ಬೆಂಳೂರಿನಲ್ಲಿ ಮಳೆ ಅವಾಂತರ; ಅಪಾರ್ಟ್​ಮೆಂಟ್​ಗಳಿಗೆ ನುಗ್ಗಿದ ನೀರು | Heavy rain in Bengaluru and Water penetrated the apartments


ಬೆಂಳೂರಿನಲ್ಲಿ ಮಳೆ ಅವಾಂತರ; ಅಪಾರ್ಟ್​ಮೆಂಟ್​ಗಳಿಗೆ ನುಗ್ಗಿದ ನೀರು

ಅಪಾರ್ಟ್​ಮೆಂಟ್​ಗೆ ನುಗ್ಗಿದ ನೀರು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆ ಮುಂದುವರೆದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಯಲಹಂಕದಲ್ಲಿ ಪೊಲೀಸ್ ಠಾಣೆ ಬಳಿಯ ಮುಖ್ಯ ರಸ್ತೆಗಳು ಜಲಾವೃತವಾಗಿವೆ. ಪರಿಣಾಮ ಜಲಾವೃತವಾದ ರಸ್ತೆಯಲ್ಲೇ ಹಲವು ವಾಹನಗಳು ಕೆಟ್ಟು ನಿಂತಿವೆ. ಮಳೆಯಿಂದಾಗಿ ಸುಮಾರು 25ಕ್ಕೂ ಹೆಚ್ಚು ವಾಹನಗಳಿಗೆ ಹಾನಿಯಾಗಿವೆ. ಇನ್ನು ವಿದ್ಯಾರಣ್ಯಪುರದ ವಿಎಸ್ ಲೇಔಟ್​ನಲ್ಲಿ ಮನೆಗೆ ಮಳೆ ನೀರು ನುಗ್ಗಿ ವೃದ್ಧೆ ಪರದಾಡುತ್ತಿದ್ದಾರೆ. ಹಾಸಿಗೆ, ಬಟ್ಟೆ ಸೇರಿದಂತೆ ಎಲ್ಲಾ ವಸ್ತುಗಳು ನೀರುಪಾಲಾಗಿದ್ದು, ಮನೆಯಿಂದ ನೀರು ಹೊರಹಾಕಲು ವೃದ್ಧೆ ಪರದಾಡುತ್ತಿದ್ದಾರೆ.

ರಾತ್ರಿ ಸುರಿದ ಮಳೆಗೆ ಬೆಂಗಳೂರು ಚಿಕ್ಕಬಳ್ಳಾಪುರ ಮುಖ್ಯ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಅರ್ಧ ಕಿಲೋಮೀಟರ್ ನಷ್ಟು ದೂರ ರಸ್ತೆ ಹೊಳೆಯಂತಾಗಿದೆ. ರಸ್ತೆಯ ಹಿಂಭಾಗದಲ್ಲಿರುವ ಕೆರೆ ನೀರು ರಸ್ತೆಗೆ ಬಂದಿದೆ. ಹೀಗಾಗಿ ರಸ್ತೆಯಲ್ಲಿ ಹಲವಾರು ವಾಹನಗಳು, ಪೆಟ್ರೋಲ್ ಬಂಕ್, ಅಂಗಡಿ, ಶೋ ರೂಮ್ ಜಲಾವೃತವಾಗಿವೆ.

ಇನ್ನು ಯಲಹಂಕದ ಅಮಾನಿ ಕೆರೆ ಕೋಡಿ ಬಿದ್ದು ಅವಾಂತರ ಸೃಷ್ಟಿಯಾಗಿದೆ. ಕೆರೆಯ ನೀರು ಮತ್ತೆ ಅಪಾರ್ಟ್​ಮೆಂಟ್​ಗೆ ನುಗ್ಗಿದೆ. ಕೇಂದ್ರೀಯ ವಿಹಾರ ಅಪಾರ್ಟ್​ಮೆಂಟ್​ಗೆ ನೀರು ನುಗ್ಗಿದೆ. ನವೆಂಬರ್ 18ರಂದು ಅಪಾರ್ಟ್​ಮೆಂಟ್​ಗೆ ನುಗ್ಗಿದ್ದ ನೀರನ್ನು 2 ದಿನ ಹರಸಾಹಸಪಟ್ಟು ಹೊರಗೆ ಹಾಕಲಾಗಿತ್ತು. ಇದೀಗ ರಾತ್ರಿ ಸುರಿದ ಮಳೆಗೆ ಮತ್ತೆ ನೀರು ನುಗ್ಗಿದೆ. ಅಪಾರ್ಟ್​ಮೆಂಟ್​ನ 8 ಬ್ಲಾಕ್​ಗಳಿಗೆ ನೀರು ನುಗ್ಗಿದೆ. 8 ಬ್ಲಾಕ್​ಗಳ ಬೇಸ್ಮೆಂಟ್​ನಲ್ಲಿ 3 ಅಡಿ ನೀರು ಸಂಗ್ರಹವಾಗಿದ್ದು, ಅಪಾರ್ಟ್​ಮೆಂಟ್​ಗೆ ವಿದ್ಯುತ್ ಸರಬರಾಜು ಸ್ಥಗಿತವಾಗಿದೆ. ನೀರಿನ ಜೊತೆಯಲ್ಲಿ ಹಾವು, ಚೇಳುಗಳು ಮನೆಗೆ ನುಗ್ಗಿದ್ದರಿಂದ ನಿವಾಸಿಗಳು ಆತಂಕದಲ್ಲಿದ್ದಾರೆ.

ಬೆಂಗಳೂರಿನ ಅಲ್ಲಾಳಸಂದ್ರದ ಕೆಲವು ಪ್ರದೇಶಗಳು ಜಲಾವೃತವಾಗಿವೆ. ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ವಸ್ತು ನೀರುಪಾಲಾಗಿವೆ. ಅಕ್ಕಿ, ಬೇಳೆ, ಟಿವಿ, ಫ್ರಿಡ್ಜ್ ಸೇರಿ ಹಲವು ವಸ್ತುಗಳು ನೀರುಪಾಲಾಗಿವೆ. ಮಳೆ ಅವಾಂತರದಿಂದ ನಿವಾಸಿಗಳು ರಾತ್ರಿಯಿಡಿ ನಡುರಸ್ತೆಯಲ್ಲಿ ಕಳೆದಿದ್ದಾರೆ.

ನಗರದ ಕೋಗಿಲು ಕ್ರಾಸ್ ಬಳಿ ರಸ್ತೆ ಜಲಾವೃತವಾಗಿದ್ದು, ಕೋಗಿಲು ಕ್ರಾಸ್​ನ 3 ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಏರ್​ಪೋರ್ಟ್​, ಕೋಗಿಲು, ಯಲಹಂಕ ರಸ್ತೆ ಜಾಮ್ ಆಗಿತ್ತು. ಕೆಲಸ ಕಾರ್ಯಗಳಿಗೆ ಹೋಗುವುದಕ್ಕೆ ಜನರು ಪರದಾಡಿದ್ದಾರೆ. ದ್ವಿಚಕ್ರ, ಕಾರು ಸೇರಿದಂತೆ ಹಲವು ವಾಹನಗಳು ಕೆಟ್ಟು ನಿಂತಿವೆ.

ವಿದ್ಯಾರಣ್ಯಪುರದ ಅಪಾರ್ಟ್​ಮೆಂಟ್​ನ ನೆಲಮಹಡಿ ಜಲಾವೃತವಾಗಿರುವ ಹಿನ್ನೆಲೆ ಹೃದ್ರೋಗಿ ಮನೆಯಿಂದ ಹೊರಗೆ ಬರುವುದಕ್ಕೆ ಆಗದೆ ಪರದಾಡಿದ್ದಾರೆ. ಡಾಕ್ಟರ್ ಹೆಚ್ಚು ಮೆಟ್ಟಿಲು ಬಳಸಬೇಡಿ ಅಂತಾ ಹೇಳಿದ್ದಾರೆ. ಜಲಾವೃತ ಹಿನ್ನೆಲೆ ಲಿಫ್ಟ್ ಬಳಕೆಯಾಗುತ್ತಿಲ್ಲ. ಮನೆಯಿಂದ ಹೊರ ಬರಲು ಸಮಸ್ಯೆಯಾಗುತ್ತಿದೆ. ಅಧಿಕಾರಿಗಳು ಯಾವುದೇ ಸಹಾಯ ಮಾಡುತ್ತಿಲ್ಲ. ಅಪಾರ್ಟಮೆಂಟ್​ಗೆ ನುಗ್ಗಿರುವ ನೀರು ಹೊರ ಹಾಕುವುದಕ್ಕೆ ಬಿಬಿಎಂಪಿ ಅಧಿಕಾರಿಗಳು ಬರುತ್ತಿಲ್ಲ ಅಂತ ರೋಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ

ಕೋಗಿಲು ಕ್ರಾಸ್ ಬಳಿ ರಸ್ತೆ ಜಲಾವೃತ; ಬಿಬಿಎಂಪಿ ಚುನಾವಣೆ ಬಹಿಷ್ಕರಿಸಿದ ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್ ನಿವಾಸಿಗಳು

‘ರಿಷಬ್​ಗೆ ಹೀರೋಯಿನ್​ ಕೊಡಬೇಡಿ ಅಂತ ಅವರ ಪತ್ನಿ ಪ್ರಗತಿ ಶೆಟ್ಟಿ ಹೇಳಿದ್ರು’: ರಾಜ್​ ಬಿ. ಶೆಟ್ಟಿ

TV9 Kannada


Leave a Reply

Your email address will not be published. Required fields are marked *