ಬೆಂಗಳೂರು: ರಾಜಧಾನಿಯಲ್ಲಿ ಮತ್ತೆ ದುಷ್ಕರ್ಮಿಗಳ ಪುಂಡಾಟ ಶುರುವಾಗಿದ್ದು, ಮಧ್ಯರಾತ್ರಿ ಒಬ್ಬರೇ ಓಡಾಟ ಮಾಡುವ ಮುನ್ನ ಜನರು ಎಚ್ಚರ ವಹಿಸಿರುವ ಅಗತ್ಯವಿದೆ. ಏಕೆಂದರೆ ಫುಡ್ ಡೆಲಿವರಿ ಕೊಡಲು ಹೋಗ್ತಿದ್ದ ಯುವಕನಿಗೆ ಲಾಂಗ್, ಮಚ್ಚು ತೋರಿಸಿ ರಾಬರಿ ಮಾಡಿರೋ ಘಟನೆ ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೈಕ್ನಲ್ಲಿ ಫುಡ್ ಡೆಲಿವರಿ ಕೊಡಲು ಹೋಗ್ತಿದ್ದ ರಾಜು ಎಂಬ ಯುವಕನ ಮೇಲೆ ದುಷ್ಕರ್ಮಿಗಳು ಅಟ್ಯಾಕ್ ಮಾಡಿದ್ದು, ನಡುರಾತ್ರಿ ರಸ್ತೆ ಮಧ್ಯೆ ಮಾರಕಾಸ್ತ್ರ ತೋರಿಸಿ ಬೆದರಿಕೆ ಹಾಕಿದ್ದಾರೆ. ಕುಟುಂಬದ ಪೋಷಣೆಗಾಗಿ ಮಧ್ಯ ರಾತ್ರಿಯಾದರೂ ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದ ರಾಜು, ದುಷ್ಕರ್ಮಿಗಳ ಬಳಿ ಬೈಕ್ ತೆಗೆದು ಹೋಗದಂತೆ ಬೇಡಿಕೊಂಡಿದ್ದಾರೆ. ಆದರೂ ಬಿಡದ ಆರೋಪಿಗಳು ರಾಜು ಬಳಿ ಇದ್ದ ಮೊಬೈಲ್, ಹಣ ಸೇರಿದಂತೆ ಬೈಕ್ ಸಮೇತ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.
ಕೆಜಿ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ 12 ಗಂಟೆ ವೇಳೆಗೆ ಘಟನೆ ನಡೆದಿದ್ದು, ಈ ಕುರಿತಂತೆ ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ದರೋಡೆಯ ದೃಶ್ಯಗಳನ್ನು ಸಾರ್ವಜನಿಕರೊಬ್ಬರು ತಮ್ಮ ಮಹಡಿಯ ಮೇಲಿಂದ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.