ಸಾಂಕೇತಿಕ ಚಿತ್ರ
ಬೆಂಗಳೂರು: ಕೆಎಸ್ಆರ್‌ಟಿಸಿ ಬಸ್ ಹರಿದು ಮಹಿಳೆ ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಂಗಳೂರಿನ ಪ್ಯಾಲೇಸ್ ರಸ್ತೆಯಲ್ಲಿ ಸಂಭವಿಸಿದೆ. ಬಸ್ ಹರಿದು ಲಕ್ಷ್ಮೀದೇವಿ(50) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಹೋದರನ ಜೊತೆ ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ದುರ್ಘಟನೆ ನಡೆದಿದೆ. ಹಿಂಬದಿಯಿಂದ ಬಸ್ ಡಿಕ್ಕಿಯಾಗಿ ತಲೆ ಮೇಲೆ ಹರಿದಿದೆ. ಸದಾಶಿವನಗರ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಪುಟ್ಟಪರ್ತಿಯಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಚಕ್ರದ ಅಡಿಗೆ ಸಿಲುಕಿ ಲಕ್ಷ್ಮೀದೇವಿ ಸಾವನ್ನಪ್ಪಿದ್ದಾರೆ. ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣವಾಗಿದ್ದು ಸ್ಥಳಕ್ಕೆ ಸದಾಶಿವನಗರ ಟ್ರಾಫಿಕ್ ಪೊಲೀಸರು ಭೇಟಿ ನೀಡಿದ್ದಾರೆ. ಚಿಂತಾಮಣಿ ನಿವಾಸಿಯಾದ ಮೃತ ಲಕ್ಷ್ಮಿ, ಆರೋಗ್ಯ ತಪಾಸಣೆಗೆಂದು ಬೆಂಗಳೂರಿಗೆ ಬಂದಿದ್ರು. ಕೊಡಿಗೆಹಳ್ಳಿ ನಿವಾಸದ ಸಹೋದರ ರಘುನಾಥ್ ಮನೆಯಿಂದ ಮಲ್ಲಿಗೆ ಆಸ್ಪತ್ರೆಗೆ ತೆರಳುತಿದ್ದಾಗ ಹಿಂದಿನಿಂದ ಬಂದ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಕೆಳಗೆ ಬಿದ್ದ ಲಕ್ಷ್ಮಿದೇವಿ ತಲೆ ಮೇಲೆ ಬಸ್ ಚಕ್ರ ಹರಿದಿದೆ. ಸ್ಥಳದಲ್ಲೇ ಲಕ್ಷ್ಮಿದೇವಿ ಮೃತಪಟ್ಟಿದ್ದಾರೆ.