ಬೆಂಗಳೂರು: ಬೆಡ್ ಸಿಗದೆ ಜನ ನರಳಾಡುತ್ತಿದ್ದಾರೆ, ಏನೇ ಕಸರತ್ತು ಮಾಡಿದರೂ ಜನ ಸಾಮಾನ್ಯರಿಗೆ ಬೆಡ್ ಸಿಗುತ್ತಿಲ್ಲ. ಈ ಹಿನ್ನೆಲೆ ಜನ ರೋಸಿ ಹೋಗಿದ್ದಾರೆ. ಅದೇ ರೀತಿ ಕೊರೊನಾ ಸೋಂಕಿತ ಪತಿಗೆ ಬೆಡ್ ಸಿಗದ್ದಕ್ಕೆ ಪತ್ನಿ ಗೋಳಾಡುತ್ತಿದ್ದು, ಸಿಎಂ ಮನೆ ಬಳಿ ಪ್ರತಿಭಟನೆ ನಡೆಸಿದ್ದಾರೆ. ಆರಂಭದಲ್ಲಿ ಅವರನ್ನು ಸಾಗಾಹಾಕಲು ಪೊಲೀಸರು ಸಮಯ ವ್ಯರ್ಥ ಮಾಡಿದ್ದು, ಮಾಧ್ಯಮದವರು ಆಗಮಿಸುತ್ತಿದ್ದಂತೆ ರಾಮಯ್ಯ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಮಾಡಿದ್ದಾರೆ. ಆದರೆ ಆಸ್ಪತ್ರೆಗೆ ಕರೆದೊಯ್ಯುವಾಗ ಸೋಂಕಿತ ಸಾವನ್ನಪ್ಪಿದ್ದಾರೆ.

ಬೆಡ್ ಸಿಗುತ್ತಿಲ್ಲವೆಂದು ಅಂಬುಲೆನ್ಸ್ ನಲ್ಲಿ ಕೋವಿಡ್ ಸೋಂಕಿತ ಪತಿಯನ್ನು ಕರೆದುಕೊಂಡು ಬಂದು ಪತ್ನಿ ಸಿಎಂ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಎಲ್ಲಿ ಹೋದರೂ ಬೆಡ್ ಸಿಗುತ್ತಿಲ್ಲ ಎಂದು ಸಿಎಂ ನಿವಾಸ ಕಾವೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ರಾಮೋಹಳ್ಳಿಯ ಸತೀಶ್ (45) ಅವರಿಗೆ ಕೋವಿಡ್ ಬಂದಿದೆ. ಸಿಎಂ ನಿವಾಸ ಮುಂದೆ ಆಗಮಿಸಿ ನಮಗೆ ಬೆಡ್ ಬೇಕು ಎಂದು ಅಳಲು ತೊಡಿಕೊಂಡಿದ್ದಾರೆ. ರೋಗಿ ಸತೀಶ್ ಪತ್ನಿ ಸಿಎಂ ನಿವಾಸದ ಮುಂದೆ ಗೇಟ್ ಬಳಿ ಕೂತು ಕಣ್ಣೀರು ಹಾಕಿದ್ದಾರೆ.

ಹೋಮ್ ಐಸೋಲೇಷನ್ ನಲ್ಲಿದ್ದ ಪಾಸಿಟಿವ್ ರೋಗಿ ಸತೀಶ್ ಗೆ ರಾತ್ರಿ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದೆ. ರಾತ್ರಿ 1 ಗಂಟೆಯಿಂದ ಕುಟುಂಬಸ್ಥರು ಹತ್ತು ಆಸ್ಪತ್ರೆ ಸುತ್ತಿದ್ದು, ಎಲ್ಲೂ ಬೆಡ್ ಸಿಕಿಲ್ಲ ಎಂದು ರಾಜ್ಯದ ದೊರೆ ಮನೆ ಮುಂದೆಯೇ ಬಂದು ಪ್ರತಿಭಟನೆ ಮಾಡಿದ್ದಾರೆ. ನಮ್ಮ ಕೆಲಸ ನಾವು ಮಾಡಬೇಕು ಎಂದು ರೋಗಿ, ರೋಗಿ ಕುಟುಂಬಸ್ಥರನ್ನು ಸಾಗ ಹಾಕಲು ಪೊಲೀಸರು ಮುಂದಾಗಿದ್ದಾರೆ. ಬೆಡ್ ಸಿಗದ ಹೊರತು ಇಲ್ಲಿಂದ ಹೋಗಲ್ಲ ಎಂದು ರೋಗಿ ಬಾಮೈದ ಪಟ್ಟು ಹಿಡಿದಿದ್ದಾರೆ. ನಮ್ಮ ಕೆಲಸ ನಾವು ಮಾಡುತ್ತೇವೆ ಎಂದು ಹೇಳಿ ಪೊಲೀಸರು ಅವರನ್ನು ಕಳುಹಿಸಲು ಮುಂದಾಗಿದ್ದಾರೆ. ಮಾಧ್ಯಮದವರು ಪ್ರಶ್ನೆ ಮಾಡಿದ ಬಳಿಕ ರಾಮಯ್ಯ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಮಾಡಿದ್ದಾರೆ.

ತಕ್ಷಣವೇ ರೋಗಿಯನ್ನು ರಾಮಯ್ಯ ಆಸ್ಪತ್ರೆಗೆ ಕಳುಹಿಸಲಾಗಿದೆ. ರಾಮನಗರ ಜಿಲ್ಲೆ ಚಿಕ್ಕಲ್ಲೂರಿನ ಸತೀಶ್ ಹಾಗೂ ಅವರ ಪತ್ನಿ ಮಂಜುಳಾ ಅವರನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ದಾರಿ ಮಧ್ಯೆಯೇ ರೋಗಿ ಸತೀಶ್ ಸಾವನ್ನಪ್ಪಿದ್ದಾರೆ. ರಾಮಯ್ಯ ಆಸ್ಪತ್ರೆಗೆ ಕರೆದೊಯ್ದಾಗ ರೋಗಿ ಸತ್ತಿರುವ ಕುರಿತು ವೈದ್ಯರು ತಿಳಿಸಿದ್ದಾರೆ. ಈ ಸಾವಿಗೆ ಯಾರು ಹೊಣೆ ಎಂದು ಕುಟುಂಬಸ್ಥರು ಪ್ರಶ್ನಿಸುತ್ತಿದ್ದಾರೆ.

The post ಬೆಡ್ ಕೊಡಿಸುವಂತೆ ಸಿಎಂ ಮನೆ ಬಳಿ ರೋಗಿ ಸಮೇತ ಪತ್ನಿ ಪ್ರತಿಭಟನೆ- ಆಸ್ಪತ್ರೆ ಸಾಗಿಸುವಷ್ಟರಲ್ಲಿ ಸಾವು appeared first on Public TV.

Source: publictv.in

Source link