ಬೆಂಗಳೂರು: 28 ಮನೆ, 5 ಕಾರು, ಚಿನ್ನ, ಬೆಳ್ಳಿ; ಎಸಿಬಿ ದಾಳಿ ವೇಳೆ ವಾಸುದೇವ್ ಮನೆಯಲ್ಲಿ ಪತ್ತೆಯಾದ ಆಸ್ತಿ ವಿವರ ಇದು | ACB Raid Bengaluru Vasudev Rao assets details Accident Death Crime News Karnataka Police


ಬೆಂಗಳೂರು: 28 ಮನೆ, 5 ಕಾರು, ಚಿನ್ನ, ಬೆಳ್ಳಿ; ಎಸಿಬಿ ದಾಳಿ ವೇಳೆ ವಾಸುದೇವ್ ಮನೆಯಲ್ಲಿ ಪತ್ತೆಯಾದ ಆಸ್ತಿ ವಿವರ ಇದು

ಎಸಿಬಿ (ಸಾಂದರ್ಭಿಕ ಚಿತ್ರ)

ಬೆಂಗಳೂರು: ಇಲ್ಲಿನ ಗ್ರಾಮೀಣ ನಿರ್ಮಿತಿ ಕೇಂದ್ರದ ಮಾಜಿ ನಿರ್ದೇಶಕ ಆರ್.ಎನ್.ವಾಸುದೇವ್ ಮನೆ ಮೇಲೆ ಎಸಿಬಿ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಹೆಚ್ಚಿನ ಮಾಹಿತಿ ಲಭ್ಯವಾಗಿದೆ. ಆದಾಯಕ್ಕಿಂತ ಶೇ.1408ರಷ್ಟು ಆಸ್ತಿ ಗಳಿಸಿರುವ ವಾಸುದೇವ್, ತನ್ನ, ಕುಟುಂಬಸ್ಥರ ಹೆಸರಿನಲ್ಲಿ ಆಸ್ತಿ ಗಳಿಸಿರುವ ಬಗ್ಗೆ ತಿಳಿದುಬಂದಿದೆ. ಬಾಡಿಗೆಗೆ ನೀಡುವ ಉದ್ದೇಶದಿಂದ 5 ಕಡೆ ಮನೆಗಳ ನಿರ್ಮಾಣ ಮಾಡಿದ್ದರು. ವಾಸುದೇವ್​ ಕುಟುಂಬ ಸದಸ್ಯರ ಹೆಸರಲ್ಲಿ 28 ಮನೆಗಳು ಪತ್ತೆ ಆಗಿದೆ.

ಕೆಂಗೇರಿಯ ಶಾಂತಿ ವಿಲಾಸ ಲೇಔಟ್​ನ ಚರ್ಚ್ ಬಳಿ 1 ಮನೆ, ಮಲ್ಲೇಶ್ವರಂನ 18ನೇ ಕ್ರಾಸ್​ನಲ್ಲಿ ಹೆಂಡತಿ ಹೆಸರಿನಲ್ಲಿ 1 ಮನೆ, ಕೆಂಗೇರಿ ಉಪನಗರದ 3ನೇ ಮುಖ್ಯರಸ್ತೆಯಲ್ಲಿ ಒಂದು ಮನೆ, ಸೋಂಪುರ ಗ್ರಾಮದಲ್ಲಿ ಪುತ್ರನ ಹೆಸರಿನಲ್ಲಿ ಮನೆ ನಿರ್ಮಾಣ ಮಾಡಲಾಗಿದೆ. ಮಾಕಳಿ ಗ್ರಾಮದಲ್ಲಿ 2 ಎಕರೆ 8 ಗುಂಟೆ ಜಮೀನು, 4 ಸೈಟ್​, ಮಾಕಳಿಕುಪ್ಪೆ ಗ್ರಾಮದಲ್ಲಿ 1 ಎಕರೆ 38 ಗುಂಟೆ ಜಮೀನು ಪತ್ತೆ ಆಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ಹೊಸಕೆರೆಹಳ್ಳಿ ಬ್ಯಾರಮೌಂಟ್​ ಅಪಾರ್ಟ್​ಮೆಂಟ್​ನಲ್ಲಿ ಫ್ಲ್ಯಾಟ್​ ಹೊಂದಿರುವುದು ಪತ್ತೆ ಆಗಿದೆ.

ಅರ್ಕಾವತಿ ಲೇಔಟ್​ನ 7ನೇ ಬ್ಲಾಕ್​ನಲ್ಲಿ 3 ಬಿಡಿಎ ನಿವೇಶನ, ಯಲಹಂಕ ಉಪನಗರದ 1 & 2ನೇ ಹಂತದಲ್ಲಿ HIG ಸೈಟ್​, ಕೆಂಗೇರಿ ಉಪನಗರದ 1ನೇ ಹಂತದಲ್ಲಿ ನಿವೇಶನ ಹೊಂದಿದ್ದಾರೆ. ಜ್ಞಾನಭಾರತಿಯ ನಾಗದೇವನಹಳ್ಳಿಯಲ್ಲಿ ಬಿಡಿಎ ನಿವೇಶನ, ವಿಶ್ವೇಶ್ವರಯ್ಯ ಲೇಔಟ್​ನಲ್ಲಿ ವಾಸುದೇವ್​ರ 2 ನಿವೇಶನ, ಹೆಸರಘಟ್ಟ, ಕೆಂಗೇರಿ ಬಳಿಯ ಸೂಲಿಕೆರೆಯಲ್ಲಿ ನಿವೇಶನ ಪತ್ತೆಯಾಗಿದೆ.

ಬೆಂಜ್​, ಸ್ಕೋಡಾ, ವೋಲ್ವೋ, ಟಾಟಾ ಕಂಪನಿಯ 5 ಕಾರು, 925.69 ಗ್ರಾಂ ಚಿನ್ನಾಭರಣ, 9 ಕೆಜಿ ಬೆಳ್ಳಿ ವಸ್ತುಗಳು ಪತ್ತೆ ಆಗಿವೆ. 17.27 ಲಕ್ಷ ನಗದು, ಅಕೌಂಟ್​ನಲ್ಲಿ 1.31 ಕೋಟಿ ಹಣ ಲಭಿಸಿದೆ. ಎಸಿಬಿ ದಾಳಿ ವೇಳೆ ವಾಸುದೇವ್ ಬಳಿ ಪತ್ತೆಯಾದ ಆಸ್ತಿ ವಿವರ ಹೀಗಿದೆ.

ರಾಮನಗರ: ಹಣದ ವಿಚಾರವಾಗಿ ಗಲಾಟೆ ವೇಳೆ ಚಾಕುವಿನಿಂದ ಇರಿದು ಹತ್ಯೆ
ಹಣದ ವಿಚಾರವಾಗಿ ಗಲಾಟೆ ವೇಳೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ರಾಮನಗರದ ವಿವೇಕಾನಂದನಗರದಲ್ಲಿ ನಡೆದಿದೆ. ಹರೀಶ್ (30) ಎಂಬಾತನನ್ನು ಕೊಲೆ ಮಾಡಲಾಗಿದೆ. ಮೈಸೂರು ಮೂಲದ ಪ್ರಕಾಶ್​ನಿಂದ ವಿಜಿ ಎಂಬಾತ ಹಣ ಪಡೆದಿದ್ದ. ವಿಜಿ, ಹರೀಶ್ ಸ್ನೇಹಿತ ಪ್ರಕಾಶ್​ನಿಂದ 18 ಲಕ್ಷ ಹಣ ಪಡೆದಿದ್ದ. ಹಣ ಕೇಳಲು ವಿಜಿ ಮನೆ ಬಳಿಗೆ ಹರೀಶ್ ತೆರಳಿದ್ದ ವೇಳೆ ಜಗಳ ಆಗಿದೆ. ಈ ವೇಳೆ ವಿಜಿ ಸಹೋದರ ದೀಪು ಹರೀಶ್​ ಜತೆ ವಾಗ್ವಾದಕ್ಕೆ ಇಳಿದಿದ್ದ. ಹಾಗೂ ಹರೀಶ್​ಗೆ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದ. ಆರೋಪಿ ದೀಪುನನ್ನು ಐಜೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಬಳ್ಳಾರಿ: ನಗರದ ATMನಲ್ಲಿ ಸೆಕ್ಯೂರಿಟಿಗಾರ್ಡ್‌ ಕೊಲೆ
ಬಳ್ಳಾರಿ ನಗರದ ATMನಲ್ಲಿ ಸೆಕ್ಯೂರಿಟಿಗಾರ್ಡ್‌ ಕೊಲೆ ಕೇಸ್‌ ಸಂಬಂಧಿಸಿ ಛತ್ತೀಸ್‌ಗಢ ಮೂಲದ ಆಜಾದ್ ಸಿಂಗ್‌, ಅಂಗದ್ ಸಿಂಗ್‌, ಜಗತ್ ಸಿಂಗ್‌ನನ್ನು ಪೊಲೀಸರ ವಿಶೇಷ ತಂಡ ಬಂಧಿಸಿದೆ. ಬಳ್ಳಾರಿ ತಾಲೂಕಿನ ಕಾರೇಕಲ್‌ನಲ್ಲಿ ಆರೋಪಿಗಳ ಬಂಧನ ಮಾಡಲಾಗಿದೆ. ನವೆಂಬರ್ 23ರಂದು ಬಸವರಾಜ ನಾಯ್ಕ್(43) ಕೊಲೆ ಆಗಿತ್ತು. ಎಟಿಎಂನಲ್ಲಿ ಹಣ ದೋಚಲು ಬಂದಿದ್ದಾಗ ಕೊಲೆಗೈದಿದ್ದರು. ಕಾರೇಕಲ್‌ ಬಳಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡ್ತಿದ್ದ ಆರೋಪಿಗಳು, ಹಣದ ಆಸೆಗಾಗಿ ATMನಲ್ಲಿ ದರೋಡೆಗೆ ಯತ್ನಿಸಿದ್ದರು ಎಂದು ತಿಳಿದುಬಂದಿದೆ. ಬ್ರೂಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಘಟನೆಗೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಪೊಲೀಸರಿಗೆ 10 ಸಾವಿರ ಬಹುಮಾನ ಘೋಷಿಸಲಾಗಿದೆ.

ಗದಗ: ಹುಡುಗಿ ವಿಚಾರಕ್ಕೆ 2 ಗುಂಪುಗಳ ನಡುವೆ ಹೊಡೆದಾಟ
ಹುಡುಗಿ ವಿಚಾರಕ್ಕೆ 2 ಗುಂಪುಗಳ ನಡುವೆ ಹೊಡೆದಾಟ ನಡೆದ ಘಟನೆ ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಸಂಭವಿಸಿದೆ. ಹೊಡೆದಾಟದಲ್ಲಿ ಮಲ್ಲಿಕಾರ್ಜುನ ಹಿರೇಮಠ ಹಾಗೂ ಅಜಯ್ ಅಣ್ಣಿಗೇರಿ, ಸತೀಶ್ ಉಳ್ಳಾಗಡ್ಡಿಗೆ ಗಾಯವಾಗಿದೆ. ಓರ್ವ ಗಾಯಾಳು ವ್ಯಕ್ತಿಯನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇಬ್ಬರಿಗೆ ನರಗುಂದ ಸರ್ಕಾರಿ ‌ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಮಂಡ್ಯ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೃದ್ಧೆ ಚಿನ್ನಾಭರಣ ಕಸಿದು ಪರಾರಿ
ಕಳ್ಳರು ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೃದ್ಧೆ ಚಿನ್ನಾಭರಣ ಕಸಿದು ಪರಾರಿ ಆದ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮಂಚನಹಳ್ಳಿ ಬಳಿ ನಡೆದಿದೆ. ವೃದ್ಧೆ ಮಹದೇವಮ್ಮನ ಬಾಯಿ ಮುಚ್ಚಿ ಮಾಂಗಲ್ಯ ಸರ, ಕಿವಿ ಓಲೆ, ಮೂಗುತಿಯನ್ನೂ ಬಿಡದೆ ದುಷ್ಕರ್ಮಿಗಳು ಕಿತ್ತುಕೊಂಡು ಹೋಗಿದ್ದಾರೆ. ಹೊಲಕ್ಕೆ ಬೈಕ್​ನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳಿಂದ ಕೃತ್ಯ ನಡೆದಿದೆ. ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಪೊಲೀಸರನ್ನು ಕಂಡು ಬೈಕ್ ನಿಲ್ಲಿಸುವಾಗ ಬಿದ್ದ ಸವಾರ, ಟೈರ್ ಬ್ಲಾಸ್ಟ್ ಆಗಿ ಲಾರಿ ಪಲ್ಟಿ
ಸಂಚಾರಿ ಪೊಲೀಸರ ತಪಾಸಣೆ ವೇಳೆ ಬಿದ್ದು ಸವಾರನಿಗೆ ಗಾಯವಾದ ಘಟನೆ ಬೆಂಗಳೂರಿನ ವಿಜಯನಗರದ ಮಾಳಗಾಳದಲ್ಲಿ ನಡೆದಿದೆ. ಕುಡಿದ ಅಮಲಿನಲ್ಲಿ ಪೊಲೀಸರನ್ನ ಕಂಡು ಬೈಕ್ ನಿಲ್ಲಿಸುವಾಗ ಬಿದ್ದು ಸವಾರನಿಗೆ ಗಾಯ ಆಗಿದೆ. ಗಾಯಾಳು ಯುವಕನನ್ನ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ದುಗನೂರು ಕ್ರಾಸ್ ಟೈರ್ ಬ್ಲಾಸ್ಟ್ ಆಗಿ ಲಾರಿ ಪಲ್ಟಿ ಆದ ಘಟನೆ ರಾಯಚೂರು ತಾಲೂಕಿನ ದುಗನೂರು ಕ್ರಾಸ್ ಬಳಿ ಸಂಭವಿಸಿದೆ. ಲಾರಿ ಪಲ್ಟಿಯಾಗಿದ್ದರಿಂದ ಭತ್ತದ ಚೀಲಗಳು ರಸ್ತೆಪಾಲು ಆಗಿವೆ. ಇಡಪನೂರು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಬೆಂಗಳೂರು: ಕೆಐಎಬಿ ರಸ್ತೆಯ ಫ್ಲೈಓವರ್​ನಲ್ಲಿ 2 ಕಾರುಗಳ ನಡುವೆ ಡಿಕ್ಕಿ
ಕೆಐಎಬಿ ರಸ್ತೆಯ ಫ್ಲೈಓವರ್​ನಲ್ಲಿ 2 ಕಾರುಗಳ ನಡುವೆ ಡಿಕ್ಕಿ ಆದ ಘಟನೆ ಸಂಭವಿಸಿದೆ. ಬೆಂಗಳೂರಿನ ಯಲಹಂಕದ ಬಿಎಸ್​ಎಫ್​ ಎದುರು ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದವರಿಗೆ ಗಂಭೀರ ಗಾಯವಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬೆಂಗಳೂರಿನಿಂದ ಏರ್​ಪೋರ್ಟ್​ ಕಡೆ ತೆರಳ್ತಿದ್ದ ಲ್ಯಾನ್ಸರ್​ ಕಾರು, ಡಿವೈಡರ್​ ದಾಟಿ ಎದುರಿಗೆ ಬರುತ್ತಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಆಗಿದೆ. ಬೆಂಗಳೂರು ಕಡೆಗೆ ಬರುತ್ತಿದ್ದ ವೋಕ್ಸ್ ವ್ಯಾಗನ್ ಕಾರಿಗೆ ಡಿಕ್ಕಿ ಆಗಿದೆ. ಸ್ಥಳಕ್ಕೆ ಯಲಹಂಕ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಯಲಹಂಕ ಸಂಚಾರಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: 25 ವರ್ಷಗಳಿಂದ ಗೃಹ ಬಂಧನ; ಮಗನ ಚಿಕಿತ್ಸೆಗೆ ಸಹಾಯ ಮಾಡುವಂತೆ ಕುಟುಂಬಸ್ಥರಿಂದ ಮನವಿ

ಇದನ್ನೂ ಓದಿ: ಬೆಂಗಳೂರು: ಜಾಗದ ವಿಚಾರಕ್ಕೆ ಅಕ್ಕನ ಕೊಲೆಗೆ ಸುಪಾರಿ ನೀಡಿದ್ದ ತಮ್ಮ! 7 ತಿಂಗಳ ಹಿಂದೆ ನಡೆದ ಕೊಲೆಯ ರಹಸ್ಯವನ್ನು ಖಾಕಿ ಭೇದಿಸಿದ್ದೇಗೆ?

TV9 Kannada


Leave a Reply

Your email address will not be published. Required fields are marked *