ಬೆಟ್ಟದಿಂದ ಭುವಿಯನ್ನು ತಳ್ಳೇ ಬಿಟ್ಟ ಕಿಲ್ಲರ್; ವರುಧಿನಿಯಿಂದ ಮತ್ತಷ್ಟು ದೂರವಾದ ಹರ್ಷ | Kannadathi Serial Bhuvi Ranjani Raghavan Fell down from Hill And Saved By Varu Sara Annaiah


 ಬೆಟ್ಟದಿಂದ ಭುವಿಯನ್ನು ತಳ್ಳೇ ಬಿಟ್ಟ ಕಿಲ್ಲರ್; ವರುಧಿನಿಯಿಂದ ಮತ್ತಷ್ಟು ದೂರವಾದ ಹರ್ಷ

ಕನ್ನಡತಿ

‘ಕನ್ನಡತಿ’ ಧಾರಾವಾಹಿ (Kanndathi Serial) ಹಲವು ತಿರುವುಗಳನ್ನು ಪಡೆದುಕೊಂಡು ಸಾಗುತ್ತಿದೆ. ಹರ್ಷ ಹಾಗೂ ಭುವಿ ನಿಶ್ಚಿತಾರ್ಥ ಮಾಡಿಕೊಂಡಿರುವ ವಿಚಾರ ಸಾನಿಯಾ ಹೊಟ್ಟೆಕಿಚ್ಚನ್ನು ಮತ್ತಷ್ಟು ಹೆಚ್ಚಿಸಿದೆ. ಭುವಿಯನ್ನು ಹತ್ಯೆ ಮಾಡೋಕೆ ಕಿಲ್ಲರ್​ ಒಬ್ಬನಿಗೆ ಸುಪಾರಿ ನೀಡಿದ್ದಳು ಸಾನಿಯಾ. ಇದಕ್ಕೆ ರತ್ನಮಾಲಾಳಿಂದಲೇ ಹಣ ಪಡೆದಿದ್ದಳು. ಕಿಲ್ಲರ್ ಈ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾನೆ. ಭುವಿಯನ್ನು ಬೆಟ್ಟದಿಂದ ತಳ್ಳಿದ್ದಾಳೆ. ಆದರೆ, ಅದೃಷ್ಟವಶಾತ್ ಭುವಿ ಬದುಕಿದ್ದಾಳೆ. ಈ ಘಟನೆಯಿಂದ ವರು ಹಾಗೂ ಹರ್ಷನ ನಡುವೆ ಇದ್ದ ಅಂತರ ಮತ್ತಷ್ಟು ಹೆಚ್ಚಿದೆ.

ಭುವಿಯನ್ನು ಕೊಲ್ಲಲೇಬೇಕು ಎಂದು ಪಣ ತೊಟ್ಟವಳು ಸಾನಿಯಾ. ಇದಕ್ಕಾಗಿ ಹಣ ಹೊಂದಿಸಿ ಕಿಲ್ಲರ್​ಗೆ ನೀಡಿದ್ದಳು. ಭುವಿಯನ್ನು ಹಸಿರುಪೇಟೆಯ ಗುಡ್ಡದ ತುದಿಗೆ ಕರೆದುಕೊಂಡು ಹೋಗುವಂತೆ ವರು ಬಳಿ ಹೇಳಿದ್ದಳು ಸಾನಿಯಾ. ಈ ಕೆಲಸವನ್ನು ವರು ಮಾಡಿದ್ದಾಳೆ. ಆದರೆ, ಆಕೆಗೆ ಭುವಿಯನ್ನು ಕೊಲ್ಲಲು ಸಂಚು ನಡೆದಿದೆ ಎನ್ನುವ ವಿಚಾರ ತಿಳಿದಿರಲಿಲ್ಲ. ಭುವಿ ಹಾಗೂ ವರು ಬೆಟ್ಟದ ತುದಿಗೆ ಏರಿರುವಾಗ ಭುವಿಯನ್ನು ಬೆಟ್ಟದ ತುದಿಯಿಂದ ದೂಕಿದ್ದಾನೆ ಸುಪಾರಿ ಕಿಲ್ಲರ್​.

ಭುವಿಯನ್ನು ವರು ರಕ್ಷಣೆ ಮಾಡಿದ್ದಾಳೆ. ಇನ್ನೇನು ಬೆಟ್ಟದಿಂದ ಬಿದ್ದೇ ಬಿಟ್ಟಳು ಎನ್ನುವ ಭುವಿಯನ್ನು ವರು ಮೇಲಕ್ಕೆ ಎತ್ತಿದ್ದಾಳೆ. ಈ ವೇಳೆ ಭುವಿ ಸಂಪೂರ್ಣ ಪ್ರಜ್ಞೆ ತಪ್ಪಿದ್ದಳು. ಆಕೆಯನ್ನು ಎಚ್ಚರಿಸಬೇಕು ಎನ್ನುವ ಸಂದರ್ಭದಲ್ಲೇ ಹರ್ಷನ ಆಗಮನವಾಗಿದೆ. ಭುವಿಯನ್ನು ಈ ಸ್ಥಿತಿಯಲ್ಲಿ ನೋಡಿ ಹರ್ಷ ಕಂಗಾಲಾಗಿದ್ದಾನೆ. ಭುವಿಯನ್ನು ಎಚ್ಚರಿಸಲು ಪ್ರಯತ್ನಿಸಿದ್ದಾನೆ. ನಂತರ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾನೆ.

ಭುವಿಯನ್ನು ಹತ್ಯೆ ಮಾಡಲು ಸುಪಾರಿ ನೀಡಿರುವ ವಿಚಾರ ವರುಧಿನಿಗೆ ಗೊತ್ತಿರಲಿಲ್ಲ. ಭುವಿಯನ್ನು ಈ ಸ್ಥಿತಿಯಲ್ಲಿ ನೋಡಿ ಆಕೆಗೂ ಚಿಂತೆ ಆಗಿದೆ. ಆಸ್ಪತ್ರೆಯಲ್ಲಿ ಆಕೆ ಭುವಿಯನ್ನು ಮುಟ್ಟಲು ಹೋಗುತ್ತಾಳೆ. ಆಗ ಹರ್ಷ ಸಿಟ್ಟಾಗುತ್ತಾನೆ. ‘ಆಕೆಯನ್ನು ಮುಟ್ಟಬೇಡ. ನೀನು ಭುವಿಯ ಗೆಳತಿ. ಈ ಕಾರಣಕ್ಕೆ ನಿನ್ನ ಮೇಲೆ ನಂಬಿಕೆ ಇಟ್ಟು ಆಕೆಯನ್ನು ಕಳುಹಿಸಿದೆ. ಆದರೆ, ನೀನು ಈ ಘಟನೆಗೆಲ್ಲ ಕಾರಣವಾದೆ’ ಎಂದು ಹರ್ಷ ರೇಗಾಡಿದ್ದಾನೆ.

ಹರ್ಷನನ್ನು ಹೇಗಾದರೂ ಮಾಡಿ ಪಡೆಯಲೇಬೇಕು ಎನ್ನುವ ಹಠಕ್ಕೆ ಬಿದ್ದವಳು ವರುಧಿನಿ. ಆದರೆ, ಈಗ ನಡೆದಿರುವ ಘಟನೆಯಿಂದ ಹರ್ಷ ಹಾಗೂ ವರುಧಿನಿ ನಡುವೆ ಇದ್ದ ಅಂತರ ಮತ್ತಷ್ಟು ಹೆಚ್ಚಾಗಿದೆ. ಭುವಿಯನ್ನು ಹತ್ಯೆ ಮಾಡಲು ಸಾನಿಯಾ ಸುಪಾರಿ ನೀಡಿದ್ದಳು ಎನ್ನುವ ವಿಚಾರ ವರುಗೆ ಗೊತ್ತಾಗಲಿದೆಯೇ? ಗೊತ್ತಾದರೆ ಆಕೆ ಹೇಗೆ ಪ್ರತಿಕ್ರಿಯಿಸುತ್ತಾಳೆ ಎಂಬುದನ್ನು ಕಾದು ನೋಡಬೇಕಿದೆ.

TV9 Kannada


Leave a Reply

Your email address will not be published. Required fields are marked *