ಬೆಂಗಳೂರಿನ 2 ರಸ್ತೆಗಳಿಗೆ ಪುನೀತ್ ರಾಜ​ಕುಮಾರ್, ವಿರಾಟ್ ಕೊಹ್ಲಿ ಹೆಸರು ನಾಮಕರಣಕ್ಕೆ ಮನವಿ – Fans Demand to Name Road in Shanti Nagar Wilson Garden on Puneeth Rajkumar and Virat Kohli


ಶಾಂತಿನಗರ ಬಸ್ ಟರ್ಮಿನಲ್ ಎದುರಿನ ಪುನೀತ್ ರಾಜಕುಮಾರ್ ಅವರ ಹೆಸರು ಹಾಗೂ ವಿಲ್ಸನ್​ ಗಾರ್ಡನ್​ನ 8ನೇ ಅಡ್ಡರಸ್ತೆಗೆ ವಿರಾಟ್ ಕೊಹ್ಲಿ ಹೆಸರು ಇಡಬೇಕು ಎಂದು ಬಿಬಿಎಂಪಿ ಆಡಳಿತಾಧಿಕಾರಿ, ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಪತ್ರ ಬರೆಯಲಾಗಿದೆ.

ಬೆಂಗಳೂರಿನ 2 ರಸ್ತೆಗಳಿಗೆ ಪುನೀತ್ ರಾಜ​ಕುಮಾರ್, ವಿರಾಟ್ ಕೊಹ್ಲಿ ಹೆಸರು ನಾಮಕರಣಕ್ಕೆ ಮನವಿ

ವಿರಾಟ್ ಕೊಹ್ಲಿ (ಎಡಚಿತ್ರ) ಮತ್ತು ಪುನೀತ್ ರಾಜಕುಮಾರ್ (ಸಂಗ್ರಹ ಚಿತ್ರ)

ಬೆಂಗಳೂರು: ನಗರದ ಎರಡು ಪ್ರಮುಖ ರಸ್ತೆಗಳಿಗೆ ಯುವ ಸಾಧಕರ ಹೆಸರು ನಾಮಕರಣ ಮಾಡಬೇಕು ಎಂಬ ಮನವಿ ದಿನದಿಂದ ದಿನಕ್ಕೆ ಒತ್ತಾಯದ ರೂಪ ಪಡೆದುಕೊಳ್ಳುತ್ತಿದೆ. ಕನ್ನಡ ನಾಡು ಸದಾ ಸ್ಮರಿಸುವ ದಿವಂಗತ ನಟ ಪುನೀತ್ ರಾಜಕುಮಾರ್ (Puneeth Rajkumar) ಹಾಗೂ ವಿರಾಟ್ ಕೊಹ್ಲಿ (Virat Kohli) ಅವರ ಹೆಸರನ್ನು ಎರಡು ಪ್ರತ್ಯೇಕ ರಸ್ತೆಗಳಿಗೆ ಇರಿಸುವ ಮೂಲಕ ಅಭಿಮಾನಿಗಳ ಆಶಯ ಈಡೇರಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಶಾಂತಿನಗರ ಬಸ್ ಟರ್ಮಿನಲ್ ಎದುರಿನ ಪುನೀತ್ ರಾಜಕುಮಾರ್ ಅವರ ಹೆಸರು ಹಾಗೂ ವಿಲ್ಸನ್​ ಗಾರ್ಡನ್​ನ 8ನೇ ಅಡ್ಡರಸ್ತೆಗೆ ವಿರಾಟ್ ಕೊಹ್ಲಿ ಹೆಸರು ಇಡಬೇಕು ಎಂದು ಬಿಬಿಎಂಪಿ ಆಡಳಿತಾಧಿಕಾರಿ, ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ಈ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತರು ಸರ್ಕಾರದ ಜೊತೆಗೆ ಚರ್ಚೆ ನಡೆಸಲು ಮುಂದಾಗಿದ್ದಾರೆ. ವಿಲ್ಸನ್ ಗಾರ್ಡನ್​ನ 8ನೇ ಅಡ್ಡರಸ್ತೆ ಹಾಗೂ ಶಾಂತಿನಗರ ಬಸ್ ನಿಲ್ದಾಣದ ಮುಂಭಾಗದ ರಸ್ತೆಗಳಿಗೆ ಈವರೆಗೆ ಯಾವುದೇ ಅಧಿಕೃತ ಹೆಸರು ಇರಿಸಿಲ್ಲ.

ಕರ್ನಾಟಕದ ವಿವಿಧೆಡೆ ಹಲವು ರಸ್ತೆಗಳಿಗೆ ಪುನೀತ್ ಹೆಸರು

ಕನ್ನಡಿಗರ ನೆಚ್ಚಿನ ನಟ ಪುನೀತ್ ರಾಜಕುಮಾರ್ ಹೆಸರನ್ನು ರಾಜ್ಯದ ವಿವಿಧ ಊರುಗಳಲ್ಲಿ ಈಗಾಗಲೇ ರಸ್ತೆ, ವೃತ್ತಗಳಿಗೆ ಇರಿಸಲಾಗಿದೆ. ಬೆಂಗಳೂರಿನ ಕೆಂಗೇರಿ ಸಮೀಪದ ಜ್ಞಾನಭಾರತಿ 1ನೇ ಬ್ಲಾಕ್​ನಲ್ಲಿ ಸಂತೋಷ್ ಎಂಬ ಅಭಿಮಾನಿ ‘ಅಪ್ಪು ಗುಡಿ’ ಹೆಸರಿನಲ್ಲಿ ಸ್ವಂತ ಖರ್ಚಿನಲ್ಲಿ ಸ್ಮಾರಕ ನಿರ್ಮಿಸಿ, ಪ್ರತಿಮೆ ಸ್ಥಾಪಿಸಿದ್ದಾರೆ. ಕೆಂಗೇರಿಯಿಂದ ಬನ್ನೇರುಘಟ್ಟ ಸಂಪರ್ಕಿಸುವ ಸಿಗ್ನಲ್ ಬಳಿಯ ರಸ್ತೆಗೆ ‘ಪುನೀತ್ ರಾಜಕುಮಾರ್ ರಸ್ತೆ’ ಎಂದು ಸರ್ಕಾರವೇ ಅಧಿಕೃತವಾಗಿ ನಾಮಕರಣ ಮಾಡಿದೆ.

ಬೆಳಗಾವಿ ತಾಲ್ಲೂಕಿನ ಮರಿಕಟ್ಟೆ ಗ್ರಾಮದಲ್ಲಿ ಪುನೀತ್ ರಾಜಕುಮಾರ್ ಹೆಸರನ್ನು ಗಲ್ಲಿಯೊಂದಕ್ಕೆ ಇರಿಸಿ ಅಭಿಮಾನ ಮೆರೆಯಲಾಗಿದೆ. ಕೊಪ್ಪಳದ ಸಂತೆ ಮೈದಾನಕ್ಕೆ ‘ಅಪ್ಪು ಸಂತೆ ಮಾರುಕಟ್ಟೆ’ ಎಂದು ನಾಮಕರಣ ಮಾಡಲಾಗಿದೆ. ಮಂಗಳೂರು, ಚಿಕ್ಕಬಳ್ಳಾಪುರ, ಶಿವಮೊಗ್ಗ, ಭದ್ರಾವತಿ ನಗರಗಳಲ್ಲಿಯೂ ಪುನೀತ್ ರಾಜಕುಮಾರ್ ಅವರಿಗೆ ಅಭಿಮಾನಿಗಳು ಗೌರವ ಸಲ್ಲಿಸಿವೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.