ಬೆಂಗಳೂರು: ನಿನ್ನೆ ಸಂಸದ ತೇಜಸ್ವಿ ಸೂರ್ಯ, ಬೆಂಗಳೂರಿನಲ್ಲಿ ಬೆಡ್​ ಬ್ಲಾಕಿಂಗ್ ದಂಧೆಯನ್ನ ಬಯಲಿಗೆಳೆದಿದ್ದು, ಈ ಸಂಬಂಧ ಬಿಜೆಪಿ ಕಾಂಗ್ರೆಸ್​ ವಿರುದ್ಧ ಹರಿಹಾಯ್ದಿದೆ.

ಹಗರಣದ ಸಂಬಂಧ ಬಂಧಿತಳಾಗಿರೋ ಮಹಿಳೆ, ಕಾಂಗ್ರೆಸ್​ ಕಾರ್ಯಕರ್ತೆ ಎಂದು ಬಿಜೆಪಿ ಹೇಳಿದೆ. ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಈ ದಂಧೆ ಬಗ್ಗೆ ಯಾಕೆ ತುಟಿ ಬಿಚ್ಚಿಲ್ಲ? ಸಂಕಷ್ಟ ಕಾಲದಲ್ಲಿ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ರೂಪಿಸಿದ ಸಂಚಿನಲ್ಲಿ ಕಾಂಗ್ರೆಸ್​ನ ಎಲ್ಲರೂ ಭಾಗಿಯಾಗಿದ್ದಾರಾ ಎಂದು  ಕಮಲಪಾಳಯ ಪ್ರಶ್ನೆ ಮಾಡಿದೆ. 

ಸದಾ ಸುಳ್ಳು ಹೇಳುವ ಬುರುಡೆರಾಮಯ್ಯ ಅವರೇಕೆ ಬೆಡ್ ಬುಕ್ಕಿಂಗ್ ಹಗರಣದ ಬಗ್ಗೆ ತುಟಿ ಬಿಚ್ಚಿಲ್ಲ? ಇಂಥಹ ಅಮಾನವೀಯ ಹಗರಣದಲ್ಲಿ ಭಾಗಿಯಾದವರ ಬಗ್ಗೆ ಮೌನ ವಹಿಸಿ ಜಾತ್ಯತೀತ ನಾಯಕನ ಪಟ್ಟ ಕಾಯ್ದುಕೊಳ್ಳುವ ಹವಣಿಕೆಯೇ? ಅಥವಾ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಆರೋಪಿ ಕಾಂಗ್ರೆಸ್ ಕಾರ್ಯಕರ್ತೆ ಎಂಬ ಮಮಕಾರವೇ? ಉತ್ತರಿಸುವಿರಾ ಎಂದು ಬಿಜೆಪಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್​ ಮಾಡಿ ಪ್ರಶ್ನಿಸಿದೆ. 

ಬಿಬಿಎಂಪಿ ಬೆಡ್ ಬುಕ್ಕಿಂಗ್ ಹಗರಣದ ಆರೋಪಿಗೆ ಕಾಂಗ್ರೆಸ್​ ಪಕ್ಷದ ಬಹುತೇಕ ನಾಯಕರ ನಂಟಿದೆ. ಇವರೆಲ್ಲರೂ ಹೆಣದ ಮೇಲೆ ರಾಜಕಾರಣ ನಡೆಸುವ ರಣಹದ್ದುಗಳು. ಸಮಯ ಸಿಕ್ಕಾಗಲೆಲ್ಲ ನೈತಿಕತೆಯ ಪಾಠ ಮಾಡುವ ಸಿದ್ದರಾಮಯ್ಯ, ಈಗೇಕೆ ಮೌನ? ಸಂಕಷ್ಟ ಕಾಲದಲ್ಲಿ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ರೂಪಿಸಿದ ಸಂಚಿನಲ್ಲಿ ಕಾಂಗ್ರೆಸಿಗರೆಲ್ಲರೂ ಭಾಗೀದಾರರೇ? ಎಂದು ಬಿಜೆಪಿ ಆರೋಪಿಸಿದೆ.

ಬಿಬಿಎಂಪಿ ಪೋರ್ಟಲ್ ಮೂಲಕ ಬೆಡ್ ಬ್ಲಾಕಿಂಗ್ ಮಾಡುತ್ತಿದ್ದ ಪ್ರಕರಣದ ಬಗ್ಗೆ ಜಯನಗರ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ಇಬ್ಬರನ್ನ ಜಯನಗರ ಪೊಲೀಸರು ಬಂಧಿಸಿದ್ದಾರೆ. ಸದ್ಯ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್​ಪಂತ್ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನ ಸಿಸಿಬಿಗೆ ವರ್ಗಾಯಿಸಿದ್ದಾರೆ.

ಇದನ್ನೂ ಓದಿ: ಜನ ಸಾಯ್ತಿದ್ರೂ ಬೆಡ್​ಗಳ ಬ್ಲಾಕಿಂಗ್; ಬ್ರಹ್ಮಾಂಡ ದಂಧೆ ಬಯಲಿಗೆಳೆದ ತೇಜಸ್ವಿ ಸೂರ್ಯ, ಸತೀಶ್ ರೆಡ್ಡಿ ಟೀಂ

 

The post ‘ಬೆಡ್ ಬುಕ್ಕಿಂಗ್ ಹಗರಣ ಆರೋಪಿ ಕೈ ಕಾರ್ಯಕರ್ತೆ, ದಂಧೆ ಬಗ್ಗೆ ಸಿದ್ದರಾಮಯ್ಯ ಯಾಕೆ ತುಟಿ ಬಿಚ್ಚಿಲ್ಲ?’ -ಬಿಜೆಪಿ ಪ್ರಶ್ನೆ appeared first on News First Kannada.

Source: newsfirstlive.com

Source link