ಪ್ರಾಯಶಃ 80 ದಶಕದ ಆರಂಭದಲ್ಲಿರಬಹುದು, ಐಪಿಎಸ್ ಅಧಿಕಾರಿ ಮತ್ತು ಸಾಹಿತಿಯೂ ಆಗಿದ್ದ ವಿಜಯ ಸಾಸನೂರ್ ಅವರು ಬರೆದ ‘ವಿಗ್ರಹ ಚೋರರು’ ಕಾದಂಬರಿಯನ್ನಾಧರಿಸಿ, ‘ಮಹಾ ಪ್ರಚಂಡರು’ ಹೆಸರಿನ ಸಿನಿಮಾ ಬಂದಿತ್ತು. ಸಾಹಸ ಸಿಂಹ ವಿಷ್ಣುವರ್ಧನ, ಮಂಡ್ಯದ ಗಂಡು ಅಂಬರೀಷ್ ಮತ್ತು ಟೈಗರ್ ಪ್ರಭಾಕರ್ ಮೊದಲಾದವರು ಮುಖ್ಯ ಭೂಮಿಕೆಯಲ್ಲಿದ್ದ ಚಿತ್ರವನ್ನು ಆಗಿನ ಹೆಸರಾಂತ ನಿರ್ದೇಶಕ ಜೋ ಸೈಮನ್ ದಿಗ್ದರ್ಶಿಸಿದ್ದರು. ವಿಷಾದದ ಸಂಗತಿಯೆಂದರೆ, ಇವರಲ್ಲಿ ಯಾರೂ ಈಗ ನಮ್ಮೊಂದಿಗಿಲ್ಲ. ಈ ಸಿನಿಮಾವನ್ನು ನೆನಪಿಸಿಕೊಳ್ಳುವ ಹಿಂದೆ ಕಾರಣವಿದೆ. ಈ ವಿಡಿಯೋ ನಲ್ಲಿ ನಮಗೊಬ್ಬ ವಿಗ್ರಹ ಚೋರ ಮತ್ತು ಅವನ ಖದೀಮತನ ಕಾಣಿಸುತ್ತದೆ.
ಬೆಂಗಳೂರಲ್ಲಿ ವಿಗ್ರಹ ಚೋರರು ಇದ್ದಾರೆ ಅನ್ನೋದನ್ನು ವಿಡಿಯೋ ಸಾಬೀತು ಮಾಡುತ್ತದೆ. ಇವನು ನಗರದ ಯಡಿಯೂರ ಕೆರೆ ಮುಂಭಾಗದಲ್ಲಿದ್ದ ಶನಿದೇವರ ವಿಗ್ರಹವನ್ನು ಕದ್ದುಕೊಂಡು ಹೋಗುವುದು ಸಿಸಿಟಿವಿ ಕೆಮೆರಾನಲ್ಲಿ ಸೆರೆಯಾಗಿದೆ. ಕಳ್ಳ ತನ್ನ ಕಸುಬಿನಲ್ಲಿ ಪಳಗಿದ್ದಾನೆ ಮಾರಾಯ್ರೇ. ನೀವೇ ನೋಡಿ, ಬಹಳ ನಿರಾತಂಕ ಭಾವದಿಂದ ಅವನು ಕೆಲಸ ಪೂರೈಸುತ್ತಾನೆ.
ವಿಗ್ರಹ ಕದಿಯಲು ರಾತ್ರಿ ಸಮಯ ಅವನು ತಾನೇ ಅಟೋ ಓಡಿಸಿಕೊಂಡು ಬರುತ್ತಾನೆ. ವಾಹನವನ್ನು ಪಕ್ಕಕ್ಕೆ ನಿಲ್ಲಿಸಿ ವಿಗ್ರಹವಿರುವ ಕಡೆ ಹೋಗುತ್ತಾನೆ. ಅವನ ನಡಿಗೆಯಲ್ಲಿ ಗಡಿಬಿಡಿ, ಆತಂಕ ಇಲ್ಲ. ಈ ಪ್ರದೇಶ ಸಂಪೂರ್ಣ ನಿರ್ಜನವಾಗಿದೆ. ಅವನು ಇಲ್ಲಿಗೆ ಬಂದಾಗಿನಿಂದ ವಿಗ್ರಹ ಕದ್ದುಕೊಂಡು ಹೋಗುವವರೆಗೆ ಕೇವಲ ಒಬ್ಬ ವ್ಯಕ್ತಿ ಮಾತ್ರ ಸ್ಕೂಟರ್ನಲ್ಲಿ ಅಲ್ಲಿಂದ ಹಾದು ಹೋಗುತ್ತಾರೆ. ಅಂದರೆ, ಅವನು ಸರಿಯಾಗಿ ಹೋಮ್ ವರ್ಕ್ ಮಾಡಿಕೊಂಡೇ ಕಳುವಿಗೆ ಬಂದಿದ್ದಾನೆ.
ಪೊಲೀಸರಿಗೆ ಬೇಕಾದಷ್ಟು ಸುಳಿವುಗಳು ಸಿಕ್ಕಿವೆ. ಎಷ್ಟು ಬೇಗ ವಿಗ್ರಹ ಚೋರನನ್ನು ಹಿಡಿಯುತ್ತಾರೋ ನೋಡಬೇಕು.