ಬೆಂಗಳೂರಿನ ಕ್ಲಾರೆನ್ಸ್ ಹೈಸ್ಕೂಲ್ನಲ್ಲಿ ಬೈಬಲ್ ಕಡ್ಡಾಯ; ಈ ಬಗ್ಗೆ ಪರಿಶೀಲಿಸಿ ಕ್ರಮ ಜರುಗಿಸುವುದಾಗಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟನೆ | Education Minister bc Nagesh says to take action against clarence high school for imposing bible bengaluru


ಬೆಂಗಳೂರಿನ ಕ್ಲಾರೆನ್ಸ್ ಹೈಸ್ಕೂಲ್ನಲ್ಲಿ ಬೈಬಲ್ ಕಡ್ಡಾಯ; ಈ ಬಗ್ಗೆ ಪರಿಶೀಲಿಸಿ ಕ್ರಮ ಜರುಗಿಸುವುದಾಗಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟನೆ

ಶಿಕ್ಷಣ ಸಚಿವ ಬಿ ಸಿ ನಾಗೇಶ್ (ಸಂಗ್ರಹ ಚಿತ್ರ)

ಹಿಜಾಬ್, ಹಲಾಲ್ ಕಟ್, ಅಜಾನ್ ವಿವಾದದ ಬೆನ್ನಲ್ಲೇ ಇದೀಗ ಮತ್ತೊಂದು ವಿವಾದ ಶುರುವಾಗಿದೆ. ಬೆಂಗಳೂರಿನ ಕ್ಲಾರೆನ್ಸ್ ಶಾಲೆಯಲ್ಲಿ ಕ್ರೈಸ್ತ ಧರ್ಮದ ಹೇರಿಕೆ ಆರೋಪ ಕೇಳಿ ಬಂದಿದ್ದು ಶಾಲಾ ಆಡಳಿತ ಮಂಡಳಿ ನಿರ್ಧಾರದ ವಿರುದ್ದ ಹಿಂದೂ ಜನಜಾಗೃತಿ ಸಮಿತಿ ಸಿಡಿದೆದ್ದಿದೆ. ಶಾಲೆ ವಿರುದ್ಧ ದೂರು ಕೊಡಲು ಹಿಂದೂಪರ ಸಂಘಟನೆ ಮುಂದಾಗಿದೆ. ಶಿಕ್ಷಣ ಸಚಿವ ಬಿ.ಸಿ.ನಾಗೇಶ್ಗೆ ದೂರು ನೀಡಲಿದ್ದಾರೆ.

ಹಿಂದೂಪರ ಸಂಘಟನೆಗಳು ಈಗಾಗಲೇ ದೂರವಾಣಿ ಮೂಲಕ ಶಿಕ್ಷಣ ಮಂತ್ರಿಗೆ ಈ ಬಗ್ಗೆ ಮಾಹಿತಿ ರವಾನಿಸಿದ್ದಾರೆ. ರಿಚರ್ಡ್ಟೌನ್ನಲ್ಲಿರುವ ಕ್ಲಾರೆನ್ಸ್ ಹೈಸ್ಕೂಲ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಕ್ಲಾರೆನ್ಸ್ ಹೈಸ್ಕೂಲ್ಗೆ ಇಂದು ಬಿಇಒ, ಅಧಿಕಾರಿಗಳು ಭೇಟಿ ನೀಡುವ ಸಾಧ್ಯತೆ ಇದೆ. ಅಧಿಕಾರಿಗಳು ಬೈಬಲ್ ಕಡ್ಡಾಯಗೊಳಿಸಿರುವ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ. ಪಠ್ಯ ಕ್ರಮ ಪರಿಶೀಲಿಸಿ ಬೈಬಲ್ ಕಡ್ಡಾಯಗೊಳಿಸಿದ್ದರೆ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಬಹುತೇಕ ಕ್ರೈಸ್ತ ಶಿಕ್ಷಣ ಸಂಸ್ಥೆಗಳು ಇದೇ ರೀತಿ ಅನುಸರಿಸುತ್ತಿವೆಯಂತೆ ಎಂದು ಕ್ರೈಸ್ತ ಶಿಕ್ಷಣ ಸಂಸ್ಥೆಗಳ ವಿರುದ್ಧ ಹಿಂದೂ ಪರ ಸಂಘಟನೆಗಳು ಆರೋಪ ಮಾಡಿವೆ. ದೂರು ಬಂದ ಶಾಲೆಗಳ ವಿರುದ್ಧ ಕ್ರಮಕ್ಕೆ ಶಿಕ್ಷಣ ಇಲಾಖೆ ಸಜ್ಜಾಗಿದೆ. ಯಾವುದೇ ಧರ್ಮದ ಬಗ್ಗೆ ಪಾಠ ಪ್ರವಚನ ಮಾಡುವಂತಿಲ್ಲ. ಪಠ್ಯದಲ್ಲಿ ಧರ್ಮದ ಒಂದು ಭಾಗವನ್ನು ಇಡಬಹುದು ಅಷ್ಟೆ. ಆದರೆ ಬೈಬಲ್ ಓದುವುದನ್ನು ಕಡ್ಡಾಯಗೊಳಿಸಿದರೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಹಾಗೂ ಮಾಹಿತಿ ಪಡೆದು ಕ್ರಮ ಜರುಗಿಸುವುದಾಗಿ ಬಿ.ಸಿ.ನಾಗೇಶ್ ಸ್ಪಷ್ಟನೆ ನೀಡಿದ್ದಾರೆ.

ಕ್ಲಾರೆನ್ಸ್ ಹೈಸ್ಕೂಲ್ ವಿರುದ್ಧ ಹಿಂದೂಪರ ಸಂಘಟನೆ ಆಕ್ರೋಶ!
ಈಗಾಗ್ಲೇ ರಾಜ್ಯ ಸಾಲು ಸಾಲು ವಿವಾದಗಳಿಗೆ ಸಾಕ್ಷಿಯಾಗಿದೆ.. ಇದರ ನಡುವೆ ಕ್ರೈಸ್ತ ಶಾಲೆಯಲ್ಲಿ ಕ್ರೈಸ್ತರಲ್ಲದೆ ಇತರೆ ಧರ್ಮದ ಮಕ್ಕಳಿಗೂ ಒತ್ತಾಯ ಪೂರ್ವಕವಾಗಿ ಬೈಬಲ್ ಓದಿಸಲಾಗುತ್ತಿದೆ ಎಂದು ಹಿಂದೂ ಜನ ಜಾಗೃತಿ ವೇದಿಕೆ ಮುಖಂಡರು ಆರೋಪಿಸಿದ್ದಾರೆ. ನಗರದ ಪಾಟರಿ ರಸ್ತೆಯಲ್ಲಿರುವ ಕ್ಲಾರೆನ್ಸ್ ಹೈ ಸ್ಕೂಲ್ನ ಪಠ್ಯಕ್ರಮದಲ್ಲಿ ಬೈಬಲ್ ಕಡ್ಡಾಯ ಮಾಡಲಾಗಿದ್ದು, ಹಿಂದೂ ಮಕ್ಕಳಿಗೆ ಒತ್ತಾಯದಿಂದ ಬೈಬಲ್ ಓದುವಂತೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಈ ಶಾಲೆಯ ವೆಬ್ ಸೈನ್ ಬ್ರೌಶರ್ನಲ್ಲೂ ಈ ಬಗ್ಗೆ ಉಲ್ಲೇಖವಿದ್ದು, ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಲು ಕ್ಲಾರೆನ್ಸ್ ಹೈಸ್ಕೂಲ್ ಆಡಳಿತ ಮಂಡಳಿ ನಿರಾಕರಿಸಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ತನಿಖೆ ನಡೆಸಿದ ಬಳಿಕವೇ ನಿಜಾಂಶ ಹೊರಬೀಳಲಿದೆ.

TV9 Kannada


Leave a Reply

Your email address will not be published.