ಬೆಣ್ಣೆ ನಗರಿಯಲ್ಲಿ ಕೊಲೆ; ಖಾಲಿ ಸೈಟ್ನಲ್ಲಿ ತಮ್ಮನ ಶವ ಪತ್ತೆ, ನಿಶ್ಚಿತಾರ್ಥ ಆಗಬೇಕಿದ್ದ ಅಣ್ಣ ಇನ್ನೂ ನಾಪತ್ತೆ | Brother found dead and another brother missing in davanagere


ಬೆಣ್ಣೆ ನಗರಿಯಲ್ಲಿ ಕೊಲೆ; ಖಾಲಿ ಸೈಟ್ನಲ್ಲಿ ತಮ್ಮನ ಶವ ಪತ್ತೆ, ನಿಶ್ಚಿತಾರ್ಥ ಆಗಬೇಕಿದ್ದ ಅಣ್ಣ ಇನ್ನೂ ನಾಪತ್ತೆ

ಅಲ್ತಾಫ್ ಮತ್ತು
ಮೃತ ಇಬ್ರಾಹಿಂ

ದಾವಣಗೆರೆ: ಮನೆಯಲ್ಲಿ ಮದುವೆ ಸಂಭ್ರಮ ಮನೆಮಾಡಿತ್ತು. ನಿಶ್ಚಿತಾರ್ಥಕ್ಕೆ ಸಿದ್ಧತೆಯೂ ಶುರುವಾಗಿತ್ತು. ಆದ್ರೆ ವಿಧಿ ಕುಟುಂಬಸ್ಥರಿಗೆ ಶಾಕ್ ಕೊಟ್ಟಿದೆ. ಮದುಮಗ ನಾಪತ್ತೆಯಾಗಿದ್ರೆ, ಆತನ ಜೊತೆಗಿದ್ದ ಸಹೋದರ ಶವವಾಗಿ ಪತ್ತೆಯಾಗಿರೋದು ಮನೆಯವರು ಕಣ್ಣೀರಲ್ಲಿ ಕೈತೊಳೆಯುವಂತೆ ಮಾಡಿದೆ.

ಖಾಲಿ ಸೈಟ್ನಲ್ಲಿ ತಮ್ಮನ ಶವ ಪತ್ತೆ, ಅಣ್ಣ ಇನ್ನೂ ನಾಪತ್ತೆ
ಅಲ್ತಾಫ್ ಮತ್ತು ಇಬ್ರಾಹಿಂ ಎಂಬ ಸಹೋದರ ಪೈಕಿ ಒಬ್ಬ ಶವವಾಗಿ ಪತ್ತೆಯಾದ್ರೆ, ಇನ್ನೊಬ್ಬ ನಾಪತ್ತೆಯಾಗಿದ್ದಾನೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ರೆ ನಿನ್ನೆಯೇ ಈ ಅಲ್ತಾಫ್ನ ನಿಶ್ಚಿತಾರ್ಥ ನೆರವೇರಬೇಕಿತ್ತು. ಮಾರ್ಚ್ 21ರಂದು ಮದುವೆಯೂ ಫಿಕ್ಸ್ ಆಗಿತ್ತು. ಆದ್ರೆ ವಿಧಿಯಾಟದಲ್ಲಿ ಆಗಿದ್ದು ಮಾತ್ರ ಬೇರೆ. ಮದುವೆಗಾಗಿ ಬಟ್ಟೆ ಖರೀದಿಗೆ ಹರಿಹರದಿಂದ ದಾವಣಗೆರೆಗೆ ಬಂದಿದ್ದ ಈ ಸಹೋದರರ ಪೈಕಿ ಇಬ್ರಾಹಿಂ ಶವವಾಗಿ ಪತ್ತೆಯಾಗಿದ್ರೆ, ಮದುಮಗ ಅಲ್ತಾಫ್ ನಾಪತ್ತೆಯಾಗಿದ್ದಾನೆ. ಹೀಗಾಗಿ ಇದೊಂದು ಡಬಲ್ ಮರ್ಡರ್ ಅನ್ನೋ ಸಂಶಯ ವ್ಯಕ್ತವಾಗ್ತಿದೆ.

ಅಷ್ಟಕ್ಕೂ ಈ ರೀತಿ ಸಂಶಯ ವ್ಯಕ್ತವಾಗ್ತಿರೋದಕ್ಕೂ ಕಾರಣ ಇದೆ. ಮಂಗಳವಾರ ಅಂದ್ರೆ ಜನವರಿ 18 ರಂದು ದಾವಣಗೆರೆ ಬಂದಿದ್ದ ಈ ಸಹೋದರರು, ಬಟ್ಟೆ ಅಂಗಡಿಯಿಂದ ಸಹೋದರಿಗೆ ವಿಡಿಯೋ ಕಾಲ್ ಮಾಡಿದ್ರು. ನಿಶ್ಚಿತಾರ್ಥಕ್ಕೆ ಖರೀದಿಸಿದ ಬಟ್ಟೆಯನ್ನೂ ತೋರಿಸಿದ್ರು. ಆದ್ರೆ ಆ ಬಳಿಕ ರಾತ್ರಿ 9 ಗಂಟೆ ಸುಮಾರಿಗೆ ಅವರ ಮೊಬೈಲ್ ಆಫ್ ಆಗಿದೆ. ಫೋನ್ ಮಾಡಿ ಸುಸ್ತಾದ ಸಂಬಂಧಿಕರು ಅವತ್ತೇ ಹರಿಹರ ನಗರ ಠಾಣೆಯಲ್ಲಿ ಮಿಸ್ಸಿಂಗ್ ದೂರು ಕೂಡ ದಾಖಲಿಸಿದ್ರು. ಆ ಬಳಿಕವೂ ಸಹೋದರರಿಗೆ ಹುಡುಕಾಟ ನಡೆಸಲಾಗಿದ್ದು, ದಾವಣಗೆರೆ ಮಹಾಲಕ್ಷ್ಮಿ ಬಡಾವಣೆಯ ಖಾಲಿ ಸೈಟ್ನಲ್ಲಿ ಇಬ್ರಾಹಿಂನ ಶವ ಪತ್ತೆಯಾಗಿದೆ. ಆದ್ರೆ ಅಣ್ಣ ಅಲ್ತಾಫ್ನ ಸುಳಿವು ಮಾತ್ರ ಸಿಗದಿರೋ ಕಾರಣ ಇದೊಂದು ಡಬಲ್ ಮರ್ಡರ್ ಎಂಬ ಶಂಕೆ ವ್ಯಕ್ತವಾಗಿದೆ.

ಇನ್ನು ಸಹೋದರರಿಬ್ಬರೂ ಹರಿಹರ ನಗರದ ವಿಜಯನಗರ ಬಡಾವಣೆ ನಿವಾಸಿಗಳಾಗಿದ್ದು, ಇವರದ್ದು ಸ್ಥಿತಿವಂತ ಕುಟುಂಬ. ಹೀಗಾಗಿ ಹಣಕ್ಕಾಗಿ ಕೊಲೆ ನಡೆದಿರಬಹುದೆಂಬ ಅನುಮಾನವೂ ವ್ಯಕ್ತವಾಗಿದೆ. ಅದೇನೇ ಇದ್ರೂ ಸದ್ಯ ಪ್ರಕರಣ ದಾಖಲಿಸಿಕೊಂಡಿರೋ ಖಾಕಿ ತನಿಖೆ ಆರಂಭಿಸಿದೆ. ಮೊಬೈಲ್ ಕಾಲ್ ಮಾಹಿತಿ ಆಧಾರದಲ್ಲಿ ಆರೋಪಿಗಳಿಗೆ ಬಲೆ ಬೀಸಲಾಗಿದ್ದು, ಅಲ್ತಾಫ್ ಏನಾದ ಅನ್ನೋದು ತನಿಖೆ ಬಳಿಕವೇ ಗೊತ್ತಾಗಬೇಕಿದೆ.

ವರದಿ: ಬಸವರಾಜ್ ದೊಡ್ಮನಿ ಟಿವಿ, ದಾವಣಗೆರೆ

TV9 Kannada


Leave a Reply

Your email address will not be published. Required fields are marked *