ಬೆಳಗಾವಿಯಲ್ಲಿ ಮತ್ತೆ ಕನ್ನಡ ನಾಮಫಲಕಕ್ಕೆ ಮಸಿ | Ink Thrown to Kannada Board in Belagavi Threat of Creating Tension in Maharashtra Border


ಬೆಳಗಾವಿಯಲ್ಲಿ ಮತ್ತೆ ಕನ್ನಡ ನಾಮಫಲಕಕ್ಕೆ ಮಸಿ

ಬೆಳಗಾವಿ ಜಿಲ್ಲೆಯಲ್ಲಿ ಕನ್ನಡ ಅಕ್ಷರಗಳಿಗೆ ಮಸಿ ಬಳಿಯಲಾಗಿದೆ.

ಬೆಳಗಾವಿ: ಬೆಳಗಾವಿಯಲ್ಲಿ ಈಗ ಮತ್ತೆ ಕಿಡಿಗೇಡಿಗಳು ಶಾಂತಿ ಕದಡುವ ಕೆಲಸ ಮಾಡಿದ್ದು, ಕನ್ನಡ ನಾಮಫಲಕಕ್ಕೆ ಮಸಿ ಬಳಿಯುವ ಮೂಲಕ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲು ಹುನ್ನಾರ ಮಾಡಿದ್ದಾರೆ. ತಾಲೂಕಿನ ಕಂಗ್ರಾಳಿ ಕೆ.ಎಚ್.ಗ್ರಾಮದ ರಸ್ತೆ ಮಾರ್ಗದಲ್ಲಿ ಇರುವ ರಸ್ತೆಸಂಚಾರ ಜಾಗೃತಿ ಮೂಡಿಸುವ ಫಲಕಕ್ಕೆ ಕಿಡಿಗೇಡಿಗಳು ಕಪ್ಪುಮಸಿ ಬಳಿದಿದ್ದಾರೆ. ಲೋಕೋಪಯೋಗಿ ಇಲಾಖೆ ಅಳವಡಿಸಿದ್ದ ಈ ನಾಮಫಲಕಕ್ಕೆ ಕಿಡಿಗೇಡಿಗಳು ಮಸಿ ಬಳಿಯುವ ಮೂಲಕ ಬೆಳಗಾವಿಯಲ್ಲಿ ಮತ್ತೆ ಅಶಾಂತಿ ಹುಟ್ಟುಹಾಕುವ ಹುನ್ನಾರ ನಡೆಸಲಾಗಿದೆ ಎಂಬ ಆತಂಕ ವ್ಯಕ್ತವಾಗಿದೆ.

ಸುವರ್ಣ ವಿಧಾನಸೌಧದಲ್ಲಿ ವಿಧಾನಮಂಡಲ ಚಳಿಗಾಲದ ಅಧಿವೇಶನ ನಡೆಯುವ ವೇಳೆ ಬೆಳಗಾವಿಯಲ್ಲಿ ವಾಹನಗಳ ಕಲ್ಲುತೂರಾಟ ನಡೆಸಲಾಗಿತ್ತು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೂ ಅವಮಾನ ಮಾಡಲಾಗಿತ್ತು. ಬೆಳಗಾವಿಯಲ್ಲಿ ಎಂಇಎಸ್​ ಕಾರ್ಯಕರ್ತರು ನಡೆಸಿದ ಆಟಾಟೋಪಕ್ಕೆ ಕರ್ನಾಟಕದ ಇತರ ಜಿಲ್ಲೆಗಳಲ್ಲಿಯೂ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.

ಬೆಳಗಾವಿಯಲ್ಲಿ ಕರ್ನಾಟಕ ಸರ್ಕಾರವು ವಿಧಾನಮಂಡಲ ಅಧಿವೇಶನ ನಡೆಸುವಾಗ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಹಲವು ರೀತಿಯಲ್ಲಿ ತೊಂದರೆ ನೀಡಲು ಮುಂದಾಗಿತ್ತು. ಎಂಇಎಸ್ ಆಯೋಜಿಸಲು ಉದ್ದೇಶಿಸಿದ್ದ ಮಹಾಮೇಳಾವಕ್ಕೆ ಕರ್ನಾಟಕ ಸರ್ಕಾರ ಅನುಮತಿ ನೀಡಿರಲಿಲ್ಲ. ಪರ-ವಿರೋಧ ಪ್ರತಿಭಟನೆಗಳು ಹಾಗೂ ಎಂಇಎಸ್​ ನಾಯಕ ದೀಪಕ್ ದಳವಿಗೆ ಮಸಿ ಎರಚಿದ ಘಟನೆಯೂ ವರದಿಯಾಗಿತ್ತು. ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಬಂದ್​ಗೆ ಕರೆ ನೀಡಿದ್ದವು. ಕೊನೇ ಗಳಿಗೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಧ್ಯಪ್ರವೇಶದಿಂದ ಬಂದ್ ಕರೆಯನ್ನು ಹಿಂಪಡೆದ ಅಂಶವನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

TV9 Kannada


Leave a Reply

Your email address will not be published. Required fields are marked *