಭಿಮಾನ ಪ್ರದರ್ಶನಕ್ಕೆ ಕಾನೂನು ಸಮ್ಮತಿ ಸೂಚಿಸುತ್ತಾ ಅನ್ನೋ ಪ್ರಶ್ನೆ ಎದುರಾಗಿದೆ.
ಚಂದನವನದ ಬೆಟ್ಟದ ಹೂ ಬಾಡಿ ಇಂದಿಗೆ 10 ದಿನ. ಮಂದಹಾಸದ ಮಾಲೀಕ ಇಹಲೋಕದಿಂದ ಮಾಯವಾದ್ರೂ ಕೋಟ್ಯಾಂತರ ಅಭಿಮಾನಿಗಳ ಮನದಲ್ಲಿ ಮಾತ್ರ ಶಾಶ್ವತವಾಗಿ ನೆಲಸಿದ್ದಾರೆ. ನಗುಮೊಗದ ಒಡೆಯನಿಗೆ ಮನದಾಳದ ಗೌರವ ಸಮರ್ಪಣೆಗೆ ಅಭಿಮಾನಿಗಳು ನಿರ್ಧರಿಸಿದ್ದು, ಬೆಂಗಳೂರಿನಾದ್ಯಂತ ಸಾವಿರ ಪುತ್ಥಳಿ ಸ್ಥಾಪಿಸಲು ಸಿದ್ಧರಾಗಿದ್ದಾರೆ. ಆದ್ರೆ ಅಭಿಮಾನ ಪ್ರದರ್ಶನದ ಭರದಲ್ಲಿ ಕಾನೂನು ಮರೆಯದಿರಿ ಅನ್ನೋದು ವಕೀಲರ ಮನವಿ.
ಸಾರ್ವಜನಿಕವಾಗಿ ಯಾರದೇ ಪುತ್ಥಳಿ ಸ್ಥಾಪಿಸಬೇಕಾದ್ರೂ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತೆ. ಹಾಗಾದ್ರೆ ಪುತ್ಥಳಿ ಸ್ಥಾಪನೆಗೆ ಪಾಲಿಸಬೇಕಾದ ನಿಯಮಗಳೇನು ಅನ್ನೋದನ್ನ ನೋಡೋದಾದ್ರೆ..
- ಪುತ್ಥಳಿ ಸ್ಥಾಪನೆಗೆ ಬೇಕು ಅನುಮತಿ
- ಪುನೀತ್ ಪುತ್ಥಳಿ ಸ್ಥಾಪನೆಗೆ ಅಭಿಮಾನಿಗಳಿಂದ ಸಿದ್ಧತೆ
- ಸಾರ್ವಜನಿಕ ಸ್ಥಳದಲ್ಲಿ ಪುತ್ಥಳಿ ಸ್ಥಾಪನೆಗೆ ಅನುಮತಿ ಕಡ್ಡಾಯ
- ಸ್ಥಳೀಯ ಪಾಲಿಕೆ, ಪಂಚಾಯ್ತಿಯ ಅನುಮತಿ ಪಡೆಯಬೇಕು
- ಅನುಮತಿ ಪಡೆಯದೇ ನಿರ್ಮಿಸಿದ ಪುತ್ಥಳಿಗಳು ಅನಧಿಕೃತ
- ಅನಧಿಕೃತ ಪುತ್ಥಳಿ ತೆರವಿಗೆ ನ್ಯಾಯಾಲಯಗಳ ಸೂಚನೆ
ಕರುನಾಡಿದ ಕೋಟ್ಯಾಂತರ ಜನರ ಮನಗೆದ್ದಿರುವ ಸ್ಯಾಂಡಲ್ವುಡ್ನ ಪವರ್ಸ್ಟಾರ್ಗೆ ಅಭಿಮಾನಿಗಳು ಗೌರವ ಸೂಚಿಸಲು ಹೊರಟಿರುವುದು ಖುಷಿಯ ಸಂಗತಿಯೇ. ಆದ್ರೆ ಪುತ್ಥಳಿ ಸ್ಥಾಪನೆ ವಿಚಾರದಲ್ಲಿ ಕೊಂಚ ಮುತುವರ್ಜಿ ವಹಿಸಬೇಕಿದೆ. ಕಾನೂನಾತ್ಮಕವಾಗಿ ಜಾಗಗಳನ್ನು ಗುರುತಿಸಿ, ಪಾಲಿಕೆ ಹಾಗು ಪಂಚಾಯ್ತಿಯ ಅನುಮತಿ ಪಡೆದು ಪುತ್ಥಳಿ ಸ್ಥಾಪಿಸಿದ್ರೆ, ಸಾರ್ಥಕ ಬದುಕು ನಡೆಸಿದ ಅಪ್ಪುವಿಗೆ ನಿಜವಾದ ಗೌರವ ಸಲ್ಲಿಸದಂತಾಗಲಿದೆ.
ವಿಶೇಷ ವರದಿ: ಅಭಿಷೇಕ್ ಬಿವಿ, ನ್ಯೂಸ್‌ಫಸ್ಟ್