ಬೆಂಗಳೂರು: ದೀಪಾವಳಿ..ಬೆಳಕಿನ ಹಬ್ಬ. ಅಂಧಕಾರ ಸರಿದು ಮನೆ-ಮನಗಳಲ್ಲಿ ಖಷಿಯ ಬೆಳಕು ಹರಡಲಿ ಅಂತಾ ಸಂಭ್ರಮದಿಂದ ದೀಪಾವಳಿ ಹಬ್ಬ ಆಚರಿಸಲಾಗುತ್ತದೆ. ದೀಪಾವಳಿಯ ಹಬ್ಬದ ಪ್ರಮುಖ ಅಟ್ರ್ಯಾಕ್ಷನ್ ಅಂದ್ರೆ ಅದು ಪಟಾಕಿ. ಅದ್ರಲ್ಲೂ ಮಕ್ಕಳಿಗೆ ಪಟಾಕಿಗಳಂದ್ರೆ ಎಲ್ಲಿಲ್ಲದ ಖುಷಿ. ಆದರೆ ಪ್ರತಿ ವರ್ಷದಂತೆ ಈ ವರ್ಷವೂ ಪಟಾಕಿ ಸಿಡಿಸೋವಾಗ ಆದ ಅಜಾಗರೂಕತೆಗೆ ಮಕ್ಕಳು ಭಾರೀ ಬೆಲೆ ತೆರುತ್ತಿದ್ದಾರೆ.
ಕತ್ತಲಿನಿಂದ ಬೆಳಕಿನೆಡೆೆಗೆ ನಮ್ಮನ್ನು ಕೊಂಡೊಯ್ಯಬೇಕಾದ ಹಬ್ಬ ದೀಪಾವಳಿ. ಆದ್ರೆ, ಈ ಬೆಳಕಿನ ಹಬ್ಬದಂದೇ 30ಕ್ಕೂ ಅಧಿಕ ಜನರ ಬಾಳು ಕತ್ತಲಾಗಿವೆ. ನಿರ್ಲಕ್ಷ್ಯದಿಂದ ಸಿಡಿಸಿರೋ ಪಟಾಕಿಯ ಸಿಡಿಮದ್ದು ಕಣ್ಣುಗಳಲ್ಲಿ ಬಿದ್ದ ಪರಿಣಾಮ ಅಮಾಯಕರ ಕಣ್ಣುಗಳಿಗೆ ಹಾನಿಯಾಗಿದೆ.

ಹೆಚ್ಚಿನ ಪ್ರಕರಣಗಳು ಸಣ್ಣ ಮಕ್ಕಳಲ್ಲೇ ದಾಖಲು
ಈ ವರ್ಷ ಪಟಾಕಿಯಿಂದ 30ಕ್ಕೂ ಹೆಚ್ಚು ಜನರಿಗೆ ದೃಷ್ಟಿ ಸಮಸ್ಯೆ ಉಂಟಾಗಿದೆ. ಮಿಂಟೋ ಆಸ್ಪತ್ರೆಯಲ್ಲಿ 23ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದರೆ, ನಾರಾಯಣ ನೇತ್ರಾಲಯದಲ್ಲಿ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಹೆಚ್ಚಿನ ಪ್ರಕರಣಗಳು ಸಣ್ಣ ಮಕ್ಕಳಲ್ಲೇ ದಾಖಲಾಗಿದ್ದು, 6 ರಿಂದ 14 ವರ್ಷದ ಮಕ್ಕಳ ಕಣ್ಣಿಗೆ ಪಟಾಕಿಯಿಂದ ಅತಿ ಹೆಚ್ಚು ಹಾನಿಯಾಗಿದೆ. ಬಿಜಲಿ, ಭೂಚಕ್ರ, ಫ್ಲವರ್ ಪಾಟ್ಗಳಿಂದ ಕಣ್ಣಿಗೆ ಹೆಚ್ಚಿನ ಹಾನಿಯಾಗಿದೆ.
ಇನ್ನು ಮಿಂಟೋ ಆಸ್ಪತ್ರೆಗೆ ದಾಖಲಾದ ಮಕ್ಕಳ ಪೈಕಿ ಇಬ್ಬರಿಗೆ ಮತ್ತೆ ದೃಷ್ಟಿ ಮರಳುವುದೇ ಸಂಶಯ ಅಂತಾ ವೈದ್ಯರು ಹೇಳಿದ್ದಾರೆ. ಮಗ ಹಠ ಮಾಡಿದ್ರಿಂದ ಪಟಾಕಿ ಸಿಡಿಸಬೇಕಾಯ್ತು. ಈಗ ಅವನ ಕಣ್ಣಿಗೆ ತೊಂದರೆಯಾಗಿದೆ ಅಂತಾ ಪೋಷಕರೊಬ್ಬರು ಬೇಸರ ವ್ತಕ್ತಪಡಿಸಿದ್ದಾರೆ.