ಬೆಳಗಾವಿ: ಮಹಾರಾಷ್ಟ್ರ ಹಾಗೂ ಕೃಷ್ಣಾ ನದಿ ಅಚ್ಚು ಕಟ್ಟು ಪ್ರದೇಶದಲ್ಲಿ ಮಳೆಯ ಅಬ್ಬರ ಮುಂದುವರೆದ ಪರಿಣಾಮ ಕೃಷ್ಣಾ ನದಿ ನೀರಿನ ಪ್ರಮಾಣದಲ್ಲಿ ಭಾರಿ ಏರಿಕೆ ಕಂಡಿದೆ.

ಕೃಷ್ಣಾ, ದೂದಗಂಗಾ, ವೇದಗಂಗಾ, ಹೀರಣ್ಯಕೇಶಿ ನದಿಗಳ ನೀರಿನ ಮಟ್ಟದಲ್ಲಿ ಭಾರೀ ಏರಿಕೆ ಕಂಡಿದ್ದು ಪ್ರವಾಹ ಭೀತಿ ಉಂಟು ಮಾಡಿದೆ. ಈಗಾಗಲೇ ಚಿಕ್ಕೋಡಿ, ನಿಪ್ಪಾಣಿ, ಹುಕ್ಕೇರಿ ತಾಲೂಕುಗಳ 8 ಸೇತುವೆಗಳು ಜಲಾವೃತಗೊಂಡಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಇನ್ನು ಕೃಷ್ಣಾ ನದಿಗೆ 70 ಸಾವಿರ ಕ್ಯೂಸೆಕ್ ಪ್ರಮಾಣದ ಒಳ ಹರಿವು ಹೆಚ್ಚಾದ್ದರಿಂದ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಯಡೂರು – ಕಲ್ಲೋಳ ಸೇತುವೆ ಜಲಾವೃತಗೊಂಡಿದೆ.

ಇದನ್ನೂ ಓದಿ: ಬೆಳಗಾವಿ ಸ್ಮಾರ್ಟ್​ ಸಿಟಿ ಅವಾಂತರ: ಕಬ್ಬಿಣದ ರಾಡ್​ ಹೊಕ್ಕು ವೃದ್ಧ ಸಾವು

ದೂದಗಂಗಾ, ವೇದಗಂಗಾ ಹಾಗೂ ಹೀರಣ್ಯಕೇಶಿ ನದಿಗಳಿಗೆ ಅಡ್ಡಲಾಗಿ ನಿರ್ಮಿಸಿರುವ ಜತ್ರಾಟ- ಭೀವಶಿ, ಭೋಜ – ಕಾರದಗಾ, ಅಕ್ಕೋಳ – ಸಿದ್ನಾಳ, ನಾಗನೂರು – ಗೋಟೂರ, ಹುನ್ನರಗಿ-ಮಮದಾಪೂರ, ಭೋಜವಾಡಿ- ಕುನ್ನೂರ, ಮಲಿಕವಾಡ – ದತ್ತವಾಡ ಸೇತುವೆಗಳು‌ ಮುಳುಗಡೆ ಹೊಂದಿವೆ.

16 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಈ ಸೇತುವೆಗಳು ಮುಳುಗಡೆಯಾದ ಪರಿಣಾಮ ಜನ ಸಂಚಾರ ಬಂದ್​ ಆಗಿದ್ದು, ಪರ್ಯಾಯ ಮಾರ್ಗಗಳ‌ ಮೂಲಕ ಜನರು ಸಂಚಾರ ಮಾಡುತ್ತಿದ್ದಾರೆ. ನದಿ ತೀರದ ಜನರಲ್ಲಿ ಪ್ರವಾಹ ಭೀತಿ ಎದುರಾಗುವ ಆತಂಕ ಹಿನ್ನೆಲೆಯಲ್ಲಿ ನದಿ ಪಾತ್ರದ ಜನರಿಗೆ ಜಿಲ್ಲಾಡಳಿತ ಸುರಕ್ಷಿವಾಗಿ ಇರುವಂತೆ ಎಚ್ಚರಿಕೆ ನೀಡಿದ್ದು, ನದಿ ತೀರದ ಪ್ರದೇಶದಲ್ಲಿ ಜಿಲ್ಲಾಡಳಿತ ಹೈ ಅಲರ್ಟ ಘೋಷಣೆ ಮಾಡಿದೆ.

The post ಬೆಳಗಾವಿಯಲ್ಲಿ ಮುಂದುವರೆದ ಮಳೆಯ ಅಬ್ಬರ: ಕೃಷ್ಣಾ ನದಿ ತೀರದಲ್ಲಿ ಹೈ ಅಲರ್ಟ್​ appeared first on News First Kannada.

Source: newsfirstlive.com

Source link