ಬೆಂಗಳೂರು: ಬಡವರಿಗೆ ಉಚಿತ ಸೇವೆ ನೀಡುವ ಉದ್ದೇಶದಿಂದ ‘ಎಲೆಕ್ಟ್ರಾನಿಕ್ ಸಿಟಿ ಇಂಡಸ್ಟ್ರೀಸ್ ಅಸೋಸಿಯೇಷನ್’ (ಎಲ್ಸಿಯಾ) ಟ್ರಸ್ಟ್ ನಗರದ ಕಾವೇರಿ ಆಸ್ಪತ್ರೆಗೆ ಉಚಿತವಾಗಿ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ ಆಂಬ್ಯುಲೆನ್ಸ್ ನ್ನು ಹಸ್ತಾಂತರಿಸಿದ್ದಾರೆ.
ಹೆವ್ಲೆಟ್ ಪ್ಯಾಕರ್ಡ್ (ಇಂಡಿಯಾ) ಸಾಫ್ಟ್‌ವೇರ್ ಆಪರೇಷನ್ ಸಂಸ್ಥೆಯು (ಎಪಿಇ) ಈ ಆಂಬುಲೆನ್ಸ್‌ನನ್ನು ಎಲ್ಸಿಯಾಗೆ ಕೊಡುಗೆಯಾಗಿ ನೀಡಿತ್ತು. ಇದರ ಪ್ರಯೋಜನ ಬಡ ಜನರಿಗೆ ಸಿಗಬೇಕೆಂಬ ಉದ್ದೇಶದಿಂದ ಎಲ್ಸಿಯಾ ಟ್ರಸ್ಟ್ ಈ ಆಂಬ್ಯುಲೆನ್ಸ್ನ್ನು ಇಂದು ಕಾವೇರಿ ಆಸ್ಪತ್ರೆಗೆ ಹಸ್ತಾಂತರಿಸಿದೆ. ಐಟಿ-ಬಿಟಿ ಇಲಾಖೆ ಅಪರಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣ ರೆಡ್ಡಿ ನೂತನ ಆಂಬುಲೆನ್ಸ್‌ಗೆ ಚಾಲನೆ ನೀಡಿದರು.
ಈ ಕುರಿತು ಮಾತನಾಡಿದ ಕಾವೇರಿ ಆಸ್ಪತ್ರೆ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವಿಜಯ ಭಾಸ್ಕರನ್, ನಗರದಲ್ಲಿ ಎಷ್ಟೇ ಆಂಬ್ಯುಲೆನ್ಸ್ ಗಳಿದ್ದರು ಬೇಡಿಕೆ ಹೆಚ್ಚುತ್ತಲೇ ಇದೆ. ಕೆಲವೊಮ್ಮೆ ಆಂಬ್ಯುಲೆನ್ಸ್ ತಡವಾಗಿ ಬರುವುದರಿಂದ ರೋಗಿಯು ತಡವಾಗಿ ಆಸ್ಪತ್ರೆ ಸೇರುವ ಪರಿಸ್ಥಿತಿ ಇದೆ. ಕೆಲವೊಮ್ಮೆ ಪ್ರಾಣಕ್ಕೂ ಕುತ್ತಾಗುವ ಪರಿಸ್ಥಿತಿಯನ್ನು ನೋಡಿದ್ದೇವೆ. ಹೀಗಾಗಿ ಆಂಬ್ಯುಲೆನ್ಸ್ ಸಂಖ್ಯೆ ಹೆಚ್ಚಳವಾಗುವುದರಿಂದ ಶೀಘ್ರವಾಗಿ ಜನರಿಗೆ ಆರೋಗ್ಯ ಸೇವೆ ಲಭ್ಯವಾಗಲಿದೆ ಎಂದರು.
ಆಂಬ್ಯುಲೆನ್ಸ್ನಲ್ಲಿ ಏನೇನಿದೆ?
ಈ ಆಂಬ್ಯುಲೆನ್ಸ್ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದೆ. ಇದರಲ್ಲಿ ಕಾರ್ಡಿಯಾಕ್ ಅಟ್ಯಾಕ್ ಆದವರನ್ನು ಸೂಕ್ತ ಚಿಕಿತ್ಸೆ ನೀಡಿ ಕರೆದುಕೊಂಡು ಹೋಗುವ ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಗೆ, ಆಕ್ಸಿಜನ್ ಸಿಲಿಂಡರ್ ಸೇರಿದಂತೆ ಮೊಬೈಲ್ ಐಸಿಯೂ ಮಾದರಿಯ ಎಲ್ಲಾ ರೀತಿ ತಂತ್ರಜ್ಞಾವನ್ನು ಸಹ ಇದರಲ್ಲಿ ಅಳವಡಿಸಿರುವುದು ವಿಶೇಷ.